ʼಥಗ್‌ ಲೈಫ್‌ʼ ಚಿತ್ರ ಬಿಡುಗಡೆ ಕೋರಿಕೆ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಚಿತ್ರವನ್ನು ಪ್ರದರ್ಶಿಸುವ ಸಿನಿಮಾ ಮಂದಿರಗಳಿಗೆ ಹಾನಿಯುಂಟು ಮಾಡುವ ಬೆದರಿಕೆ ಇರುವುದರಿಂದ ಅಘೋಷಿತ ನಿಷೇಧ ಜಾರಿಯಲ್ಲಿದೆ ಎಂದು ಅರ್ಜಿದಾರರು ನ್ಯಾಯಾಲಯದ ಗಮನ ಸೆಳೆದರು.
Thug Life
Thug Life
Published on

ಕಮಲ್ ಹಾಸನ್ ಅಭಿನಯದ ʼಥಗ್ ಲೈಫ್ʼ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಲು ಪೊಲೀಸ್ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಕರ್ನಾಟಕ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದೆ.

ಸೆನ್ಸಾರ್‌ ಪ್ರಮಾಣೀಕೃತ ಚಿತ್ರವನ್ನು ಕರ್ನಾಟಕದಲ್ಲಿ ಪ್ರದರ್ಶಿಸಲು ಅವಕಾಶ ನೀಡುತ್ತಿಲ್ಲ. ಚಿತ್ರವನ್ನು ಪ್ರದರ್ಶಿಸುವ ಸಿನಿಮಾ ಮಂದಿರಗಳಿಗೆ ಹಾನಿಯುಂಟು ಮಾಡುವ ಬೆದರಿಕೆ ಇರುವುದರಿಂದ ಅಘೋಷಿತ ನಿಷೇಧ ಜಾರಿಯಲ್ಲಿದೆ ಎಂಬ ಅರ್ಜಿದಾರರ ಆರೋಪವನ್ನು ನ್ಯಾಯಮೂರ್ತಿಗಳಾದ ಪಿ ಕೆ ಮಿಶ್ರಾ ಮತ್ತು ಮನಮೋಹನ್ ಅವರ ಪೀಠ ಗಮನಿಸಿತು. "ನಮ್ಮ ಮುಂದಿರಿಸಲಾದ ತುರ್ತುಸ್ಥಿತಿಯನ್ನು ಪರಿಗಣಿಸಿ, ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತೇವೆ" ಎಂದು ನ್ಯಾಯಾಲಯ ಆದೇಶಿಸಿತು.


ಬೆಂಗಳೂರು ನಿವಾಸಿ ಎಂ. ಮಹೇಶ್ ರೆಡ್ಡಿ ಎಂಬುವರು ಅರ್ಜಿ ಸಲ್ಲಿಸಿದ್ದು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್‌ಸಿ) ಚಿತ್ರವು ಪ್ರಮಾಣಪತ್ರ ಪಡೆದಿದ್ದರೂ, ಕೆಲವು ಸಂಘಟನೆಗಳ ಬೆದರಿಕೆ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳ ನಿಷ್ಕ್ರಿಯತೆಯಿಂದಾಗಿ ಕರ್ನಾಟಕದಲ್ಲಿ ʼಥಗ್‌ ಲೈಫ್‌ʼ ಚಿತ್ರ ಪ್ರದರ್ಶನವನ್ನು ನಿಷೇಧಿಸಲಾಗಿದೆ ಎಂದು ಆರೋಪಿಸಿದ್ದಾರೆ.

"ರಾಜ್ಯವು ಸಂಪೂರ್ಣವಾಗಿ ಶರಣಾಗಿದೆ. ಸರ್ಕಾರವು ತೀವ್ರವಾದಿ ಸಂಘಟನೆಗಳೊಂದಿಗೆ ಕೈಜೋಡಿಸಿದೆ. ಮಹಿಳೆಯರು ಮತ್ತು ಮಕ್ಕಳು ಇನ್ನೂ ಒಳಗೆ ಇರುವಾಗಲೇ ಒಂದು ಚಿತ್ರಮಂದಿರವನ್ನು ವಶಪಡಿಸಿಕೊಳ್ಳಲಾಗಿತ್ತು! ಆದರೂ, ಯಾವುದೇ ಎಫ್‌ಐಆರ್ ದಾಖಲಿಸಿಲ್ಲ. ಚಿತ್ರಮಂದಿರದ ಆಡಳಿತ ಮಂಡಳಿಯವರು (ಹೋರಾಟಗಾರರಿಂದ) ತಪ್ಪಿಸಿಕೊಳ್ಳಲು ಹರಸಾಹಸಪಡುತ್ತಿದ್ದರು" ಎಂದು ರೆಡ್ಡಿಯನ್ನು ಪ್ರತಿನಿಧಿಸುವ ವಕೀಲ ಎ. ವೇಲನ್ ಇಂದು ವಾದಿಸಿದರು.

