
ದಿಢೀರ್ ತ್ರಿವಳಿ ತಲಾಖ್ ಘೋಷಿಸುವ ಮೂಲಕ ಮುಸ್ಲಿಮರು ಅನುಸರಿಸುವ ವಿಚ್ಛೇದನ ಪದ್ದತಿಯನ್ನು ಅಪರಾಧೀಕರಿಸುವ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯಿದೆ- 2019 ಜಾರಿಗೊಳಿಸಿದ ನಂತರ ಮುಸ್ಲಿಂ ಮಹಿಳೆಯರು ದಾಖಲಿಸಿದ ಪ್ರಕರಣಗಳ ಸಂಖ್ಯೆಯ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ತ್ರಿವಳಿ ತಲಾಖ್ ಆಚರಣೆಯನ್ನು ಅಪರಾಧೀಕರಿಸುವ 2019ರ ಕಾಯಿದೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸಿಜೆಐ ಸಂಜೀವ್ ಖನ್ನಾ ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.
ಬಾಕಿ ಉಳಿದಿರುವ ತ್ರಿವಳಿ ತಲಾಖ್ ಪ್ರಕರಣಗಳು ಮತ್ತು ಕಾಯಿದೆಯ ವಿರುದ್ಧ ಹೈಕೋರ್ಟ್‌ನಲ್ಲಿ ಬಾಕಿ ಇರುವ ಯಾವುದೇ ದಾವೆಗಳ ಕುರಿತು ಕೂಡ ಮಾಹಿತಿ ನೀಡುವಂತೆ ನ್ಯಾಯಾಲಯ ಕೇಳಿದೆ.
"ಕಕ್ಷಿದಾರರು ಎರಡೂ ಕಡೆಯಿಂದ ಲಿಖಿತ ವಾದ ಸಲ್ಲಿಸಬೇಕು. ಪರಿಶೀಲಿಸಿ ದಾಖಲಾದ ಎಫ್‌ಐಆರ್‌ಗಳ ಮಾಹಿತಿ ನಮಗೆ ನೀಡಿ," ಎಂದು ಸಂಕ್ಷಿಪ್ತ ಪ್ರಾಥಮಿಕ ವಿಚಾರಣೆಯ ನಂತರ ನ್ಯಾಯಾಲಯ ಆದೇಶಿಸಿದೆ.
ಅರ್ಜಿದಾರರು ಆಚರಣೆಯ ಅಪರಾಧೀಕರಣನ್ನಷ್ಟೇ ಪ್ರಶ್ನಿಸುತ್ತಿದ್ದು ಆಚರಣೆಯನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ.
"ಇಲ್ಲಿನ ಯಾವುದೇ ವಕೀಲರು (ತಲಾಖ್) ಪದ್ದತಿ ಸರಿ ಇದೆ ಎಂದು ಹೇಳುತ್ತಿಲ್ಲ ಎಂದು ನನಗೆ ಖಾತ್ರಿಯಿದೆ, ಆದರೆ ಅವರು ಹೇಳುತ್ತಿರುವುದೇನೆಂದರೆ, ಈ ಪದ್ದತಿ ನಿಷೇಧಿಸಿದ ನಂತರವೂ ಹಾಗೂ ಮೂರು ಬಾರಿ ತಲಾಖ್ ಹೇಳುವುದರಿಂದ ಯಾವುದೇ ವಿಚ್ಛೇದನ ಸಾಧ್ಯವಾಗದೆ ಇರುವ ಸಂದರ್ಭದಲ್ಲಿಯೂ ಇದನ್ನು ಅಪರಾಧವೆಂದು ಪರಿಗಣಿಸಬಹುದೇ ಎನ್ನುವುದಾಗಿದೆ" ಎಂದು ಸಿಜೆಐ ವಿಷದೀಕರಿಸಿದರು.
ಈ ಪ್ರತಿಗಾಮಿ ಪದ್ಧತಿ ಮುಂದುವರೆದಿದೆಯೇ ಮತ್ತು ಮಹಿಳೆಯರು ದೂರು ನೀಡಲು ಮುಂದೆ ಬರುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಅರಿಯಲು ಅಂಕಿಅಂಶಗಳು ಮುಖ್ಯವಾಗುತ್ತವೆ ಎಂದು ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ವಾದಿಸಿದರು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ನಿಜಾಮ್ ಪಾಷಾ, ಬೇರೆ ಯಾವುದೇ ಸಮುದಯಾದಲ್ಲಿ ಪತ್ನಿಯನ್ನು ತ್ಯಜಿಸುವುದು ಕ್ರಿಮಿನಲ್ ಅಪರಾಧವಲ್ಲ ಎಂದು ವಾದಿಸಿದರು. ಆಗ ಎಸ್‌ಜಿ ಮೆಹ್ತಾ, “ಬೇರೆ ಸಮುದಾಯಗಳಲ್ಲಿ ತ್ರಿವಳಿ ತಲಾಖ್ ಜಾರಿಯಲಿಲ್ಲ” ಎಂದು ಪ್ರತಿಕ್ರಿಯೆ ನೀಡಿದರು.
ಅರ್ಜಿದಾರರ ಪರವಾಗಿ ಹಾಜರಾದ ಮತ್ತೊಬ್ಬ ಹಿರಿಯ ವಕೀಲ ಎಂ ಆರ್ ಶಂಶಾದ್, ವೈವಾಹಿಕ ಪ್ರಕರಣಗಳಲ್ಲಿ ತಿಂಗಳುಗಟ್ಟಲೆ ಎಫ್‌ಐಆರ್‌ಗಳನ್ನು ನೋಂದಾಯಿಸಲಾಗುವುದಿಲ್ಲ ಮತ್ತು ಇಲ್ಲಿ ಕೇವಲ ಹೇಳಿಕೆಗಾಗಿ, ಎಫ್‌ಐಆರ್ ದಾಖಲಿಸಲಾಗುತ್ತದೆ ಎಂದು ವಾದಿಸಿದರು. ಆಗ ಎಸ್‌ಜಿ ಮೆಹ್ತಾ ಅವರು “ಯಾವುದೇ ನಾಗರಿಕ ವರ್ಗದಲ್ಲಿ ಅಂತಹ ಪದ್ದತಿ ಇಲ್ಲ” ಎಂದರು.
ಇದೇ ವೇಳೆ ನ್ಯಾಯಾಲಯವು, ಈ ಪ್ರಕರಣಗಳ ಗುಂಪನ್ನು 'ಮುಸ್ಲಿಂ ಮಹಿಳೆಯರ ಸಾಂವಿಧಾನಿಕ ಹಕ್ಕುಗಳಿಗೆ ಸವಾಲು (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ, 2019' ಎಂದು ದಾವೆಪಟ್ಟಿಯಲ್ಲಿ ನಮೂದಿಸುವಂತೆ ಸೂಚಿಸಿ ಪ್ರಕರಣವನ್ನು ಮುಂದೂಡಿತು.