ಮಾಧ್ಯಮ ಸ್ವಾತಂತ್ರ್ಯದ ವಿಚಾರದಲ್ಲಿ ಭಾರತ 161ನೇ ಸ್ಥಾನದಲ್ಲಿದೆ ಎಂದು ಇತ್ತೀಚಿನ ಜಾಗತಿಕ ಮಾಧ್ಯಮ ಸೂಚ್ಯಂಕದಲ್ಲಿ ಭಾರತ ಪಡೆದ ಸ್ಥಾನವನ್ನು ಉಲ್ಲೇಖಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿತು.
ಆದರೆ ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿಯಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಂತಹ ಶ್ರೇಯಾಂಕಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.
ಗುಜರಾತ್ ಗಲಭೆ ವೇಳೆ ಬಿಲ್ಕಿಸ್ ಬಾನೊ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ 11 ಅಪರಾಧಿಗಳಿಗೆ ಗುಜರಾತ್ ಸರ್ಕಾರ ನೀಡಿದ ಕ್ಷಮಾದಾನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಕೊನೆಗೆ ಈ ಮಾತಿನ ವಿನಿಮಯ ನಡೆಯಿತು.
ಪತ್ರಿಕೋದ್ಯಮ ಸ್ವಾತಂತ್ರ್ಯದ ವಿಷಯದಲ್ಲಿ ನಾವು 161 ಆಗಿದ್ದೇವೆ ಎಂದು ಪೀಠದ ನೇತೃತ್ವ ವಹಿಸಿದ್ದ ನ್ಯಾ. ಕೆ ಎಂ ಜೋಸೆಫ್ ಹೇಳಿದರು.
ಆದರೆ ಮೆಹ್ತಾ “ಶ್ರೇಯಾಂಕ ನೀಡುವ ವ್ಯಕ್ತಿಯನ್ನು ಇದು ಅವಲಂಬಿಸಿರುತ್ತದೆ. ಭಾರತಕ್ಕೆ ನಂಬರ್ ಒನ್ ಸ್ಥಾನ ಕೊಡುವವರೂ ಸಿಗುತ್ತಾರೆ. ಆದ್ದರಿಂದ ಇದು ಸಂಪೂರ್ಣ ಅವಲಂಬಿತವಾಗಿರುತ್ತದೆ” ಎಂದು ಪ್ರತಿಕ್ರಿಯಿಸಿದರು.
ನೋಟಿಸ್ ಜಾರಿಯಾಗದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿರುವ ಸಂಬಂಧ ಮಾಹಿತಿಯನ್ನು ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ಸೂಚಿಸುವ ಸಂದರ್ಭದಲ್ಲಿ ಈ ಮಾತುಗಳು ವ್ಯಕ್ತವಾಗಿವೆ. ಗುಜರಾತ್ ಸಮಾಚಾರ್ ಮತ್ತು ಸಂದೇಶ್ ಪತ್ರಿಕೆಗಳಲ್ಲಿ ನೋಟಿಸ್ ಪ್ರಕಟಿಸುವಂತೆ ನ್ಯಾಯಾಲಯ ಸೂಚಿಸಿತು.
ರಾಜಕೀಯ ಸೂಕ್ಷ್ಮ ವಿಚಾರಗಳಲ್ಲಿ ನ್ಯಾಯಾಲಯ ಮತ್ತು ಸಾಲಿಸಿಟರ್ ಜನರಲ್ ನಡುವೆ ಘರ್ಷಣೆ ನಡೆಯುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ವೇಳೆ ನ್ಯಾ. ಜೋಸೆಫ್ ನೇತೃತ್ವದ ಪೀಠದೊಂದಿಗೆ ಎಸ್‌ಜಿ ತೀವ್ರ ವಾಗ್ವಾದ ನಡೆಸಿದ್ದರು.