ರೈತ ನಾಯಕ ಡಲ್ಲೇವಾಲ್ ಉಪವಾಸ ಸತ್ಯಾಗ್ರಹ ಮುರಿಯವ ಉದ್ದೇಶ ತನ್ನ ಆದೇಶಗಳಿಗೆ ಇರಲಿಲ್ಲ: ಸುಪ್ರೀಂ ಕೋರ್ಟ್

ಡಲ್ಲೇವಾಲ್ ಅವರಿಗೆ ವೈದ್ಯಕೀಯ ನೆರವು ನೀಡುವಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಪಂಜಾಬ್ ಮತ್ತು ಕೇಂದ್ರ ಸರ್ಕಾರಗಳಿಗೆ ಆದೇಶಿಸಿತ್ತು.
Farmers Protest
Farmers Protest
Published on

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಒದಗಿಸಲು ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ನಾಯಕ ಜಗಜಿತ್ ಸಿಂಗ್ ಡಲ್ಲೇವಾಲ್‌ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಭಂಗ ತರುವ ಉದ್ದೇಶದಿಂದ ತಾನು ಆದೇಶಗಳನ್ನು ನೀಡಿರಲಿಲ್ಲ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಸ್ಪಷ್ಟಪಡಿಸಿದೆ.

ತಾವು ವೈದ್ಯಕೀಯ ನೆರವು ಪಡೆದರೆ ರೈತ ಆಂದೋಲನ ದುರ್ಬಲಗೊಳ್ಳುತ್ತದೆ ಎಂದು ಡಲ್ಲೇವಾಲ್‌ ಅವರು ಚಿಂತಿತರಾಗಬೇಕಿಲ್ಲ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ತಿಳಿಸಿತು.

Also Read
ರೈತ ನಾಯಕನಿಗೆ ವೈದ್ಯಕೀಯ ನೆರವು: ಅಸಹಾಯಕತೆ ವ್ಯಕ್ತಪಡಿಸಿದ ಪಂಜಾಬ್ ಸರ್ಕಾರದ ವಿರುದ್ಧ ಕೆಂಡಕಾರಿದ ಸುಪ್ರೀಂ ಕೋರ್ಟ್‌

ವೈದ್ಯಕೀಯ ನೆರವು ದೊರಕಿಸಿಕೊಡುವ ಮೂಲಕ ಪ್ರತಿಭಟನೆ ಮುರಿಯಬಹುದು ಎಂಬ ಅಭಿಪ್ರಾಯ ಸೃಷ್ಟಿಯಾಗಲು ಕಾರಣವಾದ ಮಾಧ್ಯಮ ವರದಿಗಳು ಮತ್ತು ಪಂಜಾಬ್‌ ಸರ್ಕಾರದ ನಿಷ್ಕ್ರಿಯತೆಯನ್ನು ಅದು ಇದೇ ವೇಳೆ ಟೀಕಿಸಿತು.

ಪಂಜಾಬ್‌ ಸರ್ಕಾರಿ ಅಧಿಕಾರಿಗಳು ಮಾಧ್ಯಮಗಳಲ್ಲಿ ನ್ಯಾಯಾಲಯವೇ ಉದ್ದೇಶಪೂರ್ವಕವಾಗಿ ಡಲ್ಲೇವಾಲ್‌ ಅವರ ಉಪವಾಸ ಸತ್ಯಾಗ್ರಹ ಮುರಿಯುವಂತೆ ಒತ್ತಡ ಹೇರುತ್ತಿದೆ ಎಂಬ ಅನಿಸಿಕೆಗೆ ಕಾರಣವಾಗಿದ್ದಾರೆ. ಅವರ ಉಪವಾಸ ಸತ್ಯಾಗ್ರಹಕ್ಕೆ ಭಂಗ ತರಲೆಂದು ನಾವು ಆದೇಶ ನೀಡಿರಲಿಲ್ಲ ಬದಲಿಗೆ ಅವರ ಪ್ರಾಣಕ್ಕೆ ಹಾನಿಯಾಗಬಾರದು ಎಂಬುದು ನಮ್ಮ ಕಾಳಜಿಯಾಗಿತ್ತು. ರೈತ ನಾಯಕರಾಗಿ ಅವರ ಜೀವ ಅತ್ಯಮೂಲ್ಯವಾದುದು. ಅವರು ಯಾವುದೇ ರಾಜಕೀಯ ಸಿದ್ದಾಂತಗಳೊಂದಿಗೆ ರಾಜಿಯಾಗದೆ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ ಎಂದು ಪೀಠ ವಿವರಿಸಿತು.

