ಸಲಿಂಗ ವಿವಾಹಕ್ಕೆ ಮಾನ್ಯತೆ ಶಾಸಕಾಂಗಕ್ಕೆ ಬಿಟ್ಟ ವಿಚಾರ ಎಂದ ಸುಪ್ರೀಂ; ಮದುವೆ ಹಣೆಪಟ್ಟಿ ಹೊರತಾದ ಹಕ್ಕು ನೀಡಲು ಸಲಹೆ

ನ್ಯಾಯಾಂಗ ಈ ಕ್ಷೇತ್ರವನ್ನು ಪ್ರವೇಶಿಸಿದರೆ ಅದು ಶಾಸಕಾಂಗದ ವಿಚಾರವಾಗುತ್ತದೆ ಎಂಬ ಕಾರಣದಿಂದ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ಸಿಜೆಐ ತಿಳಿಸಿದರು.
Same sex marriage and Supreme Court
Same sex marriage and Supreme Court

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದು ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವಾಗಿದೆ. ಆದರೆ ಸಲಿಂಗ ಜೋಡಿಗೆ ಸಾಮಾಜಿಕ ಮತ್ತಿತರ ಸೌಲಭ್ಯಗಳನ್ನು ಹಾಗೂ ಮದುವೆಯ ಹಣೆಪಟ್ಟಿ ಇಲ್ಲದೆ ಕಾನೂನು ಹಕ್ಕುಗಳು ದೊರಕಿಸಿಕೊಡುವಂತೆ ನೋಡಿಕೊಳ್ಳುವ ಸಲುವಾಗಿ ನ್ಯಾಯಾಲಯ ಸಲಿಂಗ ವಿವಾಹ ಪ್ರಕರಣದ ವಿಚಾರಣೆ ನಡೆಸಿತು ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ.

ಸಲಿಂಗ ವಿವಾಹಗಳಿಗೆ ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಕಳೆದ ಎರಡು ವಾರಗಳಿಂದ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದು ಗುರುವಾರದ ವಿಚಾರಣೆ ವೇಳೆ ಕನಿಷ್ಠ ಮೂವರು ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಪೀಠದ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು, ಮದುವೆಯ ವಿಚಾರ ಪರಿಶೀಲಿಸಲು ಪೀಠ ಒಲವು ಹೊಂದಿರಲಿಲ್ಲ ಬದಲಿಗೆ ಸಲಿಂಗ ಮನೋಧರ್ಮದ ಇಬ್ಬರು ವ್ಯಕ್ತಿಗಳು ಸಹಬಾಳ್ವೆ ನಡೆಸಲು ಹಾಗೂ ಅಂತಹವರಿಗೆ ಕಾನೂನು ಮಾನ್ಯತೆ ಹಕ್ಕು ನೀಡುವ ಕುರಿತು ಆಲೋಚಿಸಿತ್ತು ಎಂದರು.

“ಒಟ್ಟಿಗೆ ಬಾಳುವೆ ನಡೆಸುವ ಹಕ್ಕಿಗೆ ಮನ್ನಣೆ ಇದೆ ಎಂದು ನೀವು ಒಮ್ಮೆ ಹೇಳಿದರೆ ಅದು ಸುಸ್ಥಿರ ಸಂಬಂಧದ ಲಕ್ಷಣವಾಗಬಹುದು. ಜೊತೆಗೆ ಒಟ್ಟಿಗೆ ಬಾಳುವೆ ನಡೆಸುವ ಹಕ್ಕು ಮೂಲಭೂತ ಹಕ್ಕು ಎಂದು ಒಮ್ಮೆ ಹೇಳಿದರೆ ಒಟ್ಟಿಗೆ ಬಾಳುವಿಕೆಯ ಎಲ್ಲಾ ಸಾಮಾಜಿಕ ಪರಿಣಾಮಗಳಿಗೆ ಕಾನೂನು ಮಾನ್ಯತೆ ನೀಡುವುದು ಸರ್ಕಾರದ ಹೊಣೆಗಾರಿಕೆಯಾಗುತ್ತದೆ. ನಾವು ಮದುವೆಯ ವಿಚಾರಕ್ಕೆ ಹೋಗುವುದಿಲ್ಲ” ಎಂದು ಅವರು ಹೇಳಿದರು.

ಒಟ್ಟಿಗೆ ಬಾಳುವಿಕೆ ನಡೆಸಲು, ಸಂಗಾತಿ ಆಯ್ಕೆ ಮಾಡಲು ಸಲಿಂಗ ವ್ಯಕ್ತಿಗಳಿಗೆ ಮೂಲಭೂತ ಹಕ್ಕಿದ್ದರೂ ಅದಕ್ಕೆ ಮದುವೆಯ ಅರ್ಥ ಕಲ್ಪಿಸಲಾಗದು ಎಂದು ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ವಾದಕ್ಕೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ತಿಳಿಸಿದೆ.

