Toilet for Transgender persons
Toilet for Transgender persons

ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ ವಿಕಲಚೇತನರು, ತೃತೀಯಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಸುಪ್ರೀಂ ನಿರ್ದೇಶನ

ದೇಶದ ಎಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಸೂಕ್ತ ಸೌಲಭ್ಯಗಳೊಂದಿಗೆ ಪುರುಷರು, ಮಹಿಳೆಯರು, ವಿಕಲಚೇತನರು ಹಾಗೂ ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಲು ಎಲ್ಲಾ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
Published on

ದೇಶದ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಆವರಣಗಳಲ್ಲಿ ಪುರುಷರು, ಮಹಿಳೆಯರು, ವಿಕಲಚೇತನರು ಹಾಗೂ ತೃತೀಯ ಲಿಂಗಿ ವ್ಯಕ್ತಿಗಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸುವಂತೆ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಹೈಕೋರ್ಟ್‌ಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿದೆ [ರಜೀಬ್ ಕಲಿತಾ ಮತ್ತು ಭಾರತ ಒಕ್ಕೂಟ ಸರ್ಕಾರ ನಡುವಣ ಪ್ರಕರಣ].

ಶೌಚಾಲಯ ಅಥವಾ ವಾಶ್‌ರೂಮ್‌ ಇಲ್ಲವೇ ರೆಸ್ಟ್‌ರೂಮ್‌ಗಳು ಕೇವಲ ಸೌಲಭ್ಯದ ವಿಚಾರವಾಗಿರದ ಮಾನವ ಹಕ್ಕುಗಳ ಭಾಗವಾಗಿದ್ದು ಮೂಲಭೂತ ಅವಶ್ಯಕತೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ತಿಳಿಸಿದೆ.

Also Read
ಪಾರ್ಸಿ ಅಗ್ನಿ ದೇವಾಲಯದ ಸಮೀಪ ಶೌಚಾಲಯ ನಿರ್ಮಾಣಕ್ಕೆ ಆಕ್ಷೇಪ: ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌

“ಬದುಕುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21ನೇ ವಿಧಿಯಡಿ ಸೂಕ್ತ ನೈರ್ಮಲ್ಯದ ಸೌಲಭ್ಯ ಪಡೆಯುವುದನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಈ ಹಕ್ಕು ಅಂತರ್ಗತವಾಗಿದ್ದು ಎಲ್ಲಾ ವ್ಯಕ್ತಿಗಳಿಗೆ ಸುರಕ್ಷಿತ ಮತ್ತು ನೈರ್ಮಲ್ಯದ ವಾತಾವರಣ ಒದಗಿಸುವುದನ್ನು ಒಳಗೊಂಡಿರುತ್ತದೆ.  ಆರೋಗ್ಯಕರ ವಾತಾವರಣ ಸೃಷ್ಟಿಸುವುದು ಮತ್ತು ಸಾರ್ವಜನಿಕ ಆರೋಗ್ಯ ಸುಧಾರಣೆಗಾಗಿ ನಿರಂತರ ಶ್ರಮಿಸುವುದು ಸಂವಿಧಾನದ ಭಾಗ IVರ ಅಡಿಯಲ್ಲಿ ಪ್ರತಿಯೊಂದು ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿವೇಚನಾಯುಕ್ತ ಕರ್ತವ್ಯವಾಗಿದೆ” ಎಂದು ನ್ಯಾಯಾಲಯ ವಿವರಿಸಿದೆ.

ಶೌಚಾಲಯಗಳ ನಿರ್ಮಾಣದ ಸಂಬಂಧ ನ್ಯಾಯಾಲಯ ಈ ಕೆಳಕಂಡ ನಿರ್ದೇಶನಗಳನ್ನು ನೀಡಿದೆ:

ದೇಶದ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳ ಆವರಣಗಳಲ್ಲಿ ಪುರುಷರು, ಮಹಿಳೆಯರು, ಅಂಗವಿಕಲರು ಹಾಗೂ ತೃತೀಯ ಲಿಂಗಿ ವ್ಯಕ್ತಿಗಳಿಗೆ ಪ್ರತ್ಯೇಕ ಶೌಚಾಲಯ ಸೌಲಭ್ಯ ಕಲ್ಪಿಸಲು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಹೈಕೋರ್ಟ್‌ಗಳು ಮುಂದಾಗಬೇಕು.

 ಈ ಸೌಲಭ್ಯಗಳು ನ್ಯಾಯಾಧೀಶರು, ವಕೀಲರು, ದಾವೆದಾರರು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ನಿಖರವಾಗಿ ದೊರೆತಿದೆಯೇ ಎಂಬ ಬಗ್ಗೆ ಹೈಕೋರ್ಟ್‌ಗಳು ಮೇಲ್ವಿಚಾರಣೆ ನಡೆಸಿ ಖಚಿತಪಡಿಸಿಕೊಳ್ಳಬೇಕು.

ನ್ಯಾಯಾಲಯದ ಆವರಣದೊಳಗೆ ಶೌಚಾಲಯ ಸೌಲಭ್ಯಗಳ ನಿರ್ಮಾಣ, ನಿರ್ವಹಣೆ ಮತ್ತು ಶುಚಿತ್ವಕ್ಕಾಗಿ ಸಾಕಷ್ಟು ಹಣ ಒದಗಿಸಬೇಕಿದ್ದು ಹೈಕೋರ್ಟ್‌ ರಚಿಸಿರುವ ಸಮಿತಿಯೊಂದಿಗೆ ಸಮಾಲೋಚಿಸಿ ಕಾಲಾನುಕಾಲಕ್ಕೆ ಪರಿಶೀಲಿಸಬೇಕಾಗುತ್ತದೆ.

ಮಹಿಳೆಯರು, ಅಂಗವಿಕಲರು ಹಾಗೂ ತೃತೀಯ ಲಿಂಗಿ ವ್ಯಕ್ತಿಗಳ ಶೌಚಾಲಯಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುವಂತಹ ಸ್ಯಾನಿಟರಿ ಪ್ಯಾಡ್‌ ಯಂತ್ರಗಳನ್ನು ಅಳವಡಿಸಬೇಕು.

ತನ್ನ ಆದೇಶ ಕುರಿತಂತೆ ಎಲ್ಲಾ ಹೈಕೋರ್ಟ್‌ಗಳು,  ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶ ಸರ್ಕಾರಗಳು ನಾಲ್ಕು ತಿಂಗಳ ಅವಧಿಯೊಳಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

Kannada Bar & Bench
kannada.barandbench.com