ಈ ಹಂತದಲ್ಲಿ ವಾದ ಮಂಡಿಸಿದ ಪಂಜಾಬ್‌ ಅಡ್ವೊಕೇಟ್‌ ಜನರಲ್‌ ಗುರ್ಮಿಂದರ್ ಸಿಂಗ್ ಅವರು ರಾಜ್ಯ ಸರ್ಕಾರ ಸಂಧಾನಕಾರರನ್ನೊಳಗೊಂಡ ಸಮಿತಿ ರಚಿಸಿದ್ದು ಡಲ್ಲೇವಾಲ್‌ ಅವರಿಗೆ ಅಗತ್ಯ ಸಹಾಯ ನೀಡಲು ಯತ್ನಿಸುತ್ತಿದೆ ಎಂದರು.

ಆದರೆ ರೈತರ ಸಮಸ್ಯೆ ಪರಿಹರಿಸಲು ತಾನು ಸಿದ್ಧವಿರುವುದಾಗಿ ಸರ್ಕಾರ ಪ್ರತಿಭಟನಾಕಾರರಿಗೆ ತಿಳಿಸಿದೆಯೇ ಎಂದು ನ್ಯಾ. ಸೂರ್ಯ ಕಾಂತ್‌ ಪ್ರಶ್ನಿಸಿದರು.

Also Read
ರೈತರ ಪ್ರತಿಭಟನೆ: ಹೆದ್ದಾರಿ ತಡೆಯದಂತೆ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್‌ಗೆ ಸುಪ್ರೀಂ ಕೋರ್ಟ್ ಸೂಚನೆ

"ಈ ಉದ್ದೇಶಕ್ಕಾಗಿಯೇ ಸಮಿತಿ ರಚಿಸಲಾಗಿದೆ ಎಂದು ನೀವು ಅವರಿಗೆ ಎಂದಾದರೂ ಹೇಳಿದ್ದೀರಾ? ನಾವು ಮಾತನಾಡುವಂತೆ ಮಾಡಬೇಡಿ. ಯಾವುದೇ ರಾಜಿಯಾಗಬಾರದು ಎಂಬುದು ನಿಮ್ಮ ಧೋರಣೆ. ಅದೇ ಸಮಸ್ಯೆ… ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುವ ಜನರಿದ್ದಾರೆ. ಹೀಗೆ ಮಾಡುವ ರೈತ ನಾಯಕರಿದ್ದಾರೆ. ಡಲ್ಲೇವಾಲ್‌ ಅವರೆಡೆಗಿನ ಅವರ ಪ್ರಾಮಾಣಿಕತೆಯನ್ನು ಸಹ ನೋಡಬೇಕಿದೆ” ಎಂದು ನ್ಯಾಯಾಲಯ ಕಿವಿಹಿಂಡಿತು.

ಈ ವೇಳೆ ಪ್ರತಿಕ್ರಿಯಿಸಿದ ಸಿಂಗ್‌ “ನಮ್ಮ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ನಮಗೆ ಸ್ವಲ್ಪ ಕಾಲಾವಕಾಶ ಕೊಡಿ. ಪರಿಸ್ಥಿತಿಯನ್ನು ನಿಭಾಯಿಸಲ ಯತ್ನಿಸುತ್ತಿದ್ದೇವೆ” ಎಂದರು. ಅಂತೆಯೇ ಪ್ರಕರಣದ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಲು ನ್ಯಾಯಾಲಯ ಸಮ್ಮತಿಸಿತು.

Kannada Bar & Bench
kannada.barandbench.com