ನ್ಯಾ ಪಿ ಎಸ್‌ ನರಸಿಂಹ ಅವರು “ಮಾನ್ಯತೆಯನ್ನು ವಿವಾಹದ ಮಾನ್ಯತೆ ಎಂದೇ ಗುರುತಿಸಬೇಕಿಲ್ಲ ಆದರೆ ಸಲಿಂಗ ಜೋಡಿಗೆ ಕೆಲ ಸೌಲಭ್ಯಗಳನ್ನು ಒದಗಿಸುವಂತಹ ಮಾನ್ಯತೆ ನೀಡಬಹುದು ಎಂದು ಸಲಹೆ ನೀಡಿದರು. ನ್ಯಾ. ರವೀಂದ್ರ ಭಟ್‌ ಕೂಡ ಇದೇ ಬಗೆಯ ಅಭಿಪ್ರಾಯ ವ್ಯಕ್ತಪಡಿಸಿದರು. ʼಮದುವೆಯಲ್ಲ ಬದಲಿಗೆ ಬೇರೊಂದು ಮಾನ್ಯತೆ ಅಗತ್ಯವಿದೆʼ ಎಂದು ಅವರು ತಿಳಿಸಿದರು.

ನ್ಯಾಯಾಂಗ ಈ ಕ್ಷೇತ್ರವನ್ನು ಪ್ರವೇಶಿಸಿದರೆ ಅದು ಶಾಸಕಾಂಗದ ವಿಚಾರವಾಗುತ್ತದೆ ಎಂಬ ಕಾರಣದಿಂದ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದು ಸಿಜೆಐ ಚಂದ್ರಚೂಡ್‌ ತಿಳಿಸಿದರು.

ಒಟ್ಟಿಗೆ ಬಾಳುವಿಕೆ ನಡೆಸುವ ಸಂಬಂಧದ ಕುರಿತಂತೆ  ಸರ್ಕಾರ ಏನು ಮಾಡಲು ಉದ್ದೇಶಿಸಿದೆ ಮತ್ತು ಅಂತಹ ಸಂಬಂಧಗಳಿಗೆ ಭದ್ರತೆ ಮತ್ತು ಸಾಮಾಜಿಕ ಕಲ್ಯಾಣದ ಪ್ರಜ್ಞೆಯನ್ನು ಹೇಗೆ ಬೆಳೆಸಲು ಯೋಜಿಸಿದೆ ಎಂದು ಸಿಜೆಐ ಪ್ರಶ್ನಿಸಿದರು. ಅಂತಹ ಸಂಬಂಧದಲ್ಲಿರುವ ಜನರು ಬಹಿಷ್ಕಾರಕ್ಕೊಳಗಾಗದಂತೆ ನೋಡಿಕೊಳ್ಳುವ ಮಹತ್ವವನ್ನು ಸಿಜೆಐ ಒತ್ತಿ ಹೇಳಿದರು.

ಈ ಸಮಸ್ಯೆ ಅಥವಾ ತೊಂದರೆ ಪರಿಹರಿಸಲು ಕೇಂದ್ರ ಸರ್ಕಾರ ಸಹಾಯ ಮಾಡಬಹುದು. ಆದರೆ ಯಾವುದೇ ಕಾನೂನು ಮಾನ್ಯತೆ ಅಥವಾ ವಿವಾಹದ ಸ್ಥಾನಮಾನ ನೀಡಲಾಗದು ಎಂದು ಎಸ್‌ ಜಿ ತುಷಾರ್‌ ಮೆಹ್ತಾ ಹೇಳಿದರು.

ಆಗ ಸಿಜೆಐ, ಎಸ್‌ಇ ಅವರು ಸೂಕ್ತ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಕರಣದ ಮುಂದಿನ ವಿಚಾರಣೆಯ ದಿನವಾದ ಮೇ 3ರಂದು ಪ್ರತಿಕ್ರಿಯಿಸಬಹುದು ಎಂದರು. “ವಿರುದ್ಧವಲ್ಲದ ರೀತಿಯಲ್ಲಿ ನಮಗೆ ಸಹಾಯ ಮಾಡಲು ವಿನಂತಿಸುತ್ತೇವೆ” ಎಂದು ನುಡಿದರು.

Related Stories

No stories found.
Kannada Bar & Bench
kannada.barandbench.com