ಕೋವಿಡ್‌ ಲಸಿಕೆ ಖರೀದಿಯ ಸಂಪೂರ್ಣ ದತ್ತಾಂಶ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶ

ಒಂದು ಡೋಸ್‌ ಮತ್ತು ಎರಡು ಡೋಸ್‌ ಪಡೆದಿರುವವರ ಶೇಕಡಾವಾರು ದತ್ತಾಂಶದ ಮಾಹಿತಿ ನೀಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದ್ದು, ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಸಿಕೆ ನೀಡಿರುವವರ ಸಂಖ್ಯೆಯೂ ಸೇರಿರಬೇಕು ಎಂದಿದೆ.
Supreme Court and Covid vaccine
Supreme Court and Covid vaccine
Published on

ಕೋವ್ಯಾಕ್ಸಿನ್‌, ಕೋವಿಶೀಲ್ಡ್‌ ಮತ್ತು ಸ್ಪುಟ್ನಿಕ್‌ ವಿ ಲಸಿಕೆಯನ್ನು ಇಲ್ಲಿಯವರಗೆ ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ಸಂಪೂರ್ಣ ದಾಖಲೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಎಲ್ಲಾ ಮೂರು ಲಸಿಕೆಗಳನ್ನು ಖರೀದಿಸಿರುವ ಸಂಬಂಧ ಕೇಂದ್ರ ಹೊರಡಿಸಿರುವ ದಿನಾಂಕವನ್ನು ಒಳಗೊಂಡ ಆದೇಶ, ಪ್ರತಿ ದಿನಾಂಕದಂದು ಖರೀದಿಸಲ್ಪಟ್ಟ ಲಸಿಕೆ ಪ್ರಮಾಣ ಮತ್ತು ಪೂರೈಕೆ ದಿನಾಂಕದ ಕುರಿತು ದತ್ತಾಂಶದ ಮೂಲಕ ಸ್ಪಷ್ಟನೆ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ.

1, 2 ಮತ್ತು 3ನೇ ಹಂತದ ಮೂಲಕ ಹೇಗೆ ಮತ್ತು ಯಾವಾಗ ಕೇಂದ್ರ ಸರ್ಕಾರವು ಲಸಿಕೆ ಪಡೆದಿಲ್ಲದಿರುವವರಿಗೆ ಲಸಿಕೆ ನೀಡುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ನ್ಯಾಯಾಲಯ ಹೇಳಿದೆ.

ದೇಶದಲ್ಲಿ ಕೋವಿಡ್‌ ಸಂಬಂಧಿತ ವಿಚಾರಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್‌, ಎಲ್‌ ನಾಗೇಶ್ವರ್‌ ರಾವ್‌ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠವು ನಡೆಸಿದ್ದು, ಆದೇಶ ಹೊರಡಿಸಿದೆ.

ಒಂದು ಡೋಸ್‌ ಮತ್ತು ಎರಡು ಡೋಸ್‌ ಪಡೆದಿರುವವರ ಶೇಕಡಾವಾರು ದತ್ತಾಂಶದ ಮಾಹಿತಿ ನೀಡುವಂತೆಯೂ ನ್ಯಾಯಾಲಯ ನಿರ್ದೇಶಿಸಿದ್ದು, ಇದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಸಿಕೆ ನೀಡಿರುವವರ ಸಂಖ್ಯೆಯೂ ಸೇರಿರಬೇಕು ಎಂದಿದೆ.

Also Read
ಲಸಿಕೆ ಬೆಲೆ: ಕೇಂದ್ರ ಸರ್ಕಾರದ ದ್ವಿಮುಖ ನೀತಿ ಪ್ರಶ್ನಿಸಿದ ಸುಪ್ರೀಂಕೋರ್ಟ್; ಬೇಗ ಎಚ್ಚರಗೊಳ್ಳಿ ಎಂದು ಕಿವಿಮಾತು

ಕಪ್ಪು ಶಿಲೀಂಧ್ರ ರೋಗದ ಔಷಧ ಲಭ್ಯತೆ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ನ್ಯಾಯಾಲಯ ಮಾಹಿತಿ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಎರಡು ವಾರಗಳ ಒಳಗೆ ಈ ಎಲ್ಲಾ ಮಾಹಿತಿ ಸಲ್ಲಿಸಬೇಕು ಎಂದು ಪೀಠವು ಸರ್ಕಾರಕ್ಕೆ ಸೂಚಿಸಿದೆ.

ರಾಜ್ಯದ ಲಸಿಕಾ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ ಮೂಲಕ ಸ್ಪಷ್ಟಪಡಿಸುವಂತೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇದೇ ವೇಳೆ ನ್ಯಾಯಾಲಯ ಸೂಚಿಸಿದೆ. ಮೇ 31ರಂದು ಆದೇಶ ಹೊರಡಿಸಲಾಗಿದ್ದು, ಸುಪ್ರೀಂ ಕೋರ್ಟ್‌ ವೆಬ್‌ಸೈಟ್‌ನಲ್ಲಿ ಜೂನ್‌ 2ರಂದು ಪ್ರಕಟಿಸಲಾಗಿದೆ.

Kannada Bar & Bench
kannada.barandbench.com