ಮಾನಸಿಕ ಆರೋಗ್ಯ: ವ್ಯವಸ್ಥೆಯ ಸುಧಾರಣೆಗೆ ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಬಲವಾದ ಕಾನೂನು ಜಾರಿ ಮತ್ತು ನರವಿಭಿನ್ನತೆ ಮಾನಸಿಕ ಪರಿಸ್ಥಿತಿ ಇರುವ ವ್ಯಕ್ತಿಗಳಿಗೆ ಉತ್ತಮ ಬೆಂಬಲ ನೀಡಬೇಕು ಎಂದು ಕೋರಿ ಆಕ್ಷನ್ ಫಾರ್ ಆಟಿಸಂ ಸಂಸ್ಥೆ ಪಿಐಎಲ್ ಸಲ್ಲಿಸಿತ್ತು.
Supreme Court, Mental Health
Supreme Court, Mental Health
Published on

ಆಟಿಸಂ, ಡಿಸ್ಲೆಕ್ಸಿಯಾ ಮತ್ತು ಎಡಿಎಚ್‌ಡಿ ರೀತಿಯ ನರ ವಿಭಿನ್ನತೆಯ ಪರಿಸ್ಥಿತಿ ಹೊಂದಿರುವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಸುಧಾರಣಾ ವ್ಯವಸ್ಥೆ ಜಾರಿಗೆ ತರುವಂತೆ ಕೋರಿ ಆಕ್ಷನ್ ಫಾರ್ ಆಟಿಸಂ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ  [ಆಕ್ಷನ್‌ ಫಾರ್‌ ಆಟಿಸಂ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಅಂಗವೈಕಲ್ಯ ಮತ್ತು ಮಾನಸಿಕ ಆರೋಗ್ಯ ಕಾನೂನುಗಳ ಜಾರಿಯಲ್ಲಿ ಸಾಕಷ್ಟು ಅಂತರವಿರುವುದರಿಂದ ದೃಢವಾದ ಸಾಂವಿಧಾನಿಕ ಮತ್ತು ಶಾಸನಬದ್ಧ ರಕ್ಷಣೆ ಇರುವಂತಹ ಕಾನೂನುಗಳನ್ನು ಜಾರಿಗೆ ತರುವಂತೆ ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠವು ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಟ್ರಸ್ಟ್ ಕಾಯಿದೆ- 1999, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯಿದೆ- 2016, ಮಾನಸಿಕ ಆರೋಗ್ಯ ಕಾಯಿದೆ- 2017 ಮತ್ತು ರಾಷ್ಟ್ರೀಯ ಟ್ರಸ್ಟ್ ಚೌಕಟ್ಟಿಗೆ 2018ರಲ್ಲಿ ಮಾಡಲಾದ ತಿದ್ದುಪಡಿಗಳು ಸೇರಿದಂತೆ ಪ್ರಮುಖ ಶಾಸನಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ವೈಫಲ್ಯ ಮತ್ತು ನಿರಂತರ ಸಾಂಸ್ಥಿಕ ನಿರಾಸಕ್ತಿ ಇರುವುದನ್ನು ಅರ್ಜಿ ಎತ್ತಿ ತೋರಿಸಿದೆ.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ಸಮಾವೇಶದ ವೇಳೆ  ಭಾರತ ಹೊಂದಿರುವ ಬಾಧ್ಯತೆಗಳಿಗೆ ಅನುಗುಣವಾಗಿ, ಅಂಗವೈಕಲ್ಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಆಡಳಿತ ಕ್ರಮದಲ್ಲಿ ಅನುಕಂಪ ಆಧಾರಿತ ದಾನಧರ್ಮ ಮಾದರಿಯಿಂದ ಹಕ್ಕು ಆಧಾರಿತ ಮಾದರಿಯಾಗಿ ಬದಲಾವಣೆಯಾಗಬೇಕು ಎಂದು ಅರ್ಜಿ ಹೇಳಿದೆ.

ಅರ್ಜಿಯ ಪ್ರಮುಖಾಂಶಗಳು

  • ನರವಿಭಿನ್ನತೆಯ ಪ್ರಯಾಣಿಕರನ್ನು ನಿರ್ವಹಿಸುವಲ್ಲಿ ವಿಮಾನ ನಿಲ್ದಾಣ, ವಿಮಾನಯಾನ, ರೈಲ್ವೆ ಮತ್ತು ಮೆಟ್ರೋ ಸಿಬ್ಬಂದಿಗೆ ಕಡ್ಡಾಯ ತರಬೇತಿ  ಮತ್ತು ಸಾರಿಗೆ ಕೇಂದ್ರಗಳಲ್ಲಿ ಸಂವೇದನಾ ಸ್ನೇಹಿ ಮೂಲಸೌಕರ್ಯ ರಚನೆ.

