ಬ್ಯಾಂಕಿಂಗ್‌ ಹಗರಣಗಳು: ಆರ್‌ಬಿಐ ಅಧಿಕಾರಿಗಳ ತನಿಖೆ ಕೋರಿದ ಸ್ವಾಮಿ; ಸಿಬಿಐ, ಆರ್‌ಬಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಪ್ರಕರಣ ಪರಿಶೀಲಿಸುವುದಾಗಿ ತಿಳಿಸಿದೆ.
Subramanian Swamy and RBI
Subramanian Swamy and RBI

ವಿವಿಧ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರಕ್ಕೆ ಸಂಬಂಧಿಸಿದ ಹಗರಣಗಳಲ್ಲಿ ಆರ್‌ಬಿಐ ಅಧಿಕಾರಿಗಳ ಪಾತ್ರ ಇರುವ ಬಗ್ಗೆ ತನಿಖೆ ನಡೆಸುವಂತೆ ಕೋರಿ ಬಿಜೆಪಿ ನಾಯಕ  ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲರಾದ ಸತ್ಯ ಸಬರ್‌ವಾಲ್‌ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಬಿಐ ಮತ್ತು ಆರ್‌ಬಿಐಗೆ ಸುಪ್ರೀಂ ಕೋರ್ಟ್‌ ಸೋಮವಾರ ನೋಟಿಸ್‌ ಜಾರಿ ಮಾಡಿದೆ [ಡಾ. ಸುಬ್ರಮಣಿಯನ್ ಸ್ವಾಮಿ ಮತ್ತಿತರರು ಹಾಗೂ ಸಿಬಿಐ ಇನ್ನಿತರರ ನಡುವಣ ಪ್ರಕರಣ]

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಪ್ರಕರಣ ಪರಿಶೀಲಿಸುವುದಾಗಿ ತಿಳಿಸಿತು.

ಕಳೆದ ಕೆಲ ವರ್ಷಗಳಲ್ಲಿ ಆರ್‌ಬಿಐ ಮತ್ತಿತರ ಏಜೆನ್ಸಿಗಳು ಪತ್ತೆ ಮಾಡಿದ ಬ್ಯಾಂಕಿಂಗ್ ವಂಚನೆಗಳ ಸಂಖ್ಯೆ ಮತ್ತು ಅದರ ಮೊತ್ತ ದೊಡ್ಡದಾಗಿದ್ದರೂ, ಠೇವಣಿದಾರರು ಹೂಡಿಕೆದಾರರು ಹಾಗೂ ಷೇರುದಾರರು ಸೇರಿದಂತೆ ವಿವಿಧ ಪಾಲುದಾರರ ಹಿತಾಸಕ್ತಿಗಳನ್ನು ರಕ್ಷಿಸಲು ಆರ್‌ಬಿಐ ವಿಫಲವಾಗಿದೆ ಎಂದು ಸ್ವಾಮಿ ಮತ್ತು ವಕೀಲ ಸತ್ಯ ಸಬರ್ವಾಲ್ ಸಲ್ಲಿಸಿದ ಮನವಿಯಲ್ಲಿ ತಿಳಿಸಲಾಗಿದೆ.

ಇದು ಇಡೀ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಕಾರಣವಾಗಿದೆ. ಬ್ಯಾಂಕ್‌ಗಳ ನಿಯಂತ್ರಕ ಆರ್‌ಬಿಐ ವಂಚನೆಗಳ ಸರಣಿ ಬಗ್ಗೆ ಉದಾಸೀನ ಧೋರಣೆ ತಳೆದಿರುವುದು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಹೀಗಾಗಿ ಆರ್‌ಬಿಐನ ಈ ಕೆಳಗಿನ ಹಗರಣಗಳ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಅರ್ಜಿ ಕೋರಿದೆ:

- ಕಿಂಗ್‌ಫಿಷರ್ ಹಗರಣ;

- ಬ್ಯಾಂಕ್ ಆಫ್ ಮಹಾರಾಷ್ಟ್ರ ಹಗರಣ;

- ಉತ್ತರ ಪ್ರದೇಶ ಮೂಲದ ಖಾಸಗಿ ಸಕ್ಕರೆ ಸಂಸ್ಥೆ ಹಗರಣ;

- ನೀರವ್ ಮೋದಿ/ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ;

-ಐಎಲ್‌&ಎಫ್‌ಎಸ್‌ ಹಗರಣ;

- ಪಿಎಂಸಿ ಬ್ಯಾಂಕ್ ಹಗರಣ;

- ಯೆಸ್ ಬ್ಯಾಂಕ್ ಹಗರಣ;

- ಲಕ್ಷ್ಮಿ ವಿಲಾಸ್ ಬ್ಯಾಂಕ್ ಹಗರಣ;

- ರೋಟೊಮ್ಯಾಕ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಹಗರಣ;

- ಫಸ್ಟ್ ಲೀಸಿಂಗ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಹಗರಣ.

Related Stories

No stories found.
Kannada Bar & Bench
kannada.barandbench.com