[ಹತ್ಯೆ ಪ್ರಕರಣ] ಸಾಕ್ಷಿಗಳ ಸಂಖ್ಯೆಗಿಂತ ಗುಣಮಟ್ಟ ಮುಖ್ಯ ಎಂದ ಸುಪ್ರೀಂ; ಏಕೈಕ ಪ್ರತ್ಯಕ್ಷ ಸಾಕ್ಷಿಯ ಸಾಕ್ಷ್ಯ ಅಬಾಧಿತ

ಹೀಗಾಗಿ, ಪ್ರಕರಣದಲ್ಲಿ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ಆರೋಪಿಗಳ ವಾದವನ್ನು ತಿರಸ್ಕರಿಸಿತು ನ್ಯಾಯಾಲಯ.
Justice BR Gavai and Justice Vikram nath
Justice BR Gavai and Justice Vikram nath

ಪ್ರಕರಣವೊಂದರ ಏಕೈಕ ಪ್ರತ್ಯಕ್ಷ ಸಾಕ್ಷಿ ನುಡಿದ ಸಾಕ್ಷ್ಯವನ್ನು ಆಧರಿಸಿದ ಸುಪ್ರೀಂ ಕೋರ್ಟ್‌ ನಾಲ್ವರು ಕೊಲೆ ಆರೋಪಿಗಳ ಅಪರಾಧ ಮತ್ತು ಜೀವಾವಧಿ ಶಿಕ್ಷೆಯನ್ನು ಬುಧವಾರ ಎತ್ತಿಹಿಡಿಯಿತು.

ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಸಾಕ್ಷಿಗಳ ಸಂಖ್ಯೆ, ಪ್ರಮಾಣ ಮುಖ್ಯವಲ್ಲ ಬದಲಿಗೆ ಗುಣಮಟ್ಟ ಮುಖ್ಯಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು. ಹೀಗಾಗಿ, ಪ್ರಕರಣದಲ್ಲಿ ಇಬ್ಬರು ಸಾಕ್ಷಿಗಳ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂಬ ಆರೋಪಿಗಳ ವಾದವನ್ನು ಅದು ತಿರಸ್ಕರಿಸಿತು.

ಹಾಗೆ ಪರಿಶೀಲಿಸದೇ ಇರುವುದರಿಂದ ಪ್ರಕರಣದ ಮೇಲೆ ಯಾವುದೇ ಪ್ರಭಾವ ಉಂಟಾಗದು ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿತು. "ಆರೋಪವನ್ನು ಸಾಬೀತುಪಡಿಸಲು ಅಗತ್ಯವಿರುವಷ್ಟು ಸಾಕ್ಷ್ಯಗಳನ್ನು ಪಡೆಯುವುದು ಪ್ರಾಸಿಕ್ಯೂಷನ್‌  ವಿವೇಚನೆಗೆ ಸಂಬಂಧಿಸಿದ ವಿಚಾರವಾಗಿದೆ. ಸಾಕ್ಷಿಗಳ ಪ್ರಮಾಣಕ್ಕಿಂತಲೂ ಗುಣಮಟ್ಟ ಮುಖ್ಯ" ಎಂದು ಪೀಠ ವಿವರಿಸಿತು.

ಪಿಂಕಿ ಆನಂದ್ ಎಂಬುವವರ ಕುಟುಂಬದ ಸದಸ್ಯರನ್ನು 2007ರಲ್ಲಿ ಕೊಲೆ ಮಾಡಲಾಗಿತ್ತು. ಆರೋಪಿಗಳು ಹತ್ತಿರದ ಸಂಬಂಧಿಗಳು ಮತ್ತು ನೆರೆಹೊರೆಯವರಾಗಿದ್ದು, ಆನಂದ್ ತಂದೆಯ ವಿರುದ್ಧ ದ್ವೇಷ ಕಾರುತ್ತಿದ್ದರು. ಆರೋಪಿಗಳು ಆಸ್ತಿ ಗಳಿಕೆ ಮತ್ತು ಹಣ ಸಂಪಾದನೆಗಾಗಿ ಕುಟುಂಬದ ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

ಆದರೆ ಘಟನೆಯ ಪ್ರತ್ಯಕ್ಷಸಾಕ್ಷಿಗಳಾಗಿದ್ದ ಪಿಂಕಿ ಮತ್ತು ಆಕೆಯ ಸೋದರಿ ರಶ್ಮಿ ಪ್ರಾಣಾಪಾಯದಿಂದ ಪಾರಾಗಿದ್ದರು. ಪ್ರಕರಣದ ಎಲ್ಲಾ ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರು ಎಂದು ವಿಚಾರಣಾ ನ್ಯಾಯಾಲಯ ತೀರ್ಪು ನೀಡಿ ಅವರಿಗೆ ಮರಣದಂಡನೆ ವಿಧಿಸಿತು. ಇದನ್ನು ಪ್ರಶ್ನಿಸಿ ಅಲಾಹಾಬಾದ್‌ ಹೈಕೋರ್ಟ್‌ಗೆ ಆರೋಪಿಗಳು ಮನವಿ ಸಲ್ಲಿಸಿದರು. ಹೈಕೋರ್ಟ್‌ ಅಪರಾಧವನ್ನು ಎತ್ತಿ ಹಿಡಿಯಿತಾದರೂ ಆರೋಪಿಗಳ ಮರಣದಂಡನೆ ಸಜೆಯನ್ನು ಜೀವಾವಧಿ ಶಿಕ್ಷೆಗೆ ಬದಲಿಸಿತು. ಹೈಕೋರ್ಟ್‌ ಆದೇಶದಿಂದ ತೃಪ್ತರಾಗದ ಆರೋಪಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋದರು. ಇತ್ತ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸಿದ್ದ ಹೈಕೋರ್ಟ್‌ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಕೂಡ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು.

