ಜಾತಿಯನ್ನು ಹೊರಗಿರಿಸಿ ನೋಡಲಾಗದು: ಎಸ್‌ಸಿ/ಎಸ್‌ಟಿ ಕಾಯಿದೆ ಸೆಕ್ಷನ್‌ 3(2)(V) ವ್ಯಾಪ್ತಿಯ ಕುರಿತು ಸುಪ್ರೀಂ ತೀರ್ಪು

ಎಸ್‌ಸಿ/ಎಸ್‌ಟಿ ಕಾಯಿದೆಯ ಸೆಕ್ಷನ್ 3(2) (V) ಅಡಿಯಲ್ಲಿ ಅಪರಾಧ ಸಾಬೀತಾಗಲು ಜಾತಿ ಗುರುತಿಸುವಿಕೆಯು ಒಂದು ಆಧಾರವಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
Supreme Court women
Supreme Court women
Published on

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಸೆಕ್ಷನ್ 3(2)(V) ಅಡಿಯಲ್ಲಿನ ಅಪರಾಧವು 2015ರ ತಿದ್ದುಪಡಿಗೂ ಮುಂಚೆ ಇದ್ದಂತೆ, ಜಾತಿ ಗುರುತನ್ನು ಅಪರಾಧ ಸಂಭವಿಸುವ ಒಂದು ಕಾರಣವಾಗಿರುವವರೆಗೂ ಉಳಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಿದೆ (ಪಠಾನ್ ಜಮಾಲ್ ವಾಲಿ ವರ್ಸಸ್‌ ಆಂಧ್ರಪ್ರದೇಶ).

ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದ ವ್ಯಕ್ತಿಯ ವಿರುದ್ಧ ತಮ್ಮ ಜಾತಿ ಗುರುತಿನ ಕಾರಣದಿಂದ ಮಾತ್ರ ಅಪರಾಧ ನಡೆದಿಲ್ಲ ಎಂಬ ಆಧಾರದಲ್ಲಿ ಸೆಕ್ಷನ್ 3(2)(V) ಅಡಿ ರಕ್ಷಣೆ ನಿರಾಕರಿಸುವುದು ಸಾಮಾಜಿಕ ಅಸಮಾನತೆಗಳು ಒಂದುಗೂಡಿ ಹೇಗೆ ಸಂಚಿತ ಶೈಲಿಯಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುವ ಅಂಶವನ್ನು ನಿರಾಕರಿಸುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ತೀರ್ಪು ನೀಡಿದೆ.

“ಶಾಸನವು ನಿಸ್ಸಂದೇಹವಾಗಿ "on the ground (ಈ ಕಾರಣದಿಂದ/ಆಧಾರದಲ್ಲಿ)" ಎಂಬ ಪದಗಳನ್ನು ಬಳಸುತ್ತದೆ. "Ground" ಪದದ ಹಿಂದೆ " the" ಇರುವುದು ಅಪರಾಧವು ಕೇವಲ ಅದೇ ನಿರ್ದಿಷ್ಟ ಕಾರಣಕ್ಕಾಗಿ ನಡೆದಿರಬೇಕು ಎಂದು ಅರ್ಥವಲ್ಲ. ಆ ರೀತಿಯಲ್ಲಿ ನಿಬಂಧನೆಯನ್ನು ಅರ್ಥೈಸುವುದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಅವರ ಘನತೆಗೆ ಧಕ್ಕೆ ತರುವ ಹಿಂಸಾಚಾರದ ವಿರುದ್ಧ ರಕ್ಷಿಸಲು ರೂಪಿಸಲಾಗಿರುವ ಶಾಸನಾತ್ಮಕ ನಿಬಂಧನೆಯನ್ನು ದುರ್ಬಲಗೊಳಿಸುತ್ತದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಆದರೆ, ಬಹುಮುಖ್ಯವಾಗಿ ಇದೇ ವೇಳೆ ನ್ಯಾಯಾಲಯವು ಮುಂದುವರೆದು, ಕಾರಣಕ್ಕೂ ಮತ್ತು ಅನುಭವಿಸಿದ ತೊಂದರೆಗೂ ಸಾಂದರ್ಭಿಕ ಜೋಡಣೆಯನ್ನುನಿರೂಪಿಸುವುದು ಅಗತ್ಯ ಎಂದು ಸ್ಪಷ್ಟನೆ ನೀಡಿತು.

