ವಾರಸುದಾರರಿಗೆ ನಿಷ್ಕ್ರಿಯ ಖಾತೆಗಳ ಹಣ: ಪತ್ರಕರ್ತೆ ಸುಚೇತಾ ದಲಾಲ್ ಮನವಿ ಕುರಿತು ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಸರ್ಕಾರಿ ಸ್ವಾಮ್ಯದಲ್ಲಿ ಸಿಲುಕಿರುವ ಈ ನಿಧಿ ಮಾರ್ಚ್ 2021ರ ಹೊತ್ತಿಗೆ ₹ 40,000 ಕೋಟಿ ದಾಟಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
Sucheta Dalal and Supreme Court
Sucheta Dalal and Supreme Court Twitter

ಬ್ಯಾಂಕ್‌ ಖಾತೆದಾರರು, ಠೇವಣಿ ಇರಿಸಿರುವವರು ಹಾಗೂ ಹೂಡಿಕೆದಾರರು ಸಾವನ್ನಪ್ಪಿದ ಬಳಿಕ ನಿಷ್ಕ್ರಿಯಗೊಳ್ಳುವ ಅವರ ಖಾತೆಗಳಲ್ಲಿರುವ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ತಲುಪಿಸಲು ಅನುಕೂಲವಾಗುವಂತೆ ಕೇಂದ್ರೀಕೃತ ಮಾಹಿತಿ ವ್ಯವಸ್ಥೆ ರೂಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯೊಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ (ಸುಚೇತ ದಲಾಲ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ಸಾರ್ವಜನಿಕ ಹಿತಾಸಕ್ತಿ ಅರ್ಜಿ ಪ್ರಮುಖ ಪ್ರಶ್ನೆಗಳನ್ನು ಎತ್ತಿದೆ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಜೆ ಕೆ ಮಾಹೇಶ್ವರಿ ಅವರಿದ್ದ ಪೀಠ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಿಂದ (ಸೆಬಿ) ಯಿಂದ ಪ್ರತಿಕ್ರಿಯೆ ಕೇಳಿದೆ.

ಹಿರಿಯ ವಿತ್ತ ಪತ್ರಕರ್ತೆ ಸುಚೇತಾ ದಲಾಲ್ ಅವರು ವಕೀಲ ಪ್ರಶಾಂತ್ ಭೂಷಣ್ ಅವರ ಮೂಲಕ ಮನವಿ ಸಲ್ಲಿಸಿದ್ದಾರೆ. ಹೂಡಿಕೆ ಅಥವಾ ಠೇವಣಿಗಳಲ್ಲಿ ಸಾರ್ವಜನಿಕರು ಕ್ಲೇಮ್‌ ಮಾಡದ ಹಣವನ್ನು ಕೇಂದ್ರೀಕೃತ ಆನ್‌ಲೈನ್‌ ಡೇಟಾಬೇಸ್‌ನಲ್ಲಿ ಬಹಿರಂಗಪಡಿಸಿ ಆ ಹಣ ಅವರ ಕಾನೂನಾತ್ಮಕ ಉತ್ತರಾಧಿಕಾರಿಗಳು ಅಥವಾ ನಾಮನಿರ್ದೇಶಿತರಿಗೆ ಲಭ್ಯವಾಗುವಂತೆ ಮಾಡಲು ನಿರ್ದೇಶಿಸಬೇಕು ಎಂದು ಅವರು ಕೋರಿದ್ದಾರೆ.

Also Read
[ಕಲ್ಲಿದ್ದಲು ಹಗರಣ] ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿಗೆ ಜೈಲು ಶಿಕ್ಷೆ

ಇಲ್ಲದೇ ಹೋದರೆ ಈ ನಿಧಿ ವರ್ಗಾವಣೆಯಾಗಿ ಸರ್ಕಾರಿ ಒಡೆತನದ ನಿಧಿಗಳಾದ ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ (DEAF), ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿ (IEPF) ಹಾಗೂ ಹಿರಿಯ ನಾಗರಿಕರ ಕಲ್ಯಾಣ ನಿಧಿಗಳಲ್ಲಿ (SCWF) ಸಿಲುಕಿಕೊಳ್ಳುತ್ತದೆ. ಸರ್ಕಾರಿ ಸ್ವಾಮ್ಯದಲ್ಲಿ ಸಿಲುಕಿರುವ ಈ ನಿಧಿ ಮಾರ್ಚ್ 2021 ರ ಹೊತ್ತಿಗೆ ₹ 40,000 ಕೋಟಿ ದಾಟಿದ್ದು ಖಾತೆದಾರರ ಮಾಹಿತಿಯನ್ನು ಒದಗಿಸುವ ಮೂಲಕ ಕ್ಲೇಮುದಾರರು ಈ ಹಣ ಪಡೆಯಲು ಅನುಮತಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಹರ್ಷದ್‌ ಮೆಹ್ತಾ ಷೇರು ಹಗರಣ ಬಯಲಿಗೆಳೆದಿದ್ದ ದಲಾಲ್‌

ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಯಲ್ಲಿ ಪತ್ರಕರ್ತೆಯಾಗಿದ್ದ ಸುಚೇತಾ ದಲಾಲ್‌ 1992ರಲ್ಲಿ ಹರ್ಷದ್ ಮೆಹ್ತಾ ಷೇರು ಹಗರಣವನ್ನು (ಸೆಕ್ಯುರಿಟೀಸ್‌ ಹಗರಣ) ಬಯಲಿಗೆಳೆದಿದ್ದರು. 2006ರಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದರು.

ಪ್ರಸ್ತುತ ಅವರು ಮನಿಲೈಫ್ ನಿಯತಕಾಲಿಕದ ವ್ಯವಸ್ಥಾಪಕ ಸಂಪಾದಕರಾಗಿದ್ದು ಆರು ವರ್ಷಗಳಿಂದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಯ (ಐಇಪಿಎಫ್) ಸದಸ್ಯರಾಗಿದ್ದಾರೆ.

Related Stories

No stories found.
Kannada Bar & Bench
kannada.barandbench.com