
ಕರ್ನಾಟಕ ಸಂಗೀತ ಪ್ರಕಾರದ ಮಹತ್ವದ ಗಾಯಕ ಮತ್ತು ಸಾಮಾಜಿಕ ಹೋರಾಟಗಾರ ಟಿ ಎಂ ಕೃಷ್ಣ ಅವರಿಗೆ ಸಂಗೀತ ಕಲಾನಿಧಿ ಎಂ ಎಸ್ ಸುಬ್ಬುಲಕ್ಷ್ಮಿ ಹೆಸರಿನಲ್ಲಿ ನಿನ್ನೆ (ಭಾನುವಾರ) ಪ್ರದಾನ ಮಾಡಲಾದ ಪ್ರಶಸ್ತಿಯೊಂದಿಗೆ ತಮ್ಮನ್ನು ಬಿಂಬಿಸಿಕೊಳ್ಳದಂತೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ಬಂಧ ವಿಧಿಸಿದೆ.
ದ ಹಿಂದೂ ಮಾಧ್ಯಮ ಸಂಸ್ಥೆಯ ಅಂಗವಾದ ಮ್ಯೂಸಿಕ್ ಅಕಾಡೆಮಿ ಚೆನ್ನೈನಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಒಡಿಶಾ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್ ಮುರಳೀಧರ್ ಅವರು ಟಿ ಎಂ ಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಸೋಮವಾರ ಸಂಜೆ ಮಧ್ಯಂತರ ತಡೆಯಾಜ್ಞೆ ಆದೇಶ ನೀಡಿದ್ದು ಸಂಗೀತ ಕಲಾನಿಧಿ ಎಂ ಎಸ್ ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತರೆಂದು ಗುರುತಿಸದಂತೆ ನಿರ್ಬಂಧಿಸುತ್ತೇವೆ. ಅಲ್ಲದೆ, ಟಿ ಎಂ ಕೃಷ್ಣ ಅವರು ಸಹ ತಮ್ಮನ್ನು ಸುಬ್ಬುಲಕ್ಷ್ಮಿ ಪ್ರಶಸ್ತಿ ಪುರಸ್ಕೃತರು ಎಂದು ಬಿಂಬಿಸಿಕೊಳ್ಳದಂತೆ ನಿರ್ಬಂಧಿಸುತ್ತಿದ್ದೇವೆ ಎಂದು ಆದೇಶದಲ್ಲಿ ಹೇಳಿದೆ.
ಇದೇ ವೇಳೆ ನ್ಯಾಯಾಲಯವು ಈ ಮಧ್ಯಂತರ ಆದೇಶವನ್ನು ಟಿ ಎಂ ಕೃಷ್ಣ ಅವರ ಗಾಯನ ಸಾಮರ್ಥ್ಯದ ದ್ಯೋತಕವಾಗಿಯಾಗಲಿ, ಮ್ಯೂಸಿಕ್ ಅಕಾಡೆಮಿ, ದ ಹಿಂದೂವಿನ ಕುರಿತಾದ ಪ್ರತಿಫಲನವೆಂದಾಗಲಿ ನೋಡಬಾರದು ಎಂದು ಸ್ಪಷ್ಟಪಡಿಸಿದೆ.
ಇಂದು ಸುಪ್ರೀಂ ಕೋರ್ಟ್‌ಗೆ ಸುಬ್ಬುಲಕ್ಷ್ಮಿ ಅವರ ಮೊಮ್ಮಗ ವಿ ಶ್ರೀನಿವಾಸನ್ ಪರ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎನ್ ವೆಂಕಟರಾಮನ್ ಅವರು “ಸುಬ್ಬುಲಕ್ಷ್ಮಿ ಅವರ ವಿರುದ್ಧ ಹೇಳಿಕೆ ನೀಡಿದವರಿಗೇ ಪ್ರಶಸ್ತಿ ಪ್ರದಾನ ಮಾಡಿರುವುದು ಕುಟುಂಬಕ್ಕೆ ಕಳವಳ ತಂದಿದೆ. ಸ್ತ್ರೀ ದ್ವೇಷದ ಹೇಳಿಕೆ ನೀಡಿದ್ದ ಕೃಷ್ಣ ಅವರಿಗೇ ಹೆಚ್ಚು ಪ್ರಚಾರದೊಂದಿಗೆ ಪ್ರಶಸ್ತಿ ನೀಡಲಾಯಿತು” ಎಂದರು.
ಮ್ಯೂಸಿಕ್ ಅಕಾಡೆಮಿಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಸ್ ವೈದ್ಯನಾಥನ್ ಅವರು ಮದ್ರಾಸ್ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತಡೆಯಾಜ್ಞೆಯನ್ನು ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು.
