ರಾಮಸೇತು ರಾಷ್ಟ್ರೀಯ ಸ್ಮಾರಕ: ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಂಬಂಧ ಕೇಂದ್ರಕ್ಕೆ ಸುಪ್ರೀಂ ನೋಟಿಸ್

ಪ್ರಕರಣ ಸಂಸ್ಕೃತಿ ಸಚಿವಾಲಯದ ಪರಿಗಣನೆಯಲ್ಲಿದೆ ಎಂಬ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಜನವರಿ 2023ರಲ್ಲಿ ದಾಖಲಿಸಿಕೊಂಡಿತ್ತು.
Subramanian Swamy, Supreme Court and Ram Setu
Subramanian Swamy, Supreme Court and Ram Setu
Published on

ಪ್ರಾಚೀನ ಸ್ಮಾರಕ ಮತ್ತು ಪುರಾತತ್ತ್ವ ಸ್ಥಳಗಳು ಹಾಗೂ ಅವಶೇಷಗಳ ಕಾಯಿದೆ- 1958ರ ಅಡಿ ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ರಾಮಸೇತುವನ್ನು ಘೋಷಿಸಬೇಕು ಎಂಬ ಕುರಿತು ನಿರ್ಧಾರ ತೆಗೆದುಕೊಳ್ಳುವಂತೆ ಕೋರಿ ಬಿಜೆಪಿ ನಾಯಕ ಮಾಜಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.  

ಈ ಕುರಿತಂತೆ ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ನೋಟಿಸ್ ನೀಡಿತು.

Also Read
ಎಂಟು ವರ್ಷ ಸಂದರೂ ಏಕೆ ವಿಳಂಬ? ರಾಮಸೇತು ಅರ್ಜಿ ಮುಂದೂಡಿಕೆ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿ ಸ್ವಾಮಿ ಆಕ್ಷೇಪ

ಪ್ರಕರಣ ಸಂಸ್ಕೃತಿ ಸಚಿವಾಲಯದ ಪರಿಗಣನೆಯಲ್ಲಿದ್ದು ಸ್ವಾಮಿ ಅವರು ಈ ನಿಟ್ಟಿನಲ್ಲಿ ಅಲ್ಲಿಗೆ ಪತ್ರ ಬರೆದು ಪೂರಕ ದಾಖಲೆಗಳನ್ನು ಸಲ್ಲಿಸಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೀಡಿದ್ದ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ಜನವರಿ 2023ರಲ್ಲಿ ದಾಖಲಿಸಿಕೊಂಡಿತ್ತು.

ನಂತರ ಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅಲ್ಲದೆ ಈ ವರ್ಷದ ಮೇ ತಿಂಗಳಲ್ಲಿಯೂ ಅವರು ಹೊಸದಾಗಿ ಮನವಿ ಸಲ್ಲಿಸಿದ್ದರು. ಆದರೆ ತಾವು ಮಾಡಿದ ಮನವಿಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೊಸದಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಅವರು ಆರೋಪಿಸಿದ್ದಾರೆ.

Also Read
ರಾಮಸೇತು ರಾಷ್ಟ್ರೀಯ ಸ್ಮಾರಕ: ಜುಲೈ 26ರಂದು ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್‌ [ಚುಟುಕು]

ಭಾರತದ ಪ್ರಾಚೀನ ಇತಿಹಾಸ ಮತ್ತು ರಾಮಾಯಣ ಮಹಾಕಾವ್ಯದ ಪ್ರಕಾರ, ಲಂಕೆಯ ರಾಜ ರಾವಣನಿಂದ ತನ್ನ ಪತ್ನಿ ಸೀತೆಯನ್ನು ರಕ್ಷಿಸಲು ಶ್ರೀಲಂಕಾಕ್ಕೆ ತೆರಳುವುದಕ್ಕಾಗಿ ರಾಮಸೇತುವನ್ನು ಭಗವಾನ್ ರಾಮ  ತನ್ನ ಸ್ಥಳೀಯ ಮಿತ್ರರ ಸಹಾಯದಿಂದ ನಿರ್ಮಿಸಿದ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

"ಭಾರತೀಯ ಪ್ರಾಚೀನ ಇತಿಹಾಸದ ಪ್ರಕಾರ ಮತ್ತು ಭಾರತೀಯ ಯುಗ ವ್ಯವಸ್ಥೆಯನ್ನು ಆಧರಿಸಿದ ಲೆಕ್ಕಾಚಾರಗಳ ಪ್ರಕಾರ ಸೇತುವೆಯನ್ನು ಹಲವಾರು ಶತಮಾನಗಳ ಹಿಂದೆ ನಿರ್ಮಿಸಲಾಗಿದೆ. 15ನೇ ಶತಮಾನದವರೆಗೆ ಸೇತುವೆಯನ್ನು ಕಾಲ್ನಡಿಗೆಯಲ್ಲಿ ಪ್ರಯಾಣಿಸಲು ಬಳಸಲಾಗುತ್ತಿತ್ತು ಮತ್ತು ನಂತರ ಚಂಡಮಾರುತಗಳಿಂದಾಗಿ ಸೇತುವೆಯು (ಕ್ರಿ.ಶ.1480ರ ಸುಮಾರಿಗೆ) ನಿಷ್ಪ್ರಯೋಜಕವಾಯಿತು" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಪ್ರಾಚೀನ ಸ್ಮಾರಕ ಮತ್ತು ಪುರಾತತ್ತ್ವ ಸ್ಥಳಗಳು ಹಾಗೂ ಅವಶೇಷಗಳ ಕಾಯಿದೆ- 1958ರ ಅಡಿ ರಾಮಸೇತು ರಾಷ್ಟ್ರೀಯ ಸ್ಮಾರಕ ಘೋಷಣೆಗೆ ಅರ್ಹವಾಗಿದೆ. ಅದು ಧಾರ್ಮಿಕ, ಪುರಾತತ್ತ್ವ ಹಾಗೂ ಐತಿಹಾಸಿಕ ಮಹತ್ವ ಹೊಂದಿದೆ ಎಂದು ಸ್ವಾಮಿ ವಾದಿಸಿದ್ದರು.

Kannada Bar & Bench
kannada.barandbench.com