  • ಆರೋಗ್ಯ ವಿಮಾ ರಕ್ಷಣೆಯಲ್ಲಿ ನರವಿಭಿನ್ನತೆ ಹೊಂದಿರುವ ವ್ಯಕ್ತಿಗಳ ಸೇರ್ಪಡೆ ಮಾಡಬೇಕು ಮತ್ತು ಉಳಿದ ರೋಗಿಗಳಂತೆಯೇ ಅವರಿಗೂ ಸವಲತ್ತುಗಳಲ್ಲಿ ಸಮಾನತೆ ದೊರಕಿಸಿಕೊಡಬೇಕು.

  • ಎರಡು ಮತ್ತು ಮೂರನೇ ಹಂತದ ನಗರಗಳು ಸೇರಿದಂತೆ ಎಲ್ಲ ರಾಜ್ಯಗಳಲ್ಲಿಯೂ ಆರಂಭಿಕ ರೋಗನಿರ್ಣಯ, ಹಸ್ತಕ್ಷೇಪ ಮತ್ತು ವಿಶೇಷ ಕೇಂದ್ರಗಳನ್ನು ಬಲಪಡಿಸಬೇಕು.

  • ಶಾಲಾ ಕಾಲೇಜುಗಳಲ್ಲಿ ತರಬೇತಿ ಪಡೆದ ಶಿಕ್ಷಕರು, ಸಲಹೆಗಾರರು ಮತ್ತು ಸಹಾಯಕ ಸಿಬ್ಬಂದಿ ಇರುವಂತಹ ಕಡ್ಡಾಯವಾದ ಸಮಗ್ರ ಶಿಕ್ಷಣ ನೀತಿ ಜಾರಿಗೆ ತರಬೇಕು. 

  • ಅಂಗವೈಕಲ್ಯ ಗುರುತಿಸುವಿಕೆ ಮತ್ತು ಪ್ರಯೋಜನಗಳನ್ನು ಪಡೆಯಲು ಸುಧಾರಿತ ಪ್ರಮಾಣೀಕರಣ ಪ್ರಕ್ರಿಯೆಗಳು ಜಾರಿಗೆ ಬರಬೇಕು.

  • ವಸತಿ ಮತ್ತು ಸುಧಾರಣಾ ಕೇಂದ್ರಗಳಂತಹ ಸಮುದಾಯ ಆಧಾರಿತ ಆರೈಕೆ ಮಾದರಿಗಳ ಅಭಿವೃದ್ಧಿ ಮಾಡಬೇಕು.

  • ನರವಿಭಿನ್ನತೆಯ ಮಾನಸಿಕ ಪರಿಸ್ಥಿತಿಯುಳ್ಳ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕ ಜಾಗೃತಿ ಹೆಚ್ಚಿಸಬೇಕು ಮತ್ತು ಕಳಂಕ ನಿವಾರಣೆ ಅಭಿಯಾನಗಳನ್ನು ಕೈಗೊಳ್ಳಬೇಕು.

ಕೂಡಲೇ ಶಾಸನಬದ್ಧ ಸಂಸ್ಥೆಗಳ ರಚನೆ, ಮುಂಚೂಣಿ ಸಿಬ್ಬಂದಿಗೆ ರಾಷ್ಟ್ರವ್ಯಾಪಿ ತರಬೇತಿ ಮತ್ತು ನರ ಸಂಬಂಧಿ ಸಮಸ್ಯೆ ಹೊಂದಿರುವ ವ್ಯಕ್ತಿಗಳಿಗೆ ವಿಮಾ ಹಕ್ಕುಗಳ ರಕ್ಷಣೆ ಸೇರಿದಂತೆ ಮಧ್ಯಂತರ ಪರಿಹಾರ ನೀಡಬೇಕು ಎಂದು ಪಿಐಎಲ್ ಕೋರಿದೆ.

ಕೇಂದ್ರವು ತನ್ನ ಪ್ರತಿಕ್ರಿಯೆ ಸಲ್ಲಿಸಿದ ನಂತರ ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಲಿದೆ.

Kannada Bar & Bench
kannada.barandbench.com