
ಕಾನೂನು ವಿದ್ಯಾರ್ಥಿಗಳ ಕ್ರಿಮಿನಲ್ ಹಿನ್ನೆಲೆಯ ಕಡ್ಡಾಯ ಪರಿಶೀಲನೆ, ಕಾನೂನು ಕಾಲೇಜುಗಳಲ್ಲಿ ಸಿಸಿಟಿವಿ ಅಳವಡಿಕೆ, ವಿದ್ಯಾರ್ಥಿಗಳು ಬೇರಾವುದೇ ಪದವಿ ವ್ಯಾಸಂಗದಲ್ಲಿ ನಿರತರೇ, ಅವರ ಔದ್ಯೋಗಿಕ ಸ್ಥಿತಿ ಹಾಗೂ ತರಗತಿಗಳ ಹಾಜರಾತಿ ಪರಿಶೀಲನೆ ಸಂಬಂಧ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಸೆಪ್ಟೆಂಬರ್ 2024ರಲ್ಲಿ ನೀಡಿದ್ದ ಎರಡು ಸುತ್ತೋಲೆಗಳನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಬಿಸಿಐ ಪ್ರತಿಕ್ರಿಯೆ ಕೇಳಿದೆ [ಪ್ರಕೃತಿ ಜೈನ್ ಮತ್ತು ಬಿಸಿಐ ನಡುವಣ ಪ್ರಕರಣ].
ಹೈದರಾಬಾದ್‌ನ ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಾದ ಪ್ರಕೃತಿ ಜೈನ್ ಮತ್ತು ಸಿಂಬಯೋಸಿಸ್ ಕಾನೂನು ಶಾಲೆಯ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿ ಕೆಯೂರ್ ಅಕ್ಕಿರಾಜು ಅವರು ಸಲ್ಲಿಸಿದ್ದ ಅರ್ಜಿಗಳ ಸಂಬಂಧ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಬಿಸಿಐಗೆ ನೋಟಿಸ್ ನೀಡಿದೆ.
ದೇಶದ ಎಲ್ಲಾ ಕಾನೂನು ಶಿಕ್ಷಣ ಕೇಂದರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಸಿಐ ಸೆಪ್ಟೆಂಬರ್ 2024ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಅಲ್ಲದೆ ತನ್ನ ಅಧಿಸೂಚನೆಯನ್ನು ಕೂಡಲೇ ಜಾರಿಗೆ ತರುವಂತೆ ಸೂಚಿಸಿತ್ತು.
ಅಧಿಸೂಚನೆ ಪ್ರಕಾರ ಕಾನೂನು ವಿದ್ಯಾರ್ಥಿಗಳು ಪದವಿ ಹಾಗೂ ಅಂಕಪಟ್ಟಿ ಪಡೆಯುವ ಮುನ್ನ ತಮ್ಮ ಎಲ್‌ಎಲ್‌ಬಿ ಅಧ್ಯಯನದ ವೇಳೆ ಇಲ್ಲವೇ ಅದಕ್ಕೂ ಹಿಂದೆ ಎಸಗಲಾಗಿರುವ ಅಪರಾಧದ ವಿವರಗಳನ್ನು ಸಲ್ಲಿಸಬೇಕಿತ್ತು. ಜೊತೆಗೆ ವಿದ್ಯಾರ್ಥಿಗಳು ಬೇರಾವುದೇ ಪದವಿ ವ್ಯಾಸಂಗದಲ್ಲಿ ನಿರತರೇ ಎಂಬುದನ್ನು ತಿಳಿಸುವ ಜೊತೆಗೆ ಅವರ ಔದ್ಯೋಗಿಕ ಸ್ಥಿತಿ ಕುರಿತು ವಿವರವಾದ ಘೋಷಣೆ ಸಲ್ಲಿಸಬೇಕಿತ್ತು.
ಆದರೆ ಬಿಸಿಐನ ಸುತ್ತೋಲೆಗಳು ಸಂವಿಧಾನದ 14, 19 (1) (ಎ), 19 (1) (ಜಿ), ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಎಂದು ವಿದ್ಯಾರ್ಥಿಗಳು ವಾದಿಸಿದ್ದಾರೆ. ಬಿಸಿಐ ಕ್ರಮಗಳು ಮನಸೋಇಚ್ಛೆಯಿಂದ ಕೂಡಿದ್ದು ತರ್ಕಬದ್ಧ ಆಧಾರ ಒಳಗೊಂಡಿಲ್ಲ. ಪರಿಣಾಮ ಕಾನೂನು ಶಿಕ್ಷಣ ಸಂಸ್ಥೆಗಳು ಮತ್ತು ಮಧ್ಯಸ್ಥಗಾರರ ಸ್ವಾಯತ್ತತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಆಕ್ಷೇಪಾರ್ಹ ಸುತ್ತೋಲೆಗಳು, ಕಾನೂನು ವೃತ್ತಿಯ ನೈತಿಕ ಮಾನದಂಡಗಳನ್ನು ಎತ್ತಿಹಿಡಿಯುವ ನೆವದಲ್ಲಿ ಸಂವಿಧಾನ ಒದಗಿಸಿದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, ವೃತ್ತಿ ಸ್ವಾತಂತ್ರ್ಯ ಹಾಗೂ ಗೌಪ್ಯತೆಯ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಅರ್ಜಿ ಬಿಸಿಐ ಕೈಗೊಂಡಿರುವ ಕ್ರಮಗಳು ಶೈಕ್ಷಣಿಕ ಸ್ವಾತಂತ್ರ್ಯದ ಮೇಲೆ ಅದರಲ್ಲಿಯೂ ವಿಶ್ವವಿದ್ಯಾಲಯಗಳ ಮೇಲೆ ನಿಗಾ ಇಡುವ ಸಾಧ್ಯತೆಗಳಿವೆ. ತರಗತಿಗಳಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದಿರುವುದರಿಂದ ಶೈಕ್ಷಣಿಕ ಮತ್ತು ರಾಜಕೀಯ ಅವಕಾಶಗಳಿಗೆ ಅವಿಭಾಜ್ಯವಾಗಿರುವ ಮುಕ್ತ ಚರ್ಚೆ ಮತ್ತು ವಿಮರ್ಶಾತ್ಮಕ ಚರ್ಚೆಗಳನ್ನು ನಿಗ್ರಹಿಸುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಅರ್ಜಿದಾರರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು.