ಭಾರತೀಯ ವಿಮಾನ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫ್ಲೈಯಿಂಗ್ ವಿಮಾನ ಚಾಲಕರು ಮತ್ತು ನಾವಿಕರ (ನ್ಯಾವಿಗೇಟರ್ಸ್) ವಿಭಾಗದ ಸಮೂಹ ನಾಯಕರ ನಿವೃತ್ತಿ ವಯಸ್ಸನ್ನು 54 ರಿಂದ 57 ವರ್ಷಗಳಿಗೆ ಹೆಚ್ಚಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಈಚೆಗೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ (ಗ್ರೂಪ್ ಕ್ಯಾಪ್ಟನ್ ವಿಕಾಸ್ ಸರೀನ್ ವರ್ಸಸ್ ಭಾರತ ಸರ್ಕಾರ).
ಗ್ರೂಪ್ ಕ್ಯಾಪ್ಟನ್ ವಿಕಾಸ್ ಸರೀನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠವು ರಕ್ಷಣಾ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ಭೂಭಾಗದ ಸೇವೆಯಲ್ಲಿ ನಿರತರಾಗಿರುವ ಸಮೂಹ ನಾಯಕರ (ಗ್ರೂಪ್ ಕ್ಯಾಪ್ಟನ್ಸ್ ಆಫ್ ಗ್ರೌಂಡ್ ಡ್ಯೂಟಿ) ವಿಭಾಗದ ನಿವೃತ್ತಿ ವಯಸ್ಸಿಗೆ ಸಮನಾಗಿ ಫ್ಲೈಯಿಂಗ್ ವಿಮಾನ ಚಾಲಕರು ಮತ್ತು ನಾವಿಕರ ವಿಭಾಗದ ಸಮೂಹ ನಾಯಕರ ನಿವೃತ್ತಿ ವಯಸ್ಸನ್ನು 54 ರಿಂದ 57 ವರ್ಷಗಳಿಗೆ ಹೆಚ್ಚಿಸುವಂತೆ ಕೋರಲಾಗಿದೆ.
ನಿವೃತ್ತಿ ವಯಸ್ಸು ಹೆಚ್ಚಿಸುವಂತೆ ರಕ್ಷಣಾ ಇಲಾಖೆಗೆ ಸಶಸ್ತ್ರ ಪಡೆಗಳ ನ್ಯಾಯಾಧಿಕರಣವು (ಎಎಫ್‌ಟಿ) ಈಗಾಗಲೇ ನಿರ್ದೇಶಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. “ನಿವೃತ್ತಿ ವಯಸ್ಸನ್ನು ಹೆಚ್ಚಿಸಬಹುದೇ ಎಂಬುದನ್ನು ನಾಲ್ಕು ತಿಂಗಳ ಒಳಗೆ ನಿರ್ಧರಿಸುವಂತೆ ರಕ್ಷಣಾ ಇಲಾಖೆಗೆ ಈಗಾಗಲೇ ಎಎಫ್‌ಟಿ ಆದೇಶಿಸಿದೆ. ಏಳು ವರ್ಷಗಳು ಕಳೆದರೂ ಈ ಸಂಬಂಧ ಆದೇಶ ಪಾಲನೆ ಮಾಡಲಾಗಿಲ್ಲ” ಎಂದು ಮನವಿಯಲ್ಲಿ ಆಕ್ಷೇಪಿಸಲಾಗಿದೆ.
ರಕ್ಷಣಾ ಇಲಾಖೆಯ ಕಾರ್ಯತತ್ಪರತೆಯ ಕೊರತೆಯಿಂದಾಗಿ ಪ್ರತಿ ತಿಂಗಳು 5 ರಿಂದ 6 ಗ್ರೂಪ್ ಕ್ಯಾಪ್ಟನ್‌ಗಳು ನಿವೃತ್ತಿ ಹೊಂದುತ್ತಿದ್ದಾರೆ ಎಂದು ತನ್ನ ಆದೇಶದಲ್ಲಿ ನ್ಯಾಯಾಲಯ ಹೇಳಿದೆ.