ಸರ್ದೇಸಾಯಿ ವಿರುದ್ಧ ನಿಂದನಾ ಪ್ರಕ್ರಿಯೆ ಇಲ್ಲ; ಅಲಕ್ಷ್ಯದಿಂದ ಮಾಹಿತಿ ನವೀಕರಣ: ಸುಪ್ರೀಂ ಸ್ಪಷ್ಟನೆ

ಹಿರಿಯ ಪತ್ರಕರ್ತ ರಾಜದೀಪ್‌ ವಿರುದ್ಧದ ನ್ಯಾಯಾಂಗ ನಿಂದನಾ ಮನವಿಯನ್ನು ಸ್ವಯಂ ಪ್ರೇರಿತವಾಗಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಅರ್ಜಿಯನ್ನಾಗಿ ಪರಿಗಣಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಮಂಗಳವಾರ ನವೀಕರಣ ಮಾಡಲಾಗಿತ್ತು.
Supreme Court
Supreme Court
Published on

ಹಿರಿಯ ಪತ್ರಕರ್ತ ರಾಜದೀಪ್‌ ಸರ್ದೇಸಾಯಿ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಮಂಗಳವಾರ ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ. ಸರ್ದೇಸಾಯಿ ವಿರುದ್ಧದ ಪ್ರಕರಣವನ್ನು ಸ್ವಯಂಪ್ರೇರಿತವಾಗಿ ನ್ಯಾಯಾಲಯ ಪರಿಗಣಿಸಿದೆ ಎಂದು ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ನವೀಕರಿಸಲಾದ ಮಾಹಿತಿಯು ಅಜಾಗರೂಕತೆಯಿಂದ ಆದ ಪ್ರಮಾದ ಎಂಬುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದೆ.

ಈ ಸಂಬಂಧದ ತಪ್ಪನ್ನು ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಅಧಿಕಾರಿಯೊಬ್ಬರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ.

“ರಾಜದೀಪ್‌ ಸರ್ದೇಸಾಯಿ ವಿರುದ್ಧ ಸ್ವಯಂಪ್ರೇರಿತವಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲಾಗಿದೆ ಎಂಬ ಮಾಹಿತಿಯನ್ನು ಕೆಲವು ಸುದ್ದಿ ವಾಹಿನಿಗಳಲ್ಲಿ ಬಿತ್ತರಿಸಲಾಗಿದೆ. ಈ ಮೂಲಕ ಅಂಥ ಯಾವುದೇ ಪ್ರಕ್ರಿಯೆಯನ್ನು ಸರ್ದೇಸಾಯಿ ವಿರುದ್ಧ ಆರಂಭಿಸಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಪ್ರಕರಣದ ಸಂಖ್ಯೆ ಎಸ್‌ಎಂಸಿ (ಸಿಆರ್‌ಎಲ್‌) 02/2021 ರಲ್ಲಿನ ಸ್ಥಿತಿಗತಿಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ. ಪ್ರಮಾದವನ್ನು ಸರಿಪಡಿಸುವ ಪ್ರಕ್ರಿಯೆ ನಡೆದಿದೆ,” ಎಂದು ಸುಪ್ರೀಂ ಕೋರ್ಟ್‌ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯಲ್ಲಿ ವಿವರಿಸಲಾಗಿದೆ.
Also Read
ಎಜಿ ಒಪ್ಪಿಗೆ ನಿರಾಕರಿಸಿದ ತಿಂಗಳುಗಳ ಬಳಿಕ ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡ ಸುಪ್ರೀಂ

ವಕೀಲೆ ಆಸ್ತಾ ಖುರಾನಾ ಎಂಬವರ ಮನವಿಯನ್ನು ಆಧರಿಸಿ ಸರ್ದೇಸಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ವಿವರಿಸಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಖುರಾನಾ ಮನವಿ ಸಲ್ಲಿಸಿದ್ದು, ಈ ವರ್ಷದ ಫೆಬ್ರುವರಿಯಲ್ಲಿ ಸರ್ದೇಸಾಯಿ ವಿರುದ್ಧ ಸ್ವಯಂಪ್ರೇರಿತವಾಗಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಸರ್ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿದ್ದ ಖುರಾನಾ ಮನವಿಗೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅಸಮ್ಮತಿಸಿದ್ದರು.

Kannada Bar & Bench
kannada.barandbench.com