ಅಕ್ರಮ ಗಣಿಗಾರಿಕೆ: ಕ್ರಮ ಕೈಗೊಳ್ಳಲು ವಿಫಲರಾದ ಅಧಿಕಾರಿಗಳ ವಿವರ ಕೇಳಿದ ಸುಪ್ರೀಂ ಕೋರ್ಟ್‌

ಗ್ರಾಮಸ್ಥರು ಪದೇ ಪದೇ ದೂರುಗಳನ್ನು ನೀಡಿದರೂ ಕ್ರಮ ಕೈಗೊಳ್ಳಲು ವಿಫಲರಾದ ಘಟನಾ ಸಂದರ್ಭದಲ್ಲಿ, ಆ ಪ್ರದೇಶದಲ್ಲಿ ನಿಯೋಜಿಸಲಾದ ಅಧಿಕಾರಿಗಳ ಹೆಸರುಗಳು ಮತ್ತು ಹುದ್ದೆಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ ಪೀಠ.
Coal Mine
Coal MineImage for representative purpose
Published on

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರಾಜಸ್ಥಾನದ ಅಧಿಕಾರಿಗಳ "ಸಂಪೂರ್ಣ ನಿಷ್ಕ್ರಿಯತೆ"ಯ ಬಗ್ಗೆ ಸುಪ್ರೀಂ ಕೋರ್ಟ್‌ ಫೆಬ್ರವರಿ 12ರಂದು ಗಂಭೀರ ಆಕ್ಷೇಪ ವ್ಯಕ್ತಪಡಿಸಿದೆ [ಪ್ರಕಾಶ್ vs. ರಾಜಸ್ಥಾನ ರಾಜ್ಯ].

ಅಕ್ರಮ ಗಣಿಗಾರಿಕೆ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ಮನೆಯೊಂದಕ್ಕೆ ಹಾನಿಯುಂಟು ಮಾಡಿದ ಆರೋಪದ ಮೇಲೆ ಶಿಕ್ಷೆಗೊಳಗಾದ ವ್ಯಕ್ತಿಗೆ ಜಾಮೀನು ನೀಡುವಾಗ, ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಆರ್ ಮಹಾದೇವನ್ ಅವರ ಪೀಠವು, ಗ್ರಾಮಸ್ಥರು ಪದೇ ಪದೇ ದೂರುಗಳನ್ನು ನೀಡಿದಾಗ ಕ್ರಮ ಕೈಗೊಳ್ಳಲು ವಿಫಲರಾದ ಆರೋಪದ ಮೇಲೆ ಘಟನೆ ನಡೆದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ನಿಯೋಜಿಸಲಾದ ಅಧಿಕಾರಿಗಳ ಹೆಸರುಗಳು ಮತ್ತು ಹುದ್ದೆಗಳನ್ನು ಒದಗಿಸುವಂತೆ ರಾಜ್ಯಕ್ಕೆ ನಿರ್ದೇಶನ ನೀಡಿತು.

ಜಾಮೀನು ಆದೇಶದೊಂದಿಗೆ ಪ್ರಸಕ್ತ ಪ್ರಕರಣವು ಕೊನೆಗೊಂಡಿಲ್ಲ, ಅಧಿಕಾರಿಗಳ ನಿಷ್ಕ್ರಿಯತೆಯ ಪ್ರಮುಖ ಸಮಸ್ಯೆಯನ್ನು ಪರಿಶೀಲಿಸಬೇಕಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಅರ್ಜಿದಾರರಾದ ಪ್ರಕಾಶ್‌ ತನಗೆ ನೀಡಲಾಗಿರುವ ಶಿಕ್ಷೆಯನ್ನು ಅಮಾನತುಗೊಳಿಸಲು ಕೋರಿದ್ದ ಅರ್ಜಿಯನ್ನು ರಾಜಸ್ಥಾನ ಹೈಕೋರ್ಟ್‌ ತಿರಸ್ಕರಿಸಿದ ನಂತರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಗುಂಪೊಂದು ಮನೆಯೊಂದನ್ನು ಧ್ವಂಸ ಮಾಡಿದ ಘಟನೆಗೆ ಸಂಬಂಧಿಸಿದಂತೆ ಗುಂಪಿನ ಭಾಗವಾಗಿದ್ದ ಅವರಿಗೆ ಹತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿತ್ತು. ಪ್ರಾಸಿಕ್ಯೂಷನ್ ಪ್ರಕಾರ, ಪ್ರಕಾಶ್ ಮನೆಯ ಮೇಲೆ ದಾಳಿ ಮಾಡಿದ ಗುಂಪಿನ ಭಾಗ ಮಾತ್ರವೇ ಆಗಿರದೆ ಅವರೇ ಸ್ವತಃ ಜನಸಮೂಹವನ್ನು ಮುನ್ನಡೆಸುತ್ತಿದ್ದರು ಎಂದು ರಾಜ್ಯ ಸರ್ಕಾರ ವಾದಿಸಿತ್ತು.

