ಪತ್ರಕರ್ತನ ಮೇಲೆ ಹಲ್ಲೆ ಆರೋಪ: ನಟ ಮೋಹನ್ ಬಾಬು ಬಂಧಿಸದಂತೆ ಮಧ್ಯಂತರ ರಕ್ಷಣೆ ನೀಡಿದ ಸುಪ್ರೀಂ

ಮೋಹನ್‌ಬಾಬು ಪುತ್ರ ಹಾಗೂ ನಟ ಮಂಚು ಮನೋಜ್ ಅವರ ಕೋರಿಕೆ ಹಿನ್ನೆಲೆಯಲ್ಲಿ ಮೋಹನ್‌ಬಾಬು ಮನೆಗೆ ಹೋಗಿದ್ದ ಪತ್ರಕರ್ತ ಪ್ರಶ್ನೆಯೊಂದನ್ನು ಕೇಳಿದಾಗ ಮೋಹನ್‌ಬಾಬು ಥಳಿಸಿದ ಆರೋಪ ಕೇಳಿಬಂದಿತ್ತು.
Mohan Babu
Mohan Babu Facebook
Published on

ಟಿವಿ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ತೆಲುಗು ನಟ, ರಾಜಕಾರಣಿ ಮೋಹನ್ ಬಾಬು ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ ಗುರುವಾರ ಮಧ್ಯಂತರ ರಕ್ಷಣೆ ನೀಡಿದೆ.

ತೆಲಂಗಾಣ ಹೈಕೋರ್ಟ್ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದನ್ನು ಪ್ರಶ್ನಿಸಿ ಮೋಹನ್‌ಬಾಬು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರಿದ್ದ ಪೀಠ ಈ ಆದೇಶ ನೀಡಿದೆ.

Also Read
ಮಾಧ್ಯಮ ವೃತ್ತಿಪರ ವಿನಯ್ ಮಹೇಶ್ವರಿ ಕುರಿತ ಟ್ವೀಟ್ ಅಳಿಸುವಂತೆ ತೆಲುಗು ನಟ ಮಂಚು ಮನೋಜ್‌ಗೆ ದೆಹಲಿ ಹೈಕೋರ್ಟ್ ಆದೇಶ

“ಮುಂದಿನ ಆದೇಶದವರೆಗೆ ಯಾವುದೇ ಬಲವಂತದ ಕ್ರಮ ಕೈಗೊಳ್ಳುವಂತಿಲ್ಲ. ಪ್ರತಿಕ್ರಿಯೆ ಸಲ್ಲಿಸಬೇಕು. ನಾಲ್ಕು ವಾರಗಳ ನಂತರ ಪ್ರಕರಣ ಪಟ್ಟಿ ಮಾಡಿ” ಎಂದು ನ್ಯಾಯಾಲಯ ಆದೇಶಿಸಿದೆ.

ಮೋಹನ್‌ಬಾಬು ಮತ್ತು ಅವರ ಕಿರಿಯ ಪುತ್ರ ಮಂಚು ಮನೋಜ್‌ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದಗಳೆದ್ದಿದ್ದು ಮೋಹನ್‌ ಬಾಬು ಅವರ ಮನೆಯಲ್ಲೇ ಉಳಿದಿದ್ದ ಮಂಚು ಮನೋಜ್‌ ಅವರ ಮೇಲೆ ಮೋಹನ್‌ಬಾಬು ಅವರ ಮ್ಯಾನೇಜರ್‌ ಹಾಗೂ ಕೆಲವರು ಹಲ್ಲೆ ನಡೆಸಿದ್ದರು. ಈ ಬಗ್ಗೆ ಮಂಚು ಮನೋಜ್‌ ದೂರು ನೀಡಿದ್ದರು. ಮೋಹನ್‌ ಬಾಬು ಕೂಡ ಮಂಚು ಮನೋಜ್‌ ಹಾಗೂ ಅವರ ಪತ್ನಿ ವಿರುದ್ಧ ದೂರು ದಾಖಲಿಸಿದ್ದರು.

ಕೆಲ ದಿನಗಳ ಹಿಂದೆ ಮಂಚು ಮನೋಜ್‌ ಅವರು ಮೋಹನ್‌ ಬಾಬು ಅವರ ಮನೆಗೆ ತೆರಳಲು ಯತ್ನಿಸಿದಾಗ ಮೋಹನ್‌ಬಾಬು ಅವರನ್ನು ಬಾಗಿಲಲ್ಲೇ ತಡೆದಿದ್ದರು. ಆಗ ಮಂಚು ಅವರ ಜೊತೆಗೆ ಕೆಲ ವರದಿಗಾರರು ಸಹ ಮೋಹನ್‌ಬಾಬು ಅವರ ಮನೆಯೊಳಗೆ ತೆರಳಿ ಪ್ರತಿಕ್ರಿಯೆ ಪಡೆಯಲು ಮುಂದಾಗಿದ್ದರು. ಈ ವೇಳೆ ಪ್ರಶ್ನೆ ಕೇಳಲು ಮುಂದಾಗಿದ್ದ ಟಿವಿ9 ವರದಿಗಾರನ ಮೇಲೆ ಮೋಹನ್‌ಬಾಬು ಹಲ್ಲೆ ಮಾಡಿದ ಆರೋಪ ಕೇಳಿಬಂದಿತ್ತು. ವರದಿಗಾರನ ದವಡೆಗೆ ಗಾಯವಾಗಿದ್ದರಿಂದ ಆವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದುಬಂದಿತ್ತು.  

