
ಮುಂಬೈನ ಲೀಲಾವತಿ ಆಸ್ಪತ್ರೆಯ ಮಾಲೀಕತ್ವ ಹೊಂದಿರುವ ಲೀಲಾವತಿ ಕೀರ್ತಿಲಾಲ್ ಮೆಹ್ತಾ ವೈದ್ಯಕೀಯ ಟ್ರಸ್ಟ್ ನೀಡಿದ ದೂರಿನ ಮೇರೆಗೆ ತಮ್ಮ ವಿರುದ್ಧ ದಾಖಲಾಗಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ರದ್ದುಪಡಿಸಲು ಕೋರಿ ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಶಶಿಧರ್ ಜಗದೀಶನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಎಫ್‌ಐಆರ್ ಪ್ರಶ್ನಿಸಿ ಜಗದೀಶನ್ ಸಲ್ಲಿಸಿರುವ ಅರ್ಜಿಯು ಈಗಾಗಲೇ ಬಾಂಬೆ ಹೈಕೋರ್ಟ್‌ನಲ್ಲಿ ಬಾಕಿ ಇದೆ ಎಂದು ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಆರ್ ಮಹಾದೇವನ್ ಅವರ ಪೀಠ ಗಮನಿಸಿತು. ಹಾಗಾಗಿ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಮುಂದುವರಿಸಲು ಪೀಠವು ಸೂಚಿಸಿತು.
"ಅರ್ಜಿಯನ್ನು ಆಲಿಸುವುದು ಅನುಚಿತವಾಗಿರುತ್ತದೆ. ಪ್ರಕರಣವನ್ನು (ಹೈಕೋರ್ಟ್ ಮುಂದೆ) ಪಟ್ಟಿ ಮಾಡಲಾಗಿದೆ" ಎಂದು ನ್ಯಾಯಾಲಯವು ಹೇಳಿತು. ಹೈಕೋರ್ಟ್ ಪ್ರಕರಣವನ್ನು ಪಟ್ಟಿ ಮಾಡಿದ್ದು, ಅದರಂತೆ ಜುಲೈ 14 ರಂದು ವಿಚಾರಣೆ ನಡೆಸುವ ಭರವಸೆಯನ್ನು ನ್ಯಾಯಾಲಯ ವ್ಯಕ್ತಪಡಿಸಿತು.
"ಪ್ರಕರಣವನ್ನು ಈ ಹಿಂದೆ ಜೂನ್ 18, 20, 25 ಮತ್ತು 26 ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು ಎಂಬುದನ್ನು ನಾವು ಗಮನಿಸಿದ್ದೇವೆ. ಜುಲೈ 14 ರಂದು ಪ್ರಕರಣವನ್ನು (ಹೈಕೋರ್ಟ್‌ನಲ್ಲಿ) ಪಟ್ಟಿ ಮಾಡಲಾಗಿದ್ದು, ವಿಚಾರಣೆ ಕೈಗೆತ್ತಿಕೊಳ್ಳಲಾಗುವುದು ಎಂದು ನಾವು ನಂಬುತ್ತೇವೆ" ಎಂದು ನ್ಯಾಯಾಲಯ ಹೇಳಿತು.
ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಎಚ್‌ಡಿಎಫ್‌ಸಿ ಸಿಇಒ ಶಶಿಧರನ್ ಅವರ ಪರವಾಗಿ ಹಾಜರಾಗಿ, ಇದು ಕ್ಷುಲ್ಲಕ ಎಫ್‌ಐಆರ್ ಆಗಿದ್ದು, ಸಿಇಒ ಅವರನ್ನು ಪೊಲೀಸ್ ಠಾಣೆಗೆ ಕರೆಸಿಕೊಳ್ಳುವ ಉದ್ದೇಶದಿಂದ ಬ್ಯಾಂಕ್ ಅನ್ನು ಖಾಸಗಿ ವಿವಾದದಲ್ಲಿ ಸಿಲುಕಿಸಲಾಗಿದೆ ಎಂದು ವಾದಿಸಿದರು.
ಆಗ ನ್ಯಾಯಾಲಯವು, ಇದನ್ನು ಹೈಕೋರ್ಟ್ ಮುಂದೆ ವಾದಿಸುವಂತೆ ತಿಳಿಸಿತು. ಅಲ್ಲದೆ, "ಈ ಪ್ರಕರಣವನ್ನು ಜೂನ್‌ನಲ್ಲಿಯೇ ಆರಂಭಿಸಿದ್ದರೂ ಅನೇಕ ಬೆಂಚ್‌ಗಳು ವಿಚಾರಣೆಯಿಂದ ಹಿಂದೆ ಸರಿದಿವೆ. ಕಡೆಗೆ, ಈಗ ಇದನ್ನು ಪಟ್ಟಿ ಮಾಡಲಾಗಿದೆ. ಹೀಗಾಗಿ ಈಗ ಇದನ್ನು ನಾವು ಅಲಿಸುವುದು ಸೂಕ್ತವಲ್ಲ," ಎಂದು ಹೇಳಿ ಅರ್ಜಿಯನ್ನು ವಿಲೇವಾರಿ ಮಾಡಿತು.