ರಾಜ್ಯ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಖಿಲ ಭಾರತ ಕೋಟಾದಡಿ (ಎಐಕ್ಯೂ) ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) 27 % ಮೀಸಲಾತಿ ಮತ್ತು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ (ಇಡಬ್ಲ್ಯೂಎಸ್) 10% ಮೀಸಲಾತಿ ನೀಡುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ (ಡಾ ಅಪೂರ್ವ ಸತೀಶ್ ಗುಪ್ತಾ ವರ್ಸಸ್ ಭಾರತ ಸರ್ಕಾರ).
ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ನೋಟಿಸ್‌ಗೆ ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಕೇಂದ್ರ ಸರ್ಕಾರ ಜುಲೈ 29ರಂದು ಒಬಿಸಿಗಳಿಗೆ ಶೇ 27 ಮೀಸಲಾತಿ ಮತ್ತು 50 ಪ್ರತಿಶತ ಎಐಕ್ಯೂ ಸೀಟುಗಳಲ್ಲಿ ಇಡಬ್ಲ್ಯೂಎಸ್‌ಗೆ ಶೇ.10 ಮೀಸಲಾತಿ ಒದಗಿಸಿ ನೋಟಿಸ್ ಹೊರಡಿಸಿತ್ತು.
ಅರ್ಜಿದಾರರು ಮೀಸಲಾತಿ ರಹಿತ ವರ್ಗದ ಸ್ನಾತಕೋತ್ತರ ಮತ್ತು ಪದವಿ ಕೋರ್ಸ್‌ಗಳ ನೀಟ್ ಆಕಾಂಕ್ಷಿಗಳಾಗಿದ್ದಾರೆ. ವಕೀಲ ಸುಬೋಧ್ ಎಸ್ ಪಾಟೀಲ್ ಅವರ ಮೂಲಕ ಸಲ್ಲಿಸಲಾದ ಮನವಿಯಲ್ಲಿ ಈ ಬಗೆಯ ಮೀಸಲಾತಿಯಿಂದ 103ನೇ ಸಂವಿಧಾನ ತಿದ್ದುಪಡಿ ಕಾಯ್ದೆ - 2018ರ ಉಲ್ಲಂಘನೆಯಾಗಿದೆ ಎಂದು ತಿಳಿಸಲಾಗಿದೆ.
ಹಿಂದುಳಿದ ವರ್ಗಗಳ ಅಸಮರ್ಪಕ ಪ್ರಾತಿನಿಧ್ಯವಿದೆ ಎಂದು ತೋರಿಸಲು ಯಾವುದೇ ಮಾಹಿತಿ ಇಲ್ಲದಿರುವಾಗ ಮತ್ತು ಅದಕ್ಕಾಗಿ ಬೇಡಿಕೆ ಇಲ್ಲದಿರುವಾಗ, ಒಬಿಸಿ ಮತ್ತು ಇಡಬ್ಲ್ಯೂಎಸ್‌ಗಳಿಗೆ ಕೋಟಾ ಒದಗಿಸುವುದು ʼಸಮರ್ಥನೀಯವಲ್ಲʼ. ಸರಳವಾದ ಅಂಕಗಣಿತದ ಲೆಕ್ಕಾಚಾರ ಮತ್ತು ʼನೈಜ ಮಾಹಿತಿ ಇಲ್ಲದೆʼ ಇಂತಹ ಕೋಟಾ ಒದಗಿಸುವುದಕ್ಕೆ ಯಾವುದೇ ʼತಾರ್ಕಿಕತೆʼ ಇಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಕೇಂದ್ರ ಸರ್ಕಾರ ಮತ್ತು ಆರ್. ರಾಜೇಶ್ವರನ್ ನಡುವಣ ಪ್ರಕರಣ ಹಾಗೂ ಕೇಂದ್ರ ಸರ್ಕಾರ ಮತ್ತು ಕೆ ಜಯಕುಮಾರ್ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ತೀರ್ಪನ್ನು ಕೇಂದ್ರ ಸರ್ಕಾರದ ನೋಟಿಸ್ ಉಲ್ಲಂಘಿಸಿದೆ ಎಂದು ವಕೀಲ ವಿವೇಕ್ ಸಿಂಗ್ ಅವರ ಮೂಲಕ ಸಲ್ಲಿಸಲಾದ ಇನ್ನೊಂದು ಅರ್ಜಿಯಲ್ಲಿ ವಿವರಿಸಲಾಗಿದೆ.
“ಶೇ 50 ಎ ಐ ಕ್ಯೂ ಸೀಟುಗಳನ್ನು ಯಾವುದೇ ರೀತಿಯ ಆದ್ಯತೆ ನೀಡದೆ ಮೆರಿಟ್ ಒಂದನ್ನೇ ಆಧರಿಸಿ ನೀಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ” ಎಂಬುದಾಗಿ ಅರ್ಜಿ ತಿಳಿಸಿದೆ. ಅರ್ಜಿದಾರರ ಪರ ಹಾಜರಾದ ಹಿರಿಯ ನ್ಯಾಯವಾದಿ ಶ್ಯಾಮ್ ದಿವಾನ್, ಕೇಂದ್ರ ಸರ್ಕಾರದ ನಿರ್ಧಾರ, ಸಾಮಾನ್ಯ ವರ್ಗದ ಸುಮಾರು 2,500 ಸೀಟುಗಳನ್ನು ʼಕಸಿದುಕೊಂಡಿದೆʼ ಎಂದು ವಾದಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 7ರಂದು ನಡೆಯಲಿದೆ.