ಕಳೆದ ವರ್ಷ ದೆಹಲಿಯಲ್ಲಿ ನಡೆದ ಗಲಭೆ ತನಿಖೆ ಕುರಿತು ವಿಚಾರಣೆಗೆ ಹಾಜರಾಗುವ ಸಂಬಂಧ ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯು ತಮಗೆ ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಫೇಸ್‌ಬುಕ್ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ವಿಸ್ತೃತ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬುಧವಾರ ತೀರ್ಪು ಕಾಯ್ದಿರಿಸಿದೆ (ಅಜಿತ್ ಮೋಹನ್ ವರ್ಸಸ್ ವಿಧಾನಸಭೆ, ದೆಹಲಿಯ ರಾಷ್ಟ್ರೀಯ ರಾಜಧಾನಿ ವ್ಯಾಪ್ತಿ).
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ದಿನೇಶ್ ಮಹೇಶ್ವರಿ ಮತ್ತು ಹೃಷಿಕೇಶ್ ರಾಯ್ ಅವರಿದ್ದ ತ್ರಿಸದಸ್ಯ ಪೀಠವು ಅಂತಿಮ ವಾದ ಸರಣಿಯನ್ನು ಆಲಿಸಿತು.
ಫೇಸ್‌ಬುಕ್ ಭಾರತದ ಮುಖ್ಯಸ್ಥ ಅಜಿತ್ ಮೋಹನ್ ಅವರನ್ನು ಶಾಂತಿ ಮತ್ತು ಸಾಮರಸ್ಯ ಸಮಿತಿಯ ಮುಂದೆ ಹಾಜರಾಗುವಂತೆ ಒತ್ತಾಯಿಸಲಾಗದು. ಸರ್ವೋಚ್ಚ ನ್ಯಾಯಾಲಯವು ಮೌನವಾಗಿ ಉಳಿಯುವ ಹಕ್ಕನ್ನು ಎತ್ತಿ ಹಿಡಿಯಬೇಕು ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ವಿಚಾರಣೆಯ ಕೊನೆಯ ಹಂತದಲ್ಲಿ ಹೇಳಿದರು.
“ಇಂದಿನ ಕಾಲಘಟ್ಟದಲ್ಲಿ ಮೌನವಾಗಿ ಉಳಿಯುವ ಹಕ್ಕು ಅತ್ಯಂತ ಮಹತ್ವಪೂರ್ಣವಾದುದು… ದಯವಿಟ್ಟು ಈ ಹಕ್ಕನ್ನು ಸಂರಕ್ಷಿಸಿ, ಉಳಿದಂತೆ ಸಮಿತಿಯ ಮುಂದೆ ಹಾಜರಾಗುವ ಅಥವಾ ಹಾಜರಾಗದೇ ಇರುವ ನಿರ್ಧಾರ ಕೈಗೊಳ್ಳುವ ವಿಚಾರವನ್ನು ನನಗೆ ಬಿಡಿ. ಈ ಸಮನ್ಸ್ ಒಂದು ಆಹ್ವಾನ ಮಾತ್ರ ಉಳಿದಂತೆ ಬೇರೇನು ಅಲ್ಲ ಎಂದು ಹೇಳಿ,” ಎಂದು ಸಾಳ್ವೆ ವಾದಿಸಿದರು.
“ಹಿಂಬಾಗಿಲ ಮೂಲಕ ಅಧಿಕಾರ ವಿಸ್ತರಿಸುವುದಕ್ಕೆ ಅವಕಾಶ ಮಾಡಿಕೊಡಬೇಡಿ. ದಯವಿಟ್ಟು ಪ್ರಜೆಗಳ ಹಕ್ಕುಗಳನ್ನು ಸಂರಕ್ಷಿಸಿ” ಎಂದು ವಾದದ ಅಂತಿಮ ಹಂತದಲ್ಲಿ ಸಾಳ್ವೆ ಹೇಳಿದರು.