ನಟ ಮೋಹನ್‌ಬಾಬು ವಿರುದ್ಧ ಗಂಭೀರ ಆರೋಪಗಳಿದ್ದು ಪ್ರಕರಣ ಹಿಂಪಡೆಯುವಂತೆ ಅವರು ಒತ್ತಡ ಹೇರುವ ಮೂಲಕ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ತೆಲಂಗಾಣ ಹೈಕೋರ್ಟ್‌ ಕಳೆದ ತಿಂಗಳು ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಬಂಧನದಿಂದ ರಕ್ಷಣೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಮೋಹನ್‌ಬಾಬು ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ "ಇದು ನಟನನ್ನು ಬಂಧಿಸಿಟ್ಟು ವಿಚಾರಣೆಗೆ ಒಳಪಡಿಸುವಂತಹ ಪ್ರಕರಣವಲ್ಲ. ಪ್ರಕರಣವನ್ನು ಹಿಂಪಡೆಯಲು ವರದಿಗಾರನಿಗೆ ಅವರು ಬೆದರಿಕೆ ಹಾಕಿಲ್ಲ” ಎಂದಿದ್ದರು.

 “ನನಗೆ 76 ವರ್ಷ. ನಾನು ಚಲನಚಿತ್ರ ನಟ. ನನ್ನ ಮಗ (ಮಂಚು ಮನೋಜ್‌) ಪ್ರತ್ಯೇಕವಿದ್ದಾನೆ.. ಆತ ನನ್ನ ಮನೆಗೆ ನುಗ್ಗಿದ್ದ. ಆತನೊಂದಿಗೆ ನನಗೆ ವ್ಯಾಜ್ಯವಿದೆ. ಆತ 40-50 ಮಂದಿಯೊಂದಿಗೆ ಬಂದಿದ್ದ” ಎಂದು ಮೋಹನ್‌ಬಾಬು ಪರವಾಗಿ ರೋಹಟಗಿ ವಿಚಾರಣೆ ವೇಳೆ ವಿವರಿಸಿದರು.

ಇತ್ತ ವರದಿಗಾರನ ಪರ ವಕೀಲರು, ಮೋಹನ್‌ ಬಾಬು ಅವರಿಗೆ ಜಾಮೀನು ನೀಡಬಾರದು. ಅವರು ಹಲ್ಲೆ ನಡೆಸಿದ್ದರಿಂದ ತಮ್ಮ ಕಕ್ಷೀದಾರನ ದವಡೆ ಮುರಿದಿದೆ. ನಳಿಕೆಯಿಂದ ಗಂಟಲಿನ ಮೂಲಕ ಆಹಾರ ಸೇವಿಸುವಂತಾಗಿತ್ತು. 76 ವರ್ಷದ ನಟ 35 ವರ್ಷದ ವರದಿಗಾರನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

Also Read
'ಪುಷ್ಪಾ-2‌' ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್‌ಗೆ ಜಾಮೀನು

ಇದೊಂದು ಆಕಸ್ಮಿಕ ಘಟನೆ. ಪತ್ರಕರ್ತನ ಕ್ಷಮೆಯಾಚಿಸಲು ಮತ್ತು ಆತನಿಗೆ ಪರಿಹಾರ ನೀಡಲು ಮೋಹನ್‌ಬಾಬು ಸಿದ್ಧರಿದ್ದಾರೆ  ಮೂವತ್ತರಿಂದ ನಲವತ್ತು ಜನ ಮೋಹನ್‌ಬಾಬು ಮನೆಗೆ ನುಗ್ಗಿದ್ದರು. ಎಂದು ರೋಹಟಗಿ ಸಮರ್ಥನೆಗೆ ಮುಂದಾದರು. ಆಗ ನ್ಯಾಯಾಲಯ ಹಾಗೆಂದು ಅವರು ಥಳಿಸಬೇಕು ಎಂದರ್ಥವಲ್ಲ ಎಂದು ಟೀಕಿಸಿತು.

ವರರದಿಗಾರ ಪರಿಹಾರ ಬಯಸುತ್ತಾರೆಯೇ ಎಂದು ಕೇಳುವಂತೆ ಪತ್ರಕರ್ತನ ಪರ ವಕೀಲರಿಗೆ ನ್ಯಾಯಾಲಯ ಸೂಚಿಸಿತು. ಇದಕ್ಕೆ ರೋಹಟಗಿ ಅವರು ಪ್ರತಿವಾದಿ ವಕೀಲರೊಂದಿಗೆ ಸಮಾಲೋಚಿಸಿ ಏನು ಮಾಡಬಹುದು ಎಂದು ನಿರ್ಧರಿಸುವುದಾಗಿ ತಿಳಿಸಿದರು.

Kannada Bar & Bench
kannada.barandbench.com