ಮಾಧ್ಯಮ ಸಂಸ್ಥೆಗಳು ಮತ್ತು ಟಿವಿ ಚಾನೆಲ್‌ಗಳ ವಿರುದ್ಧ ದೂರುಗಳನ್ನು ತುರ್ತಾಗಿ ಪರಿಹರಿಸುವ ಸಂಬಂಧ ಮಾಧ್ಯಮ ನ್ಯಾಯ ಮಂಡಳಿ ರಚಿಸುವಂತೆ ಕೋರಿ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ (ನೀಲೇಶ್ ನವಲಾಖ ವರ್ಸಸ್ ಭಾರತ ಸರ್ಕಾರ).
ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಸಚಿವಾಲಯವು ಟಿವಿ ವಾಹಿನಿಗಳು ಬದ್ಧವಾಗಿರಲು ನಿರೀಕ್ಷಿಸಲಾಗುವ ಕರ್ತವ್ಯ ಮತ್ತು ಕಾರ್ಯಕ್ರಮ ಸಂಹಿತೆ ಜಾರಿಗೊಳಿಸುವಲ್ಲಿ ವಿಫಲವಾಗಿದೆ ಎಂದು ಸಿನಿಮಾ ತಯಾರಕ ಮತ್ತು ಸಾಮಾಜಿಕ ಕಾರ್ಯಕರ್ತ ನೀಲೇಶ್ ನವಲಾಖ ಮತ್ತು ನಿತಿನ್ ಮಿಮಾನೆ ಅವರು ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.
“ತಮ್ಮ ಹಿತಾಸಕ್ತಿ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಪ್ರಭಾವಿಸಲು ರಾಜಕಾರಣಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ನ್ಯಾಯಿಕವಾಗಿ ನಿಯಂತ್ರಣಕ್ಕೆ ಒಳಪಟ್ಟಿಲ್ಲದ ಮಾಧ್ಯಮ ಉದ್ಯಮಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸುದ್ದಿಯ ಸೋರಿಕೆ ಮತ್ತು ಮಾಹಿತಿ ಹೆಕ್ಕುವುದಕ್ಕೆ ಇರುವ ದಾಹ ಹಾಗೂ ಮಾಹಿತಿ ನೀಡುವ ಮೂಲಗಳ ಜೊತೆಗೆ ಕೆಲವು ಪತ್ರಕರ್ತರು ಸಂಬಂಧ ಹೊಂದುವುದರಿಂದ ಮಾಧ್ಯಮಗಳ ಸ್ವಾತಂತ್ರ್ಯಮತ್ತು ವಿಮರ್ಶಾತ್ಮಕ ನಿಲುವು ಹೊಂದುವುದು ಕಷ್ಟವಾಗಲಿದೆ ” ಎಂದು ವಕೀಲರಾದ ಪೈ ಅಮಿತ್, ರಾಜೇಶ್ ಇನಾಂದಾರ್ ಮತ್ತು ಶಾಶ್ವತ್ ಆನಂದ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ವಿವರಿಸಲಾಗಿದೆ.
ಚಾನೆಲ್‌ಗಳ ಸ್ವನಿಯಂತ್ರಣ ಈ ಸಮಸ್ಯೆಗೆ ಉತ್ತರವಾಗುವುದಿಲ್ಲ ಎಂದು ಅರ್ಜಿದಾರರು ಹೇಳಿದ್ದು, “ಇಡೀ ಸ್ವನಿಯಂತ್ರಣ ಪ್ರಕ್ರಿಯು ವಿದ್ಯುನ್ಮಾನ ಪ್ರಸಾರಕರು ತಮ್ಮದೇ ಪ್ರಕರಣದಲ್ಲಿ ತಾವೇ ನ್ಯಾಯಮೂರ್ತಿಯಾಗುವಂತೆ ಮಾಡುತ್ತದೆ. ಆ ಮೂಲಕ ಸಂವಿಧಾನದಲ್ಲಿರುವ ಉಲ್ಲೇಖಿಸಿರುವ ಕಾನೂನಿನ ಉಲ್ಲಂಘನೆ ಮಾಡಿದಂತಾಗುತ್ತದೆ,” ಎಂದು ಹೇಳಲಾಗಿದೆ.
ಅರ್ಜಿಯು ಮಾಧ್ಯಮ ಉದ್ಯಮದ ಮೂಲಭೂತ ಹಕ್ಕುಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿಲ್ಲ. ಆದರೆ, ತಪ್ಪು ಮಾಹಿತಿಯ ಹೊಣೆಗಾರಿಕೆ, ಪ್ರಚೋದನಕಾರಿ ಸುದ್ದಿ ಪ್ರಸಾರ, ನಕಲಿ ಸುದ್ದಿಗಳು, ಖಾಸಗಿತನದ ಉಲ್ಲಂಘನೆ ಇತ್ಯಾದಿಗಳ ಸಂಬಂಧ ಹೊಣೆಗಾರಿಕೆಯನ್ನು ರೂಪಿಸುವ ಉದ್ದೇಶಹೊಂದಿದೆ ಎಂದು ಹೇಳಲಾಗಿದೆ.