ಆದರೆ, ಸುಪ್ರೀಂ ಕೋರ್ಟ್ ಮುಂದೆ ಅರ್ಜಿದಾರ ಪ್ರಕಾಶ್‌ ಪರ ವಕೀಲರು ಪ್ರಕರಣದ ಹಿನ್ನೆಲೆಯನ್ನು ತೆರೆದಿಟ್ಟರು. ಗ್ರಾಮಸ್ಥರು ತಮ್ಮ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಕಲ್ಲು ಪುಡಿಮಾಡುವ ಚಟುವಟಿಕೆಗಳನ್ನು ನಿಲ್ಲಿಸುವಂತೆ ಪದೇ ಪದೇ ಅಧಿಕಾರಿಗಳನ್ನು ಸಂಪರ್ಕಿಸಿದರೂ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದರು. ಇದರ ಪರಿಣಾಮ ಜನರಲ್ಲಿ ಕೋಪ ಭುಗಿಲೆದ್ದಿತು ಮತ್ತು ಪರಿಸ್ಥಿತಿ ನಿಯಂತ್ರಣ ತಪ್ಪಿತು ಎಂದು ವಿವರಿಸಿದರು.

ಹಿಂಸಾಚಾರವನ್ನು ತಾವು ಸಮರ್ಥಿಸುತ್ತಿಲ್ಲ ಎಂದು ಪ್ರಕಾಶ್‌ ಪರ ವಕೀಲರು ಸ್ಪಷ್ಟಪಡಿಸಿದರು. ಆದರೆ ದೂರುದಾರರು ಮತ್ತು ಇತರರು ಅನುಭವಿಸಿದ ಗಾಯಗಳು ಸಣ್ಣಪುಟ್ಟದ್ದಾಗಿವೆ ಎಂದು ಅವರು ಗಮನಸೆಳೆದರು. ಪ್ರಕಾಶ್‌ ಯಾವುದೇ ಕ್ರಿಮಿನಲ್ ಹಿನ್ನೆಲೆಗಳನ್ನು ಹೊಂದಿಲ್ಲ ಮತ್ತು ಅವರು ಸ್ಥಳೀಯ ಸರಪಂಚ್ ಅವರ ಸಹೋದರರಾಗಿರುವುದರಿಂದ ಅವರ ವಿರುದ್ಧ ದೋಷಾರೋಪಣೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಬಹುಮುಖ್ಯವಾಗಿ, ಪ್ರಕರಣದ ಇತರ ಎಲ್ಲಾ ಸಹ ಆರೋಪಿಗಳಿಗೆ ಈಗಾಗಲೇ ಜಾಮೀನು ದೊರೆತಿದೆ ಎಂದು ವಿವರಿಸಿದರು.

ಆದರೆ, ರಾಜ್ಯ ಸರ್ಕಾರವು ಈ ಅರ್ಜಿಯನ್ನು ವಿರೋಧಿಸಿತು. ಅರ್ಜಿದಾರರ ವಿರುದ್ಧ ಆರೋಪಗಳು ಗಂಭೀರವಾಗಿವೆ. ಅರ್ಜಿದಾರ ಪ್ರಕಾಶ್ ಜನಸಮೂಹವನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ವಾದಿಸಿತು, ಜಾಮೀನು ನಿರಾಕರಣೆಯನ್ನು ಸಮರ್ಥಿಸಿತು.

ಎರಡೂ ಬದಿಯ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ನಲ್ಲಿ ಪ್ರಕಾಶ್ ಅವರ ಮೇಲ್ಮನವಿ ವಿಚಾರಣೆಯನ್ನು ಬಾಕಿ ಉಳಿಸಿ, ಈ ಅವಧಿಯಲ್ಲಿ ಅವರ ಶಿಕ್ಷೆಯನ್ನು ಅಮಾನತುಗೊಳಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲು ತಾನು ಒಲವು ಹೊಂದಿರುವುದಾಗಿ ತಿಳಿಸಿತು.

