ಜಮ್ಮು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ವಿಧಿ 370ಅನ್ನು ಕೇಂದ್ರ ಸರ್ಕಾರ 2019ರಲ್ಲಿ ರದ್ದುಗೊಳಿಸಿದ್ದ ನಿರ್ಧಾರದ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಕಾಯ್ದಿರಿಸಿದೆ [ಸಂವಿಧಾನದ 370 ನೇ ವಿಧಿಗೆ ಸಂಬಂಧಿಸಿದ ಪ್ರಕರಣ].
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ ಆರ್ ಗವಾಯಿ ಹಾಗೂ ಸೂರ್ಯ ಕಾಂತ್ ಅವರಿದ್ದ ಸಾಂವಿಧಾನಿಕ ಪೀಠ ತೀರ್ಪು ಕಾಯ್ದಿರಿಸಿತು.
ಇಂದು16ನೇ ಮತ್ತು ಕೊನೆಯ ದಿನದ ವಿಚಾರಣೆ ನಡೆಯಿತು. ನ್ಯಾ. ಕೌಲ್ ಡಿಸೆಂಬರ್ 24ರಂದು ನಿವೃತ್ತರಾಗಲಿದ್ದು ಡಿಸೆಂಬರ್ 18ರಿಂದ (ಸೋಮವಾರ) ಸುಪ್ರೀಂ ಕೋರ್ಟ್‌ಗೆ ಚಳಿಗಾಲದ ರಜೆ ಇರುವ ಕಾರಣ ಡಿಸೆಂಬರ್ 15ರೊಳಗೆ (ಶುಕ್ರವಾರ) ತೀರ್ಪು ಹೊರಬೀಳುವ ಸಾಧ್ಯತೆ ಇದೆ.
ವಿಚಾರಣೆಯ ಪ್ರಮುಖಾಂಶಗಳು
ವಿಚಾರಣೆ ವೇಳೆ ಹಿರಿಯ ನ್ಯಾಯವಾದಿ ಜಾಫರ್ ಶಾ ಅವರ ವಾದಕ್ಕೆ ಪ್ರತಿಕ್ರಿಯಿಸುತ್ತಾ ನ್ಯಾ. ಕೌಲ್ ಅವರು ಸಂವಿಧಾನದ ಪೀಠಿಕೆಯಲ್ಲಿರುವ ಭಾರತದ ಜನರಾದ ನಾವು ಎಂಬ ಮಾತು ಜಮ್ಮು ಕಾಶ್ಮೀರದ ಜನರನ್ನೂ ಒಳಗೊಂಡಿದೆ. ಕಾಲದೊಂದಿಗೆ ಸಾಗಿಬಂದಿರುವ ನಾವು ಇನ್ನೂ ಹೆಜ್ಜೆ ಇಡುತ್ತಲೇ ಇರಬೇಕಿದೆ. 370 ನೇ ವಿಧಿಯ ಎರಡನೇ ಭಾಗ ನಮ್ಮೆದುರು ಇರುವ ಪ್ರಮುಖ ಸಾಂವಿಧಾನಿಕ ಸವಾಲು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾ ಅವರು ಎರಡು ಸಂವಿಧಾನಗಳನ್ನು ಹೊಂದಿರುವುದು ಹಿಂದಿನ ಕಾಶ್ಮೀರ ರಾಜ್ಯಕ್ಕೆ ಅಸಾಮಾನ್ಯ ವಿಚಾರವಾಗಿರಲಿಲ್ಲ ಎಂದರು. “ನಮ್ಮ ಸ್ವಯಮಾಡಳಿತವನ್ನು ನಮಗೆ ವಾಪಸ್ ನೀಡಿ. ಏಕೀಕೃತ ರಾಷ್ಟ್ರಕ್ಕಾಗಿ ನಾವು ಜನರ ಹೃದಯ ಗೆಲ್ಲಬೇಕಿದೆ. ಪ್ರಕರಣ ನಮ್ಮ ಪರವಾಗಿ ಇತ್ಯರ್ಥವಾದರೆ ಜಮ್ಮು ಕಾಶ್ಮೀರದ ಜನರ ಹೃದಯ ಗೆಲ್ಲುವಲ್ಲಿ ಬಹಳ ದೂರ ಸಾಗಿದಂತಾಗುತ್ತದೆ ಎಂದು ಹೇಳಿದರು.
ಈ ಮಧ್ಯೆ ಮತ್ತೊಬ್ಬ ಅರ್ಜಿದಾರ ಲೋಕಸಭಾ ಸದಸ್ಯ ಅಕ್ಬರ್ ಲೋನ್ ಅವರು ಅನೇಕ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಕಾಶ್ಮೀರದ ಭಯೋತ್ಪಾದನಾ ಕೃತ್ಯದಲ್ಲಿ ಭದ್ರತಾ ಸಿಬ್ಬಂದಿ ಹತ್ಯೆಗೀಡಾದರೂ ಘಟನೆಯ ಸಂತ್ರಸ್ತರು ಮತ್ತು ಭಯೋತ್ಪಾದಕರಿಗಷ್ಟೇ ಅನುಕಂಪ ತೋರಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕುಟುಕಿದರು.
ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ನ್ಯಾಯವಾದಿ ಗೋಪಾಲ್ ಶಂಕರನಾರಾಯಣನ್ ಅವರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದರೆ ಪ್ರತ್ಯೇಕತಾವಾದಿ ಕಾರ್ಯಸೂಚಿ ಎನ್ನಲಾಗುತ್ತದೆ. ಹಾಗಾದರೆ ನಾವೆಲ್ಲರೂ ಪ್ರತ್ಯೇಕತಾವಾದ ಕಾರ್ಯಸೂಚಿಗಾಗಿ ವಾದ ಮಂಡಿಸುತ್ತಿದ್ದೇವೆಯೇ ಎಂದು ಪ್ರಶ್ನಿಸಿದರು.
ವಾದ ಆಲಿಸಿದ ಸಿಜೆಐ ಸಂವಿಧಾನದ 32ನೇ ವಿಧಿಯಡಿ ಅರ್ಜಿ ಸಲ್ಲಿಸುವುದನ್ನು ಪ್ರತ್ಯೇಕತಾವಾದಿ ಅಜೆಂಡಾ ಎಂದು ಯಾರೂ ಹೇಳಲು ಸಾಧ್ಯವಿಲ್ಲ ಎಂದರು.
ಅರ್ಜಿದಾರರ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಅವರು ಒಂದು ಹಂತದಲ್ಲಿ ಕಾಶ್ಮೀರದ ಜನರ ಅಭಿಪ್ರಾಯ ಕೇಳದೆ ಅನೇಕ ಕ್ರಮಗಳನ್ನು ಜರುಗಿಸಲಾಗಿದೆ, ಈ ರೀತಿ ನಡೆಯಬಾರದು ಎಂದರು.
ಹಿರಿಯ ನ್ಯಾಯವಾದಿಗಳಾದ ರಾಜೀವ್ ಧವನ್, ದುಶ್ಯಂತ್ ದವೆ ಕೂಡ ಈ ಸಂದರ್ಭದಲ್ಲಿ ವಾದ ಮಂಡಿಸಿದರು.