ಬಹುಭಾಷಾ ನಟ ಕಮಲ್ ಹಾಸನ್ ಇತ್ತೀಚೆಗೆ 'ಕನ್ನಡ ತಮಿಳಿನಿಂದ ಹುಟ್ಟಿದೆ' ಎಂದು‌ ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಇದರ ವಿರುದ್ಧ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ಉಂಟಾಗಿತ್ತು. ವಿವಿಧ ಕನ್ನಡಪರ ಸಂಘಟನೆಗಳು ಕಮಲ್‌ ಹಾಸನ್‌ ಅವರ ಚಿತ್ರವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದವು.

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಪ್ರಕಾರ, ವಿಕ್ಟರಿ ಸಿನಿಮಾ ಸಂಸ್ಥೆಯು ಬೆಂಗಳೂರಿನಲ್ಲಿ ಚಿತ್ರವನ್ನು ಪ್ರದರ್ಶಿಸುವುದಾಗಿ ಘೋಷಿಸಿದ ನಂತರ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ ಎ ನಾರಾಯಣ ಗೌಡ, ಕಮಲ್‌ ಅಭಿನಯದ ಯಾವುದೇ ಚಿತ್ರ ರಾಜ್ಯದಲ್ಲಿ ಬಿಡುಗಡೆಯಾದರೆ "ಥಿಯೇಟರ್‌ಗಳಿಗೆ ಬೆಂಕಿ ಹಚ್ಚುವುದಾಗಿ" ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ಕೆಲ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳಲ್ಲಿ 1991 ರ ತಮಿಳು ವಿರೋಧಿ ಗಲಭೆಗಳನ್ನು ಪುನರಾವರ್ತಿಸಲು ಸ್ಪಷ್ಟವಾಗಿ ಕರೆ ನೀಡಲಾಗಿದೆ ಮತ್ತು ಜೂನ್ 5 ರಂದು ಚಿತ್ರ ಬಿಡುಗಡೆಯಾದಲ್ಲಿ ಹಿಂಸಾಚಾರ ಭುಗಿಲೇಳಲಿದೆ ಎಂದು ಎಚ್ಚರಿಸಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಟ್ವೀಟ್ ಮತ್ತು ಬೆದರಿಕೆ ಕುರಿತಾದ ಆರೋಪಗಳ ಬಗ್ಗೆ ವ್ಯಾಪಕ ಸಾರ್ವಜನಿಕ ಆಕ್ರೋಶದ ಹೊರತಾಗಿಯೂ ಯಾವುದೇ ಪ್ರಕರಣಗಳನ್ನು ಪೊಲೀಸರು ದಾಖಲಿಸಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು. ಕರವೇ ಸದಸ್ಯರು ವಿಕ್ಟರಿ ಚಿತ್ರಮಂದಿರವನ್ನು ಜೂನ್ 1 ರಂದು ಮುತ್ತಿಗೆ ಹಾಕಲು ಪ್ರಯತ್ನಿಸಿದ ನಂತರ ಚಿತ್ರ ಬಿಡುಗಡೆಗೆ ಬೆದರಿಕೆಗಳು ಹೆಚ್ಚಾದವು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಆನಂತರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ) ಒತ್ತಡಕ್ಕೆ ಸಿಲುಕಿ ಚಿತ್ರ ಬಿಡುಗಡೆ ಮೇಲೆ "ನಿಷೇಧ" ಹೇರಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಚಿತ್ರದ ನಿರ್ಮಾಪಕರು ಪೊಲೀಸ್ ರಕ್ಷಣೆಗಾಗಿ ಕರ್ನಾಟಕ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದರೂ, ಕಮಲ್ ಹಾಸನ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂಬ ಬಗ್ಗೆ ಮಾತ್ರವೇ ನ್ಯಾಯಾಲಯದ ವಿಚಾರಣೆಯ ವೇಳೆ ಗಮನ ಹರಿಸಲಾಯಿತು ಎಂದು ಅರ್ಜಿಯಲ್ಲಿ ಹೇಳಲಾಗಿದೆ

ಹೈಕೋರ್ಟ್‌ನ ಈ ನಡೆಯನ್ನು ಅರ್ಜಿದಾರರು ಓಲೈಕೆಯ ಪ್ರಯತ್ನ ಎಂದು ಹೇಳಿದ್ದು, ಇದು ಮೂಲಭೂತ ಹಕ್ಕುಗಳನ್ನು ರಕ್ಷಿಸಿಕೊಳ್ಳುವಲ್ಲಿ ಹೈಕೋರ್ಟ್ ಮಾರ್ಗವನ್ನು ನಿಷ್ಪರಿಣಾಮಕಾರಿಯನ್ನಾಗಿಸಿತು ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಹೈಕೋರ್ಟ್‌ನಲ್ಲಿ, ಕಮಲ್ ಹಾಸನ್ ತಮ್ಮ ಹೇಳಿಕೆಗಳಿಗೆ ಕ್ಷಮೆಯಾಚಿಸುವುದನ್ನು ತಪ್ಪಿಸಿದರು. ಈ ವಿಚಾರವಾಗಿ ಕೆಎಫ್‌ಸಿಸಿ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ಹೇಳಿದ್ದರು.

Kannada Bar & Bench
kannada.barandbench.com