ಸರ್ವೋಚ್ಚ ನ್ಯಾಯಾಲಯದ ವಿರುದ್ಧ ಯತಿ ನರಸಿಂಗಾನಂದ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಸಾಮಾಜಿಕ ಹೋರಾಟಗಾರ್ತಿ ಶಚಿ ನೆಲ್ಲಿ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ನರಸಿಂಗಾನಂದ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ [ಶಚಿ ನೆಲ್ಲಿ ಮತ್ತು ಯತಿ ನರಸಿಂಗಾನಂದ ಅಲಿಯಾಸ್ ದೀಪಕ್ ತ್ಯಾಗಿ ನಡುವಣ ಪ್ರಕರಣ].
ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ಎಂ ಎಂ ಸುಂದರೇಶ್ ಅವರಿದ್ದ ಪೀಠ ಈ ಸೂಚನೆ ನೀಡಿದೆ. ರಾಜಕಾರಣಿಗಳು, ಸುಪ್ರೀಂ ಕೋರ್ಟ್ ಹಾಗೂ ಸೈನ್ಯದ ವ್ಯವಸ್ಥೆ ನಂಬುವವರೆಲ್ಲರೂ ನಾಯಿಗಳು ಸತ್ತಂತೆ ಸಾಯಲಿದ್ದಾರೆ ಎಂಬರ್ಥದ ಮಾತುಗಳನ್ನು ನರಸಿಂಗಾನಂದ ಆಡಿದ್ದರು ಎಂಬುದಾಗಿ ಅರ್ಜಿಯಲ್ಲಿ ದೂರಲಾಗಿದೆ.
ಜನವರಿ 2022 ರಲ್ಲಿ, ಮಾಜಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ನರಸಿಂಗಾನಂದರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ನೆಲ್ಲಿ ಅವರಿಗೆ ಸಮ್ಮತಿ ನೀಡಿದ್ದರು. ನರಸಿಂಗಾನಂದರ ಹೇಳಿಕೆಗಳು ಸಾಮಾನ್ಯ ಜನರ ಮನಸ್ಸಿನಲ್ಲಿ ಸುಪ್ರೀಂ ಕೋರ್ಟ್ ಹಿರಿಮೆಯನ್ನು ಕಡಿಮೆ ಮಾಡುವ ನೇರ ಯತ್ನವಾಗಿದೆ ಎನ್ನುವುದು ಎಜಿ ವೇಣುಗೋಪಾಲ್ ಅವರ ಅಭಿಪ್ರಾಯವಾಗಿತ್ತು.
ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 15 ರ ಪ್ರಕಾರ, ಖಾಸಗಿ ವ್ಯಕ್ತಿಯೊಬ್ಬರು ಸಲ್ಲಿಸಿದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ಒಳಪಡಿಸುವ ಮೊದಲು ಅಟಾರ್ನಿ ಜನರಲ್ ಅವರು ಒಪ್ಪಿಗೆ ನೀಡುವ ಅಗತ್ಯವಿದೆ.
ಟ್ವಿಟರ್‌ನಲ್ಲಿ ವೈರಲ್ ಆದ ಸಂದರ್ಶನವೊಂದರಲ್ಲಿ ʼನಮಗೆ ಸುಪ್ರೀಂ ಕೋರ್ಟ್ ಮತ್ತು ಸಂವಿಧಾನದಲ್ಲಿ ನಂಬಿಕೆ ಇಲ್ಲ. ಈ ದೇಶದ 100 ಕೋಟಿ ಹಿಂದೂಗಳನ್ನು ಸಂವಿಧಾನ ಸ್ವಾಹ ಮಾಡುತ್ತದೆ. ಈ ಸಂವಿಧಾನವನ್ನು ಯಾರು ನಂಬುತ್ತಾರೋ ಅವರನ್ನು ಕೊಲ್ಲಲಾಗುತ್ತದೆ," ಎಂದು ನರಸಿಂಗಾನಂದ ತಿಳಿಸಿದ್ದಾಗಿ ನೆಲ್ಲಿ ಅವರು ವಿವರಿಸಿದ್ದರು. ಹರಿದ್ವಾರ ದ್ವೇಷ ಭಾಷಣ ಪ್ರಕರಣಗಳ ವಿಚಾರಣೆಯ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ನರಸಿಂಗಾನಂದ ಈ ಹೇಳಿಕೆಗಳನ್ನು ನೀಡಿದ್ದರು ಎನ್ನಲಾಗಿದೆ.