ಬಂಧನ ಪ್ರಶ್ನಿಸಿ ಹೇಮಂತ್ ಸೋರೆನ್ ಮನವಿ: ಇ ಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ ಡಿ ಬಂಧಿಸಿದ್ದ ಹಿನ್ನೆಲೆಯಲ್ಲಿ ಸೋರೆನ್ ಜನವರಿ 31ರಂದು ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿದ್ದರು.
ಬಂಧನ ಪ್ರಶ್ನಿಸಿ ಹೇಮಂತ್ ಸೋರೆನ್ ಮನವಿ: ಇ ಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಭೂ ಹಗರಣದ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ ಡಿ) ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಜಾರ್ಖಂಡ್ ನಿಕಟಪೂರ್ವ ಮುಖ್ಯಮಂತ್ರಿ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಹೇಮಂತ್ ಸೊರೆನ್ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಇ ಡಿಗೆ ನೋಟಿಸ್‌ ನೀಡಿದೆ [ಹೇಮಂತ್‌ ಸೊರೇನ್‌ ಮತ್ತು ಜಾರಿ ನಿರ್ದೇಶನಾಲಯ ಇನ್ನಿತರರ ನಡುವಣ ಪ್ರಕರಣ].

ಮುಂದಿನ ವಾರ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ತಿಳಿಸಿದೆ. ಅಷ್ಟರಲ್ಲಿ ತಾನು  ಕಾಯ್ದಿರಿಸಿರುವ ಪ್ರಕರಣದಲ್ಲಿ ತೀರ್ಪು ನೀಡಲು ಹೈಕೋರ್ಟ್‌ಗೆ ಮುಕ್ತ ಅವಕಾಶ ಇರುವುದಾಗಿ ನ್ಯಾಯಾಲಯ ಹೇಳಿದೆ.

ಸೊರೆನ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು. ಆದೇಶ ನೀಡಲು ಜಾರ್ಖಂಡ್‌ ಹೈಕೋರ್ಟ್‌ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಹೇಮಂತ್‌ ಅವರು ಸುಪ್ರೀಂ ಕೋರ್ಟ್‌ ಗಮನ ಸೆಳೆದಿದ್ದಾರೆ.

ಈ ಹಿಂದೆ ತಮ್ಮಬಂಧನ ಪ್ರಶ್ನಿಸಿ ಸಂವಿಧಾನದ  32ನೇ ವಿಧಿಯಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು. ಈ ಸಂಬಂಧ ಜಾರ್ಖಂಡ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಅದು ಸೂಚಿಸಿತ್ತು.

ಹೈಕೋರ್ಟ್‌ಗೆ ಹೇಮಂತ್‌ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇನ್ನಷ್ಟೇ ಆದೇಶ ಪ್ರಕಟವಾಗಬೇಕಿದೆ.

ಭೂ ಹಗರಣ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹೇಮಂತ್‌ ಅವರನ್ನು ಬಂಧಿಸಿದ ಹಿನ್ನೆಲೆಯಲ್ಲಿ ಅವರು ಕಳೆದ ರಾತ್ರಿ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Kannada Bar & Bench
kannada.barandbench.com