ಮಣಿಪುರ ಆಂತರಿಕ ಗಡಿ ಪರವಾನಗಿ ವ್ಯವಸ್ಥೆ ಪ್ರಶ್ನಿಸಿ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

ಈ ವ್ಯವಸ್ಥೆ ಮಣಿಪುರಕ್ಕೆ ಸೇರದವರ ಅಥವಾ ಖಾಯಂ ನಿವಾಸಿಗಳಲ್ಲದವರ ಆಗಮನ ಮತ್ತು ನಿರ್ಗಮನ ನಿರ್ಬಂಧಿಸಲು ಸರ್ಕಾರಕ್ಕೆ ಅನಿಯಂತ್ರಿತ ಅಧಿಕಾರ ನೀಡುತ್ತದೆ ಎಂದು ಅರ್ಜಿ ತಿಳಿಸಿದೆ.
Supreme Court, Manipur

Supreme Court, Manipur

Published on

ಮಣಿಪುರ ಆಂತರಿಕ ಗಡಿ ಪರವಾನಗಿ ವ್ಯವಸ್ಥೆ (ಇನ್ನರ್‌ ಲೈನ್‌ ಪರ್ಮಿಟ್‌ ಸಿಸ್ಟಂ) ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ಸೋಮವಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರತಿಕ್ರಿಯೆ ಕೇಳಿದೆ (ಆಮ್ರಾ ಬಂಗಾಲಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ).

ಈ ವ್ಯವಸ್ಥೆ ಮಣಿಪುರಕ್ಕೆ ಸೇರದ ಅಥವಾ ಖಾಯಂ ನಿವಾಸಿಗಳಲ್ಲದ ವ್ಯಕ್ತಿಗಳ ಆಗಮನ ಮತ್ತು ನಿರ್ಗಮನ ನಿರ್ಬಂಧಿಸಲು ಸರ್ಕಾರಕ್ಕೆ ಅನಿಯಂತ್ರಿತ ಅಧಿಕಾರ ನೀಡುತ್ತದೆ ಎಂದು ಆಮ್ರಾ ಬಂಗಾಲೀ ಎಂಬ ಸಂಘಟನೆ ಸಲ್ಲಿಸಿರುವ ಅರ್ಜಿಯಲ್ಲಿ ಹೇಳಲಾಗಿದೆ.

Also Read
ಅಸ್ಸಾಂ ಹಿಂಸಾಚಾರ: ಎನ್‌ಆರ್‌ಸಿಯಲ್ಲಿದ್ದರೆ ಮಾತ್ರ ಪುನರ್ವಸತಿ ಎಂದು ಗುವಾಹಟಿ ಹೈಕೋರ್ಟ್‌ಗೆ ತಿಳಿಸಿದ ರಾಜ್ಯ ಸರ್ಕಾರ

ಈ ಪ್ರದೇಶದ ಆದಾಯ ಮೂಲವಾಗಿರುವ ರಾಜ್ಯದ ಪ್ರವಾಸೋದ್ಯಮಕ್ಕೆ ಅಡ್ಡಿ ಉಂಟು ಮಾಡುವ ಈ ಕರಾಳ ವ್ಯವಸ್ಥೆ ಆಂತರಿಕ ಗಡಿಯಾಚೆಗಿನ ಪ್ರದೇಶದೊಂದಿಗೆ ಸಾಮಾಜಿಕ ಏಕೀಕರಣ, ಅಭಿವೃದ್ಧಿ ಮತ್ತು ತಾಂತ್ರಿಕ ಪ್ರಗತಿಯ ನೀತಿಗಳನ್ನು ಮೂಲಭೂತವಾಗಿ ವಿರೋಧಿಸುತ್ತದೆ ಎಂದು ಅರ್ಜಿ ಆಕ್ಷೇಪಿಸಿದೆ.

ಪರವಾನಗಿ ವ್ಯವಸ್ಥೆಯನ್ನು 'ಕಾನೂನುಗಳ ಅಳವಡಿಕೆ (ತಿದ್ದುಪಡಿ) ಕಾಯಿದೆ, 2019' ಅಡಿ ಪರಿಚಯಿಸಲಾಗಿದೆ. ಇದು ನೂರನಲವತ್ತು ವರ್ಷಗಳ ಹಿಂದಿನ ವಸಾಹತು ಕಾಲೀನ ಕಾನೂನಾದ 'ಪೂರ್ವ ಬಂಗಾಳ ಗಡಿ ನಿಯಂತ್ರಣ, 1873' (ಬಿಇಎಫ್‌ಆರ್) ಕಾಯಿದೆಯನ್ನು ವಿಸ್ತರಿಸುತ್ತದೆ. ಬ್ರಿಟಿಷರು ಈ ಕಾನೂನನ್ನು ಅಸ್ಸಾಂನ ಚಹಾ ತೋಟಗಳ ಮೇಲಿನ ತಮ್ಮ ಹಿಡಿತವನ್ನು ಉಳಿಸಿಕೊಳ್ಳಲು, ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮ ವಾಣಿಜ್ಯ ಹಿತಾಸಕ್ತಿಗಳಿಗೆ ಭಾರತೀಯರಿಂದ ಅಡ್ಡಿಯಾಗದಂತೆ ಕಾಪಾಡಿಕೊಳ್ಳಲು ಜಾರಿಗೊಳಿಸಿದ್ದರು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ನೋಟಿಸ್ ಜಾರಿಗೊಳಿಸಿದ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರನ್ನೊಳಗೊಂಡ ಪೀಠ ನಾಲ್ಕು ವಾರಗಳ ನಂತರ ವಿಚಾರಣೆ ನಡೆಸುವುದಾಗಿ ತಿಳಿಸಿ ಪ್ರಕರಣವನ್ನು ಮುಂದೂಡಿತು.

Kannada Bar & Bench
kannada.barandbench.com