ಮತದಾನ ಹಿಂಸಾಚಾರದ ಬಳಿಕ ಜನರ ಆಂತರಿಕ ಸ್ಥಳಾಂತರ: ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್

ಚುನಾವಣೋತ್ತರ ಹಿಂಸಾಚಾರದಿಂದಾಗಿ ಹಲವರು ತಮ್ಮ ಮನೆಗಳನ್ನು ತೊರೆದಿರುವುದು ಕೋವಿಡ್ ಸಾಂಕ್ರಾಮಿಕ ಹರಡಿರುವ ಸಂದರ್ಭದಲ್ಲಿ ಮಾನವೀಯ ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಮತದಾನ ಹಿಂಸಾಚಾರದ ಬಳಿಕ ಜನರ ಆಂತರಿಕ ಸ್ಥಳಾಂತರ: ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್
Published on

ಚುನಾವಣೋತ್ತರ ಹಿಂಸಾಚಾರದಿಂದಾಗಿ ಆಂತರಿಕವಾಗಿ ಸ್ಥಳಾಂತರಗೊಂಡಿರುವ ಜನರಿಗೆ ಪರಿಹಾರ ಒದಗಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಮಂಗಳವಾರ ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿ ನೋಟಿಸ್‌ ಜಾರಿ ಮಾಡಿದೆ.

ಇದೇ ವೇಳೆ, ನ್ಯಾಯಮೂರ್ತಿಗಳಾದ ವಿನೀತ್ ಸರನ್ ಮತ್ತು ಬಿ ಆರ್ ಗವಾಯಿ ಅವರಿದ್ದ ರಜಾಕಾಲೀನ ಪೀಠ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗವನ್ನು ಕೂಡ ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಿಕೊಂಡಿದೆ.

2021ರ ವಿಧಾನಸಭಾ ಚುನಾವಣೆ ಬಳಿಕ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಚುನಾವಣಾ ಹಿಂಸಾಚಾರದಿಂದಾಗಿ ಜನ ಗುಳೆ ಹೊರಟರು ಜೊತೆಗೆ ಆಂತರಿಕವಾಗಿ ಸ್ಥಳಾಂತರಗೊಂಡರು ಎಂದು ಅಡ್ವೊಕೇಟ್‌ ಆನ್‌ ರೆಕಾರ್ಡ್‌ ವಕೀಲೆ ಶ್ರುತಿ ಅಗರ್‌ವಾಲ್‌ ಅವರ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಉದಾಸೀನತೆಯಿಂದಾಗಿ, ರಾಜಕೀಯ ಪಕ್ಷಗಳ ಹದಿನೆಂಟುಕ್ಕೂ ಹೆಚ್ಚು ಕಾರ್ಯಕರ್ತರು ಪ್ರಾಣ ಕಳೆದುಕೊಂಡರು. ರಾಜಕೀಯ ದೃಷ್ಟಿಯಿಂದ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಹಾಡುಹಗಲೇ ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳೆರಡರ ಲೂಟಿ, ಅಗ್ನಿಸ್ಪರ್ಶ ಮತ್ತು ನಾಶಪಡಿಸುವಿಕೆ ನಡೆದಿದೆ. ಪೊಲೀಸರು ಮತ್ತು ಸರ್ಕಾರಿ ಪ್ರಾಯೋಜಿತ ಗೂಂಡಾಗಳು ಕೈಜೋಡಿಸಿದ್ದು ಪೊಲೀಸರು ಪ್ರಕರಣಗಳ ತನಿಖೆ ನಡೆಸುತ್ತಿಲ್ಲ. ಜೀವ ಬೆದರಿಕೆ ಇರುವವರಿಗೆ ರಕ್ಷಣೆ ನೀಡುವಲ್ಲಿ ಅವರು ವಿಫಲರಾಗಿದ್ದಾರೆ.

ಇಂತಹ ಸನ್ನಿವೇಶಗಳಿಂದಾಗಿ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದು ಪಶ್ಚಿಮ ಬಂಗಾಳದ ಒಳಗೆ ಮತ್ತು ಹೊರಗೆ ಅನಿವಾರ್ಯವಾಗಿ ಮನೆಗಳು ಅಥವಾ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಸರ್ಕಾರಿ ಪ್ರಯೋಜಿತ ಹಿಂಸಾಚಾರದಿಂದಾಗಿ ರಾಜ್ಯದ ಜನರ ಉಳಿವಿಗೆ ಸಂಬಂಧಿಸಿದಂತೆ ಮಾನವೀಯ ಬಿಕ್ಕಟ್ಟು ತಲೆದೋರಿದೆ. ಸಂವಿಧಾನದ 21ನೇ ವಿಧಿಯಡಿ ನೀಡಲಾದ ಮೂಲಭೂತ ಹಕ್ಕುಗಳಿಂದ ಅವರು ವಂಚಿತರಾಗಿದ್ದಾರೆ. ಕೋವಿಡ್‌ ಸಾಂಕ್ರಾಮಿಕ ಹರಡಿರುವ ಸಂದರ್ಭದಲ್ಲಿ ಹಲವರು ತಮ್ಮ ಮನೆಗಳನ್ನು ತೊರೆದಿರುವುದು ಮಾನವೀಯ ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ಪರಿಹಾರಗಳನ್ನು ಅರ್ಜಿಯಲ್ಲಿ ಕೋರಲಾಗಿದೆ.

Kannada Bar & Bench
kannada.barandbench.com