ಪರಿಶಿಷ್ಟ ಜಾತಿಗೆ ಸೇರಿದ ಅಂಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದನ್ನು ಅಪರಾಧ ಎಂದು ಎತ್ತಿಹಿಡಿದಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಕಾಯಿದೆಯ ಸೆಕ್ಷನ್‌ 3(2)(V) ಹೇಳುವುದೇನೆಂದರೆ, ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರದ ವ್ಯಕ್ತಿಯು ಭಾರತೀಯ ದಂಡ ಸಂಹಿತೆಯಡಿ ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಈಡಾಗುವಂತಹ ಅಪರಾಧವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿ ಅಥವಾ ಅವರಿಗೆ ಸೇರಿದ ಆಸ್ತಿಯ ವಿರುದ್ಧ ಎಸಗಿದರೆ ಅವರು ಜೀವಾವಧಿ ಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ.

ಸೆಷನ್ಸ್‌ ನ್ಯಾಯಾಧೀಶರು ಮೇಲ್ಮನವಿದಾರರನ್ನು ಸೆಕ್ಷನ್‌ 3(2)(V) ಮತ್ತು ಎಸ್‌ಸಿ/ಎಸ್‌ಟಿ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 376(1)ರ ಅಡಿ ಎರಡೂ ಅಪರಾಧಗಳಿಗೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದ್ದರಿಂದ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

Also Read
ಎಸ್‌ಸಿ/ಎಸ್‌ಟಿ ಕಾಯಿದೆ ಅಡಿ ಜಾಮೀನು: ಕಾಲಾನುಕ್ರಮಣಿಕೆ ನಿಗದಿಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್

ಸಂತ್ರಸ್ತರು ಎಸ್‌ಸಿ/ಎಸ್ಟಿ ಸಮುದಾಯಕ್ಕೆ ಸೇರಿದವರು ಎಂಬ 'ಒಂದು' ಕಾರಣಕ್ಕಾಗಿಯೇ ಅಪರಾಧವು ಸಂಭವಿಸಿದ್ದರೆ ಎನ್ನುವ ವ್ಯಾಖ್ಯಾನವು ನಿಬಂಧನೆಯನ್ನು ದುರ್ಬಲಗೊಳಿಸುತ್ತದೆ ಎನ್ನುವುದನ್ನು ನ್ಯಾಯಾಲಯವು ಗಮನಿಸಿತು. ಅಲ್ಲದೆ, ಅದೇ ರೀತಿ ವ್ಯಾಖ್ಯಾನಿಸಿ ಈ ಹಿಂದೆ ಸುಪ್ರೀಂ ಕೋರ್ಟ್‌ ನೀಡಿರುವ ಎರಡು ಪ್ರಕರಣಗಳ ತೀರ್ಪುಗಳನ್ನು ಉದಾಹರಿಸಿತು. ಆ ಎರಡು ತೀರ್ಪುಗಳಲ್ಲಿ ಎಸ್‌ಸಿ/ಎಸ್‌ಟಿ ಎನ್ನುವ 'ಒಂದು' ಕಾರಣಕ್ಕಾಗಿ ಮಾತ್ರವೇ ಅಪರಾಧ ಘಟಿಸಿರಬೇಕು ಎನ್ನಲಾಗಿತ್ತು. ಆದರೆ, ಆ ಎರಡು ತೀರ್ಪುಗಳನ್ನು ವಿಸ್ತೃತ ಪೀಠದ ಪರಿಗಣನೆಗೆ ಪ್ರಸಕ್ತ ಪ್ರಕರಣದ ಪೀಠವು ಸೂಚಿಸಲಿಲ್ಲ. ಇದಕ್ಕೆ ಕಾರಣ, ಪ್ರಸಕ್ತ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಸೆಕ್ಷನ್‌ 3(2)(V) ಅನ್ನು ನಿರೂಪಿಸಲು ಸೂಕ್ತ ಸಾಕ್ಷ್ಯಾಧಾರಗಳನ್ನು ಹೊಂದಿರಲಿಲ್ಲವಾದದ್ದು.

ಈ ಹಿನ್ನೆಲೆಯಲ್ಲಿ, ಐಪಿಸಿಯ ಸೆಕ್ಷನ್‌ 376ರ ಅಡಿ ಅಪರಾಧ ಮತ್ತು ಶಿಕ್ಷೆಯನ್ನು ಎತ್ತಿ ಹಿಡಿದಿರುವ ನ್ಯಾಯಾಲಯವು, ಸೆಕ್ಷನ್‌ 3(2)(V) ಅಡಿಯ ಆರೋಪದಿಂದ ಆರೋಪಿಯನ್ನು ಖುಲಾಸೆಗೊಳಿಸಿತು.

Kannada Bar & Bench
kannada.barandbench.com