ಹೌಸಿಂಗ್‌ ಸೊಸೈಟಿಗಳಲ್ಲಿ ಇವಿ ಚಾರ್ಜರ್‌ಗೆ ಅನುಮತಿ ಕೋರಿಕೆ: ಕೇಂದ್ರ, ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ನೋಟಿಸ್‌

ತಮಗೆ ಮೀಸಲಾದ ನಿಲುಗಡೆ ಸ್ಥಳದಲ್ಲಿ ಇವಿ ಚಾರ್ಜರ್‌ ಅಳವಡಿಸಲು ಹೌಸಿಂಗ್‌ ಸೊಸೈಟಿ ನಿವಾಸಿಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಪಿಐಎಲ್‌ ದೂರಿದೆ.
EV charger
EV charger
Published on

ಹೌಸಿಂಗ್ ಸೊಸೈಟಿಗಳು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಒದಗಿಸದೆ ಅಡ್ಡಿಪಡಿಸುತ್ತಿವೆ, ಇವಿ ಚಾರ್ಜರ್‌ ಅಳವಡಿಸಲು ಮುಂದಾಗುವ ನಿವಾಸಿಗಳಿಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡದೆ ತಡೆಯಲಾಗುತ್ತಿದೆ ಎಂಬ ಆರೋಪ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಆಲಿಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿದೆ.

ಅರ್ಜಿದಾರ ರಚಿತ್ ಕಟ್ಯಾಲ್ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಸಿಜೆಐ ಸೂರ್ಯಕಾಂತ್‌ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ, ಗ್ರೇಟರ್ ನೋಯ್ಡಾದಲ್ಲಿರುವ (ಪಶ್ಚಿಮ) ನೀರಲ ಎಸ್ಟೇಟ್‌ ಮೂರನೇ ಹಂತದ ಹೌಸಿಂಗ್‌ ಸೊಸೈಟಿ ಹಾಗೂ ಅದರ  ಸೌಲಭ್ಯ ನಿರ್ವಹಣಾ ಸಂಸ್ಥೆಯಾದ ಕುಶ್ಮನ್ & ವೇಕ್‌ಫೀಲ್ಡ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿಯ ಪ್ರಮುಖಾಂಶಗಳು

  • ಹೌಸಿಂಗ್ ಸೊಸೈಟಿಗಳು ನಿವಾಸಿಗಳಿಗೆ ಇವಿ ಚಾರ್ಜರ್‌ ಸ್ಥಾಪನೆಗೆ ಎನ್‌ಒಸಿ ನೀಡದೆ ತಡೆ ಒಡ್ಡುತ್ತಿವೆ.

  • ವಿದ್ಯುತ್ ಸಚಿವಾಲಯದ 2024ರಲ್ಲಿಯೇ ಈ ಸಂಬಂಧ ಮಾರ್ಗಸೂಚಿ ನೀಡಿದ್ದರೂ ಅವುಗಳನ್ನು ಜಾರಿಗೆ ತರುತ್ತಿಲ್ಲ.

  • ಅರ್ಜಿದಾರರು ತಮ್ಮ ಖರ್ಚಿನಲ್ಲಿ ಅನುಮೋದಿತ ತಂತ್ರಜ್ಞರ ಮೂಲಕ ಚಾರ್ಜಿಂಗ್‌ ಘಟಕ ಅಳವಡಿಸಿಕೊಳ್ಳಲೂ ಅನುಮತಿಸುತ್ತಿಲ್ಲ.

  • ಸೊಸೈಟಿ ಮತ್ತು ನಿರ್ವಹಣಾ ಸಂಸ್ಥೆಗಳ ನಿರಾಕರಣೆ ಸ್ವಚ್ಚ ಸಾರಿಗೆ ಸಂಚಾರ ಆಶಯಕ್ಕೆ ಧಕ್ಕೆ ತರುತ್ತಿದೆ.

  • ಇದು ಸಂವಿಧಾನದ ಕಲಂ 14 (ಸಮಾನತೆ ಹಕ್ಕು) ಮತ್ತು ಕಲಂ 21ಗಳಿಗೆ (ಜೀವನ ಮತ್ತು ಸ್ವಾತಂತ್ರ್ಯ ಹಕ್ಕು) ವಿರುದ್ಧ.

  • ಹೀಗೆ ಮನಸೋಇಚ್ಛೆಯ ವಿಳಂಬ ಇಲ್ಲವೇ ನಿರಾಕರಣೆ ನಗರ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್‌ ವಾಹನ ಬಳಕೆಗೆ ದೊಡ್ಡ ತಡೆ ಒಡುತ್ತಿದೆ.

  • ಸಂಬಂಧಿತ ಸೊಸೈಟಿಯಲ್ಲಿ ಸುಮಾರು 4,000 ಫ್ಲ್ಯಾಟ್‌ಗಳು ಮತ್ತು ಅನೇಕ ಇವಿಗಳಿದ್ದರೂ, ಸಾಮಾನ್ಯ ಬಳಕೆಗೆ ಕೇವಲ ಎರಡು ಕಡಿಮೆ ಸಾಮರ್ಥ್ಯದ ಚಾರ್ಜಿಂಗ್ ಘಟಕಗಳಷ್ಟೇ ಲಭ್ಯವಿವೆ.

  • ಮಹಾರಾಷ್ಟ್ರದಲ್ಲಿ ಸಮಯಬದ್ಧ ಅನುಮತಿ ನೀಡುವ ವ್ಯವಸ್ಥೆ ಇದ್ದು ಇದನ್ನು ಇಲ್ಲಿಯೂ ಜಾರಿಗೆ ತರಲು ಸ್ಪಷ್ಟ ನಿರ್ದೇಶನ ನೀಡಬೇಕು.

  • 2024ರ ಮಾರ್ಗಸೂಚಿಗಳನ್ನು ಏಕರೂಪವಾಗಿ ಜಾರಿಗೊಳಿಸಲು ನ್ಯಾಯಾಲಯ ಆದೇಶಿಸಬೇಕು.

  • ಉತ್ತರ ಪ್ರದೇಶ ಸರ್ಕಾರ ಸೂಕ್ತ ಕಾಯಿದೆ ಜಾರಿಗೆ ತರುವವರೆಗೆ ಅರ್ಜಿದಾರರಿಗೆ ತಮ್ಮ ಪಾರ್ಕಿಂಗ್ ಸ್ಥಳದಲ್ಲಿ ವೈಯಕ್ತಿಕ ಇ ವಿ ಚಾರ್ಜರ್ ಸ್ಥಾಪಿಸಲು ಅನುಮತಿ ನೀಡುವಂತೆ ಹೌಸಿಂಗ್‌ ಸೊಸೈಟಿ ಮತ್ತು ನಿರ್ವಹಣಾ ಸಂಸ್ಥೆಗೆ ನಿರ್ದೇಶಿಸಬೇಕು.

Kannada Bar & Bench
kannada.barandbench.com