ಗಣಿ ನಿರ್ವಾಹಕರು ಕೇಂದ್ರ ಸರ್ಕಾರಕ್ಕೆ ಪಾವತಿಸುವ ರಾಯಧನ ತೆರಿಗೆಯಲ್ಲ. ಗಣಿಗಾರಿಕೆ ಮತ್ತು ಅದಿರು-ಬಳಕೆ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಗುರುವಾರ ತನ್ನ ತೀರ್ಪಿನಲ್ಲಿ ಹೇಳಿದೆ [ ಖನಿಜ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಇತ್ಯಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಇನ್ನಿತರರ ನಡುವಣ ಪ್ರಕರಣ ] .
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ , ಅಭಯ್ ಎಸ್ ಓಕಾ , ಬಿವಿ ನಾಗರತ್ನ , ಜೆಬಿ ಪರ್ದಿವಾಲಾ , ಮನೋಜ್ ಮಿಶ್ರಾ , ಉಜ್ಜಲ್ ಭುಯಾನ್ , ಸತೀಶ್ ಚಂದ್ರ ಶರ್ಮಾ ಹಾಗೂ ಆಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿತು. ಇದರಲ್ಲಿ ನ್ಯಾ. ನಾಗರತ್ನ ಭಿನ್ನ ತೀರ್ಪಿತ್ತಿದ್ದಾರೆ.
ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆಯು ಖನಿಜ ಹಕ್ಕುಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸುವುದಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ತೀರ್ಪಿನೊಂದಿಗೆ ಇಂಡಿಯಾ ಸಿಮೆಂಟ್ ಲಿಮಿಟೆಡ್ ವಿರುದ್ಧ ತಮಿಳುನಾಡು ರಾಜ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು 1989ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ನ್ಯಾ. ಬಿ ವಿ ನಾಗರತ್ನ ಅವರು ಮಾತ್ರ ಬಹುಮತದ ತೀರ್ಪಿಗೆ ವಿರುದ್ಧವಾಗಿ ಭಿನ್ನ ತೀರ್ಪಿತ್ತರು.
"ರಾಯಧನವು ತೆರಿಗೆಯ ಸ್ವರೂಪದ್ದಲ್ಲ ... ರಾಯಧನವನ್ನು ತೆರಿಗೆ ಎಂದು ತಿಳಿಸುವ ಇಂಡಿಯಾ ಸಿಮೆಂಟ್ಸ್ ತೀರ್ಪಿನ ಅವಲೋಕನ ತಪ್ಪು ಎಂದು ನಾವು ಇದೀಗ ನಿರ್ಣಯಿಸಿದ್ದೇವೆ ... ಸರ್ಕಾರಕ್ಕೆ ಮಾಡಲಾಗುವ ಪಾವತಿಗಳನ್ನು ಕೇವಲ ಕಾನೂನೊಂದು ಬಾಕಿ ವಸೂಲಾತಿಗೆ ಅವಕಾಶ ನೀಡುತ್ತದೆ ಎಂದ ಮಾತ್ರಕ್ಕೆ ತೆರಿಗೆ ಎಂದು ಪರಿಗಣಿಸಲಾಗದು” ಎಂಬುದಾಗಿ ಸಿಜೆಐ ಚಂದ್ರಚೂಡ್ ಬಹುಮತದ ತೀರ್ಪು ಓದಿದರು.
ಪರಿಣಾಮವಾಗಿ, ಗಣಿಗಾರಿಕೆ ಅಥವಾ ಸಂಬಂಧಿತ ಚಟುವಟಿಕೆಗಳ ಮೇಲೆ ಸೆಸ್ ವಿಧಿಸುವ ಅಧಿಕಾರವನ್ನು ರಾಜ್ಯಗಳಿಗೆ ನಿರಾಕರಿಸುವಂತಿಲ್ಲ ಎಂದು ಪೀಠದ ಬಹುತೇಕ ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಆದರೆ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಎರಡೂ ಅಂಶಗಳಲ್ಲಿ ವ್ಯತಿರಿಕ್ತ ತೀರ್ಪು ನೀಡಿದರು. ಗಣಿ ಮತ್ತು ಖನಿಜಭರಿತ ಭೂಮಿಗೆ ತೆರಿಗೆ ವಿಧಿಸಲು ರಾಜ್ಯಗಳಿಗೆ ಶಾಸನಾತ್ಮಕ ಸಾಮರ್ಥ್ಯ ಇಲ್ಲ. ಇಂಡಿಯಾ ಸಿಮೆಂಟ್ ಪ್ರಕರಣದಲ್ಲಿ ನೀಡಲಾದ ತೀರ್ಪು ಸೂಕ್ತವಾಗಿಯೇ ಇದೆ ಎಂದು ಅವರು ನುಡಿದರು.
ಇಂದಿನ ಈ ತೀರ್ಪಿನ ಪರಿಣಾಮವಾಗಿ ಈ ಹಿಂದಿನ ವಹಿವಾಟಿನ ಪರಿಣಾಮ ಬೀರುವುದಿಲ್ಲ ಎಂಬ ಕುರಿತು ಸ್ಪಷ್ಟನೆ ನೀಡುವಂತೆ ವಿವಿಧ ಅರ್ಜಿದಾರರು ನ್ಯಾಯಾಲಯವನ್ನು ಕೋರಿದರು.
ಪ್ರತಿಯಾಗಿ, ಜುಲೈ 31 ರಂದು ಈ ಒಂದು ಅಂಶದ ಕುರಿತು ಸ್ಪಷ್ಟನೆ ನೀಡಲು ಪೀಠ ಸಮ್ಮತಿಸಿತು.
ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯಿದೆ (ಗಣಿ ಕಾಯಿದೆ) ಜಾರಿಗೊಳಿಸುವ ದೃಷ್ಟಿಯಿಂದ ರಾಜ್ಯ ಸರ್ಕಾರಗಳಿಗೆ ಗಣಿ ಮತ್ತು ಖನಿಜಗಳ ಮೇಲೆ ತೆರಿಗೆ ವಿಧಿಸುವ ಮತ್ತು ನಿಯಂತ್ರಿಸುವ ಅಧಿಕಾರ ನಿರಾಕರಿಸಲಾಗಿದೆಯೇ ಎಂಬುದು ದಾವೆಗೆ ಮುಖ್ಯ ಕಾರಣವಾಗಿತ್ತು.
ಪ್ರಕರಣ ಸುಪ್ರೀಂ ಕೋರ್ಟ್ 9 ನ್ಯಾಯಮೂರ್ತಿಗಳ ಪೀಠದಲ್ಲಿ ಬಾಕಿ ಉಳಿದಿರುವ ಅತಿ ಹಳೆಯ ಪ್ರಕರಣ ಎನಿಸಿಕೊಂಡಿತ್ತು. ಮಾರ್ಚ್ 14 ರಂದು ಸುಪ್ರೀಂ ಕೋರ್ಟ್ ತೀರ್ಪು ಕಾಯ್ದಿರಿಸಿತ್ತು .