ಸುಪ್ರೀಂ ಕೋರ್ಟ್‌ ಎದುರು ವಾದ ಮಂಡಿಸಿದ್ದ ಆರೋಪಿಗಳು "ಇಡೀ ಪ್ರಕರಣದಲ್ಲಿ ಏಕೈಕ ಸಾಕ್ಷಿಯನ್ನು (ಪಿಂಕಿ ಆನಂದ್‌) ನೆಚ್ಚಿಕೊಳ್ಳಲಾಗಿದೆ. ಆಕೆ ಮೃತರ ಸಂಬಂಧಿಕಳಾಗಿರುವುದರಿಂದ, ಆಕೆ ನುಡಿಯವ ಸಾಕ್ಷ್ಯ ವಿಶ್ವಾಸಾರ್ಹವಲ್ಲ ಮತ್ತು ನಮ್ಮ ವಿರುದ್ಧ ಆಕೆ ದ್ವೇಷ ಸಾಧಿಸುತ್ತಿದ್ದಳು. ಜೊತೆಗೆ ಆಕೆಯ ಸಾಕ್ಷ್ಯ ಪುಷ್ಟೀಕರಿಸುವಂತಹ ಇತರ ಪುರಾವೆಗಳಿಲ್ಲ. ಅಲ್ಲದೆ ಆರಂಭದಲ್ಲಿಯೇ ಈ ಸಹೋದರಿಯರು ಆರೋಪಿಗಳ ಹೆಸರನ್ನು ಬಹಿರಂಗಪಡಿಸಿಲ್ಲ” ಎಂದಿದ್ದರು.

ಆದರೆ ನ್ಯಾಯಾಲ "ಈ ಸಮಯದಲ್ಲಿ ಆರೋಪಿಗಳು ಆ ಸಹೋದರಿಯ ಬಳಿಯೇ ಇದ್ದ ಕಾರಣ ಅವರು ಹಾಗೆ ಮಾಡಲಿಲ್ಲ. ಆರೋಪಿಗಳ ಸಮ್ಮುಖದಲ್ಲಿ ಜಾಣ್ಮೆಯಿಂದ ಅವರು ಏನನ್ನೂ ಮಾತನಾಡಲಿಲ್ಲ. ಆಸ್ಪತ್ರೆಯಲ್ಲಿ ನೈಜ ಘಟನೆಯನ್ನು ಈ ಸಹೋದರಿಯರು ಪೊಲೀಸರೆದುರು ಬಿಚ್ಚಿಟ್ಟರು. ಪಿಂಕಿ ಆನಂದ್ ಅವರು ಸಂಪೂರ್ಣ ವಿಶ್ವಾಸಾರ್ಹ ಸಾಕ್ಷಿಯಾಗಿದ್ದು ಸಹಜವಾಗಿಯೇ ವಿಷಯಗಳನ್ನು ಹೇಳಿದ್ದಾರೆ" ಎಂದು ತೀರ್ಮಾನಿಸಿತು.

 ಹೀಗಾಗಿ ನಾಲ್ವರು ಆರೋಪಿಗಳ ಕೊಲೆ ಕೃತ್ಯವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯಿತು. ಆದರೆ ಶಿಕ್ಷೆ ಕಡಿತಗೊಳಿಸಿದ್ದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಅದು ವಜಾಗೊಳಿಸಿತು.

"ಹೈಕೋರ್ಟ್ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲು ಸರಿಯಾದ ಮತ್ತು ಸಮಂಜಸವಾದ ಕಾರಣಗಳನ್ನು ನೀಡಿದೆ. ಹೈಕೋರ್ಟ್‌ ತೀರ್ಪಿನಲ್ಲಿ ಯಾವುದೇ ನ್ಯೂನತೆ ಇಲ್ಲ” ಎಂದು ತಿಳಿಸಿದ ನ್ಯಾಯಾಲಯ ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯ ಜೊತೆಗೆ ಸರ್ಕಾರ ಸಲ್ಲಿಸಿದ್ದ ಮನವಿಯನ್ನೂ ವಜಾಗೊಳಿಸಿತು.

Related Stories

No stories found.
Kannada Bar & Bench
kannada.barandbench.com