ಕರಿಷ್ಮಾ- ಸಂಜಯ್‌ ವಿಚ್ಛೇದನದ ದಾಖಲೆ ಕೋರಿದ ಪ್ರಿಯಾ ಕಪೂರ್‌: ಕರಿಷ್ಮಾ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಉದ್ಯಮಿ ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ 2016ರಲ್ಲಿ ವಿಚ್ಚೇದನ ಪಡೆದಿದ್ದು ಸಂಜಯ್ ಅವರ ಕಾನೂನಾತ್ಮಕ ವಾರಸುದಾರೆಯಾಗಿರುವ ಕಾರಣ ಆ ದಾಖಲೆಗಳು ಅಗತ್ಯವಿವೆ ಎಂದು ಪ್ರಿಯಾ ಕಪೂರ್ ತಿಳಿಸಿದ್ದಾರೆ.
Priya Kapur and Karisma Kapoor
Priya Kapur and Karisma KapoorInstagram
Published on

ಉದ್ಯಮಿ ದಿವಂಗತ ಸಂಜಯ್ ಕಪೂರ್ ಮತ್ತು ಬಾಲಿವುಡ್ ನಟಿ ಕರಿಷ್ಮಾ ಕಪೂರ್‌ ವಿಚ್ಚೇದನ ದಾಖಲೆ ಒಡಗಿಸಲು ಕೋರಿ ಸಂಜಯ್ ಅವರ‌ ಮೂರನೇ ಪತ್ನಿ‌ ಪ್ರಿಯಾ ಕಪೂರ್ ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರಿಷ್ಮಾ ಅವರಿಗೆ ಸೂಚಿಸಿದೆ.

ತಮ್ಮ ಕಚೇರಿ ಕೋಣೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ ಎಸ್ ಚಂದುರ್ಕರ್ ಅವರು ಎರಡು ವಾರಗಳೊಳಗೆ ಕರಿಷ್ಮಾ ಕಪೂರ್ ಅವರು ಅರ್ಜಿಗೆ ಉತ್ತರ ಸಲ್ಲಿಸುವಂತೆ ಹೇಳಿದ್ದಾರೆ.

ಸಂಜಯ್ ಕಪೂರ್ ಅವರ ಸಾವಿರಾರು ಕೋಟಿ ರೂಪಾಯಿ ಆಸ್ತಿ ವಿಚಾರದಲ್ಲಿ ಕರಿಷ್ಮಾ ಕಪೂರ್ ಮತ್ತು ಪ್ರಿಯಾ ಕಪೂರ್ ಅವರು ದೆಹಲಿ ಹೈಕೋರ್ಟಿನಲ್ಲಿ ಕಾನೂನು ಹೋರಾಟ ನಡೆಸತ್ತಿದ್ದಾರೆ.

ಕರಿಷ್ಮಾ ಮತ್ತು ಸಂಜಯ್ ಕಪೂರ್ ಅವರ ಇಬ್ಬರು ಮಕ್ಕಳು, ಸಂಜಯ್ ಕಪೂರ್ ಅವರ ಮೂರನೇ ಪತ್ನಿಯಾಗಿರುವ ಪ್ರಿಯಾ ಕಪೂರ್ ಅವರು ಸಂಜಯ್ ಕಪೂರ್ ಅವರ ಉಯಿಲನ್ನು ಫೋರ್ಜರಿ ಮಾಡಿದ್ದು, ತಮ್ಮ ಸಂಪೂರ್ಣ ಆಸ್ತಿಯ ಮೇಲಿನ ನಿಯಂತ್ರಣ ಪಡೆಯಲು ಯತ್ನಿಸಿದ್ದಾರೆ ಎಂದು ದೂರಿದ್ದರು.

ಈ ಆರೋಪಗಳನ್ನು ಪ್ರಿಯಾ ಕಪೂರ್ ತಳ್ಳಿ ಹಾಕಿದ್ದು, “ನಿರಾಧಾರ” ಎಂದು ಹೇಳಿದ್ದರು, ಉಯಿಲು ಮಾನ್ಯ ಎಂದು ಸಮರ್ಥಿಸಿಕೊಂಡಿದ್ದರು.

2016ರಲ್ಲಿ ಸಂಜಯ್ ಕಪೂರ್ ಅವರು ತಮ್ಮ ಹಾಗೂ ಕರಿಷ್ಮಾ ಕಪೂರ್ ನಡುವಿನ ವಿಚ್ಛೇದನ ಪ್ರಕರಣವನ್ನು ಮುಂಬೈನಿಂದ ದೆಹಲಿಗೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆ ಪ್ರಕರಣ ಬಾಕಿ ಇರುವಾಗಲೇ, ಎರಡೂ ಕಡೆಯವರು ತಮ್ಮ ಎಲ್ಲ ವಿವಾದಗಳನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಂಡಿದ್ದರು.

ಈಗ ಪ್ರಿಯಾ ಕಪೂರ್ ಅವರು ವಿಲೇವಾರಿಗೊಂಡಿರುವ ಆ ವರ್ಗಾವಣೆ ಅರ್ಜಿಗೆ ಸಂಬಂಧಿಸಿದ ಸಂಪೂರ್ಣ ದಾಖಲೆಗಳ ಪ್ರತಿಯನ್ನು ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸಲ್ಲಿಕೆಯಾಗಿದ್ದ ಅರ್ಜಿ, ಅದರ ಅನುಬಂಧದಲ್ಲಿನ ಎಲ್ಲ ದಾಖಲೆಗಳು, ಆದೇಶಗಳು, ಟಿಪ್ಪಣಿಗಳು, ಇತ್ಯರ್ಥಗೊಂಡಿರುವ ಒಪ್ಪಂದದ ಪ್ರತಿ ಮುಂತಾದವುಗಳನ್ನು ಕೋರಿದ್ದಾರೆ.

ಸಂಜಯ್ ಕಪೂರ್ ಅವರ ನಿಧನದ ನಂತರ, ತಾವು ಅವರ ಕಾನೂನುಬದ್ಧ ವಾರಸುದಾರೆಯಾಗಿದ್ದು, ಅವರ ಆಸ್ತಿ ಮತ್ತು ಕಾನೂನು ವಿಚಾರಗಳಲ್ಲಿ ನೇರ ಪಾಲು ಹೊಂದಿದ್ದೇನೆ ಎಂದು ಪ್ರಿಯಾ ಕಪೂರ್ ಹೇಳಿದ್ದಾರೆ.

ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇರುವ ಉತ್ತರಾಧಿಕಾರ ಪ್ರಕರಣಕ್ಕೆ ಸಂಬಂಧಿಸಿದ ಅಧಿಕೃತ ಬಳಕೆಗೆ ಈ ದಾಖಲೆಗಳು ಅಗತ್ಯವಿವೆ ಎಂದು ಅವರು ವಾದಿಸಿದ್ದಾರೆ.

ಪ್ರಿಯಾ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ವಕೀಲರಾದ ಸ್ಮೃತಿ ಅಸ್ಮಿತಾ ಅವರೊಂದಿಗೆ ಹಾಜರಾದರು. ಅರ್ಜಿಯನ್ನು ವಕೀಲ ವಾಗಿಶಾ ಕೋಚರ್ ಅವರ ಮೂಲಕ ಸಲ್ಲಿಸಲಾಗಿದೆ.

Kannada Bar & Bench
kannada.barandbench.com