ಮುಂದುವರೆದು, ಪೀಠವು ಘಟನೆಗೆ ಕಾರಣವಾಗಿರಬಹುದಾದ ಆಡಳಿತಾತ್ಮಕ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿತು. ಅಕ್ರಮ ಗಣಿಗಾರಿಕೆಯ ಕುರಿತು ಗ್ರಾಮಸ್ಥರು ಪದೇ ಪದೇ ದೂರಿದರೂ ಅದನ್ನು ನಿರ್ಲಕ್ಷಿಸಿದ್ದರಿಂದ ಹಿಂಸಾಚಾರ ಸಂಭವಿಸಿದೆ ಎನ್ನುವುದನ್ನು ಗಮನಿಸಿತು.

ಪ್ರಕರಣದಲ್ಲಿ ಅಧಿಕಾರಿಗಳು ಮೌನವಾಗಿದ್ದಾರೆ ಮತ್ತು ದೂರುದಾರರು ಮತ್ತು ಇತರರು ತಮ್ಮ ಅನುಮತಿಸಲಾದ ಗಣಿಗಾರಿಕೆ ಪ್ರದೇಶಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿದ್ದಾರೆಯೇ ಅಥವಾ ಸರಿಯಾದ ಅನುಮತಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಹ ವಿಫಲರಾಗಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯವು ಅಧಿಕಾರಿ ವರ್ಗದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿತು.

ಹಾಗಾಗಿ, ಇದು ಪ್ರತ್ಯೇಕ ಪ್ರಕರಣವಲ್ಲ ಎಂದ ಪೀಠವು ಪ್ರಕರಣವು ಮುಂದಿನ ಕ್ರಮಗಳನ್ನು ಬೇಡುತ್ತದೆ ಎಂದು ಅಭಿಪ್ರಾಯಪಟ್ಟಿತು. ಅದರಂತೆ, ಘಟನೆಗೆ ಕಾರಣವಾಗಿರಬಹುದಾದ ಅಧಿಕಾರಿಗಳ ನಿರ್ಲಕ್ಷ್ಯತೆಯ ಹಿನ್ನೆಲೆಯಲ್ಲಿ ಆ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ನಿಯೋಜಿತರಾಗಿದ್ದ ಎಲ್ಲ ಅಧಿಕಾರಿಗಳ ಹೆಸರುಗಳು ಮತ್ತು ಹುದ್ದೆಗಳನ್ನು ಒದಗಿಸುವಂತೆ ರಾಜ್ಯದ ವಕೀಲರಿಗೆ ನಿರ್ದೇಶಿಸಿತು.

"ರಾಜ್ಯದ ಪರ ವಕೀಲರು ಘಟನೆಗೆ ಕಾರಣವಾದ ನಿರ್ಲಕ್ಷ್ಯವನ್ನು ತೋರಿದ ಆ ಸಮಯದಲ್ಲಿ ಅಲ್ಲಿದ್ದ ಎಲ್ಲಾ ಅಧಿಕಾರಿಗಳ ಹೆಸರುಗಳು ಮತ್ತು ಹುದ್ದೆಗಳನ್ನು ನಮ್ಮ ಮುಂದಿರಿಸಬೇಕು. ಇದು ನ್ಯಾಯಾಲಯದ ಗಮನಕ್ಕೆ ಬಂದಿರುವ ಪ್ರತ್ಯೇಕ ಪ್ರಕರಣವಲ್ಲವಾದ್ದರಿಂದ, ರಾಜ್ಯದ ಪರ ವಕೀಲರಿಗೆ ಹೆಸರುಗಳನ್ನು ಒದಗಿಸುವಂತೆ ನಾವು ನಿರ್ದೇಶಿಸುತ್ತೇವೆ," ಎಂದು ಹೇಳಿತು.

ಮುಂದುವರೆದು, ಆಕ್ಷೇಪಿತ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ಅಥವಾ ಕಲ್ಲು ಪುಡಿಮಾಡುವಿಕೆ ನಿಜವಾಗಿಯೂ ನಡೆಯುತ್ತಿದೆ ಎಂದು ತೋರಿಸುವ ಎಲ್ಲಾ ಸಂಬಂಧಿತ ದೂರುಗಳು, ಅರ್ಜಿಗಳು, ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಎರಡು ವಾರಗಳಲ್ಲಿ ಅಫಿಡವಿಟ್ ಸಮೇತ ಸಲ್ಲಿಸುವಂತೆ ನ್ಯಾಯಾಲಯವು ಅರ್ಜಿದಾರ ಪ್ರಕಾಶ್‌ಗೆ ತಿಳಿಸಿತು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 20ರಂದು ನಡೆಯಲಿದೆ.

Kannada Bar & Bench
kannada.barandbench.com