ಪ್ರಕರಣ ಸೂಕ್ಷ್ಮ ಅಂಶಗಳನ್ನು ಒಳಗೊಂಡಿದೆ ಎಂದ ನ್ಯಾಯಾಲಯ ಕೃಷ್ಣ ಪರ ವಕೀಲರನ್ನು ಉದ್ದೇಶಿಸಿ ಹೈಕೋರ್ಟ್‌ನಲ್ಲಿ ನಿಮ್ಮ ನಿಲುವನ್ನು ವಿವರಿಸಬಹುದಿತ್ತು. ನೀವು ಸ್ಪಷ್ಟಪಡಿಸಲಿಲ್ಲ ನಂತರ ಬೆಂಕಿಗೆ ತುಪ್ಪ ಸುರಿದಿದ್ದೀರಿ, ಬಾರ್ಬಿ ಡಾಲ್ ರೀತಿ ಬಿಂಬಿಸಲಾಗಿದೆ ಎಂದೆಲ್ಲಾ ಕರೆದಿದ್ದೀರಿ” ಎಂದು ಕಿಡಿಕಾರಿತು.
ಇದಕ್ಕೆ ಉತ್ತರಿಸಿದ ಕೃಷ್ಣ ಪರ ವಕೀಲ ಸುಹೃತ್ ಪಾರ್ಥಸಾರಥಿ “ಆರೋಪಿಸಿರುವಂತೆ ಸುಬ್ಬುಲಕ್ಷಿ ಅವರನ್ನು ಕೃಷ್ಣ ಅವರು "ಅತಿ ದೊಡ್ಡ ಆಷಾಢಭೂತಿ" ಎಂದು ಕರೆದಿಲ್ಲ. ಬದಲಿಗೆ ಬೇರೆಯವರು ಹಾಗೆ ಕರೆದಿದ್ದಾರೆ ಎಂದು ಹೇಳಿದ್ದು, ಈ ಮಿಥ್ಯೆಯನ್ನು ಒಡೆದುಹಾಕುವ ಪ್ರಯತ್ನವನ್ನು ಲೇಖನ ಮಾಡಿತ್ತು" ಎಂದರು.
ಈ ಮಧ್ಯೆ, ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ ಅವರು ತಡೆಯಾಜ್ಞೆ ನೀಡದಂತೆ ಪೀಠವನ್ನು ಒತ್ತಾಯಿಸಿದರು. ಯಥಾಸ್ಥಿತಿ ಬೇಕಿಲ್ಲ, ಹೈಕೋರ್ಟ್ ಆದೇಶ ಹೊರಡಿಸಿದ್ದು, ಮೊಮ್ಮಗ ಇದ್ದಕ್ಕಿದ್ದಂತೆ ಬಂದು ಇದನ್ನೆಲ್ಲ ಹೇಳುವಂತಿಲ್ಲ ಎಂದರು.
ಆಗ ನ್ಯಾಯಾಲಯ ಸದ್ಯಕ್ಕೆ ಸುಬ್ಬುಲಕ್ಷ್ಮಿ ಪ್ರಶಸ್ತಿಯೊಂದಿಗೆ ಕೃಷ್ಣ ಅವರು ತಮ್ಮನ್ನು ಬಿಂಬಿಸಿಕೊಳ್ಳದಂತೆ ನಿರ್ಬಂಧಿಸಿ ಮಧ್ಯಂತರ ಆದೇಶ ನೀಡಿತು.
ವಿಚಾರಣೆಯ ಕೊನೆಗೆ ಸುಬ್ಬುಲಕ್ಷ್ಮಿ ಅವರು ಬಿಟ್ಟುಹೋದ ಪರಂಪರೆಯ ಬಗ್ಗೆ ಮಾತನಾಡಿದ ನ್ಯಾಯಾಲಯ “ಅತ್ಯಂತ ವಿಶಿಷ್ಟ ಗಾಯಕರಲ್ಲಿ ಒಬ್ಬರಾದ ಆಕೆ 2004ರಲ್ಲಿ ನಿಧನರಾದರೂ ಅವರ ಸುಮಧುರ ಕಂಠ ಜೀವಂತವಾಗಿದೆ. ಇದು ಅವರೆಲ್ಲಾ ಅಭಿಮಾನಿಗಳಗೆ ಸಂತಸ ತರುವಂಥದ್ದು. ಗಾಯಕಿಯ ಕುರಿತಂತೆ ಟಿ ಎಂ ಕೃಷ್ಣ ಅವರ ಲೇಖನ ಮತ್ತು ನೀಡಿರುವ ಹೇಳಿಕೆಗಳು ಅವರು ತಮ್ಮದೇ ರೀತಿಯಲ್ಲಿ ಆಕೆಗೆ ಸಲ್ಲಿಸುವ ಗೌರವವನ್ನು ಸೂಚಿಸುತ್ತವೆಯಾದರೂ ಕೃಷ್ಣ ಬಳಸಿದ ಪದಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ ಎಂದು ಸುಬ್ಬುಲಕ್ಷ್ಮಿ ಅವರ ಮೊಮ್ಮಗ ಭಾವಿಸಿದ್ದಾರೆ" ಎಂದು ದಾಖಲಿಸಿತು.
ಪ್ರಕರಣದ ಮುಂದಿನ ವಿಚಾರಣೆ ಆರು ವಾರಗಳ ಬಳಿಕ ನಡೆಯಲಿದೆ.