ಹಿರಿಯ ವಕೀಲರಾದ ಎ ಎಂ ಸಿಂಘ್ವಿ, ರಾಜೀವ್ ಧವನ್ ಅವರು ದೆಹಲಿ ವಿಧಾನಸಭೆಯ ಶಾಂತಿ ಮತ್ತು ಸಾಮರಸ್ಯ ಸಮಿತಿಯನ್ನು ಪ್ರತಿನಿಧಿಸಿದ್ದರು. ಹಿಂದೆ ಫೇಸ್‌ಬುಕ್ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಹಾಜರಿದ್ದರು. ಕೇಂದ್ರ ಸರ್ಕಾರವನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪ್ರತಿನಿಧಿಸಿದ್ದರು.
ಭಾರತದಲ್ಲಿ ಧ್ರುವೀಕರಣ ಸನ್ನಿವೇಶ ನಿರ್ಮಾಣವಾಗಿರುವಾಗ ಫೇಸ್‌ಬುಕ್ ತನ್ನ ಅಭಿಪ್ರಾಯ ವ್ಯಕ್ತಪಡಿಸಬೇಕು ಎಂದು ಒತ್ತಾಯಿಸುವುದು ಸಲ್ಲ.
ನಾನು ಮೌನವಾಗಿರಲು ಬಯಸುತ್ತೇನೆ. ಸಾಮಾಜಿಕ ಮಾಧ್ಯಮಗಳು ಪಾಶ್ಚಿಮಾತ್ಯರಿಂದ ನಿಯಂತ್ರಿಸಲ್ಪಟ್ಟಿವೆ, ಸರ್ಕಾರವನ್ನು ಬೆಂಬಲಿಸುತ್ತಿವೆ ಎನ್ನುವಂತಹ ಚರ್ಚೆಗಳಲ್ಲಿ ನನ್ನನ್ನು ಇರಿಸಲು ನೀವು ಬಯಸಿದ್ದೇ ಆದರೆ, ನಾನು ಅದಕ್ಕೆ ಉತ್ತರಿಸುವುದಿಲ್ಲ.
ದೆಹಲಿ ವಿಧಾನಸಭೆಯ ಸಂಘರ್ಷ ಫೇಸ್‌ಬುಕ್ ಜೊತೆಗಲ್ಲ, ಅದು ಕೇಂದ್ರ ಸರ್ಕಾರದೊಂದಿಗೆ ಮುಖಾಮುಖಿಯಾಗುತ್ತಿದೆ.
ಪ್ರಮುಖ ವಿಚಾರಗಳನ್ನು ಹೊರತುಪಡಿಸಿ ದೆಹಲಿ ವಿಧಾನಸಭೆಯು ಮೂರನೇ ವ್ಯಕ್ತಿಗೆ ಸಮನ್ಸ್ ನೀಡಲಾಗದು.
ನ್ಯಾಯಾಲಯದ ಮುಂದೆ ದೆಹಲಿ ವಿಧಾನಸಭೆಯು ಎರಡು ನಾಲಗೆಯಲ್ಲಿ ಮಾತನಾಡುತ್ತಿದೆ.
ಎರಡೂ ಬದಿಯವರನ್ನು (ಕೇಂದ್ರ ಸರ್ಕಾರ ಮತ್ತು ದೆಹಲಿ ವಿಧಾನಸಭೆ) ನಾನು (ಫೇಸ್‌ಬುಕ್) ಏಕಪ್ರಕಾರವಾಗಿ ಕ್ರೋಧಗೊಳ್ಳುವಂತೆ ಮಾಡಿದ್ದೇನೆ ಎಂದರೆ ಫೇಸ್‌ಬುಕ್ ನಿಜಕ್ಕೂ ಸರಿಯಾದುದನ್ನೇ ಮಾಡಿರಬೇಕು.
ಮೌನವಾಗಿರುವ ನನ್ನ ಹಕ್ಕನ್ನು ನಾನು ಸರಿಯಾಗಿ ಅರ್ಥೈಸಿಕೊಂಡಿದ್ದೇನೆ ಎಂದರೆ ನಾನು ಎಲ್ಲಿಗೂ ಹೋಗದೆ ಇರುವ ಹಕ್ಕನ್ನೂ ಹೊಂದಿದ್ದೇನೆ ಎಂದು. ವಿಭಜಕತೆಯ ನಡುವೆ ನಾನಿರಲು ಬಯಸುವುದಿಲ್ಲ.