ಕೊಲೆ ಯತ್ನ ಪ್ರಕರಣದಲ್ಲಿ ತನ್ನನ್ನು ದೋಷಿ ಎಂದು ತೀರ್ಮಾನಿಸಿ ವಿಧಿಸಲಾಗಿದ್ದ ಶಿಕ್ಷೆ ಅಮಾನತುಗೊಳಿಸಲು ಕೋರಿ ಲಕ್ಷದ್ವೀಪ ಸಂಸದ ಪಿ ಪಿ ಮೊಹಮ್ಮದ್ ಫೈಜಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಆರು ವಾರಗಳಲ್ಲಿ ಹೊಸದಾಗಿ ಆಲಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಕೇರಳ ಹೈಕೋರ್ಟ್‌ಗೆ ನಿರ್ದೇಶಿಸಿದೆ [ಲಕ್ಷದ್ವೀಪದ ಕೇಂದ್ರಾಡಳಿತ ಪ್ರದೇಶ ಸರ್ಕಾರ ಮತ್ತು ಮೊಹಮ್ಮದ್ ಫೈಜಲ್ ಇನ್ನಿತರರ ನಡುವಣ ಪ್ರಕರಣ].
ಶಿಕ್ಷೆ ಅಮಾನತು ಆದೇಶವನ್ನು ʼಸೂಕ್ತ ದೃಷ್ಟಿಕೋನದಿಂದʼ ಇತ್ಯರ್ಥಪಡಿಸಿಲ್ಲ ಎಂದು ನ್ಯಾಯಾಧೀಶರಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿತು.
ಅದರಲ್ಲಿಯೂ ಸಂಸದರಿಗೆ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡದೇ ಹೋದರೆ ಹೊಸದಾಗಿ ಉಪ ಚುನಾವಣೆಗೆ ಭಾರೀ ವೆಚ್ಚ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಶಿಕ್ಷೆ ಅಮಾನತುಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಒಪ್ಪಲಿಲ್ಲ. ಹೀಗಾಗಿ ಹೈಕೋರ್ಟ್ ತೀರ್ಪನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್ ಪ್ರಕರಣವನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಸೂಚಿಸಿತು.
ಆದರೆ ಇದೇ ವೇಳೆ, ಫೈಜಲ್ ಲೋಕಸಭೆಯ ಸಂಸದರಾಗಿ ಮುಂದುವರಿಯಬೇಕು ಇಲ್ಲವಾದಲ್ಲಿ ಮತದಾರರ ದೃಷ್ಟಿಯಿಂದ ʼನಿರ್ವಾತʼ ಸೃಷ್ಟಿಯಾಗಲಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೀಗಾಗಿ ಅಪರಾಧ ಮತ್ತು ಶಿಕ್ಷೆಯ ಅಮಾನತು ಮುಂದುವರಿಯಲಿದೆ.
"ಮೊದಲ ಪ್ರತಿವಾದಿ ಸಂಸತ್ ಸದಸ್ಯರಾಗಿದ್ದು ಅವರಿಗೆ ಶಿಕ್ಷೆ ವಿಧಿಸುವುದರಿಂದ ಲಕ್ಷದ್ವೀಪಕ್ಕೆ ಹೊಸ ಚುನಾವಣೆ ನಡೆಸಬೇಕಾಗುತ್ತದೆ. ಇದು ಅಗಾಧ ವೆಚ್ಚಕ್ಕೆ ಕಾರಣವಾಗುತ್ತದೆ ಎಂಬ ಒಂದು ಅಂಶವನ್ನು ಮಾತ್ರ ಹೈಕೋರ್ಟ್ ಪರಿಗಣಿಸಿದೆ ಇದೊಂದೇ ಪರಿಗಣಿಸಬೇಕಾದ ಅಂಶವಾಗಿರಲಿಲ್ಲ. ಕಾನೂನಿಗೆ ಅನುಗುಣವಾಗಿ ಸೂಕ್ತ ದೃಷ್ಟಿಯಿಂದ ಅರ್ಜಿಯನ್ನು ಪರಿಗಣಿಸಬೇಕಿತ್ತು. ಹೀಗಾಗಿ ನಾವು ತೀರ್ಪನ್ನು ಒಪ್ಪದೆ ರದ್ದುಗೊಳಿಸುತ್ತಿದ್ದು ಪ್ರಕರಣವನ್ನು ಮರುಪರಿಶೀಲಿಸಲು ಸೂಚಿಸುತ್ತಿದ್ದೇವೆ” ಎಂದು ನ್ಯಾಯಾಲಯ ನುಡಿದಿದೆ.
ಫೈಜಲ್ ಅವರು ದೋಷಿ ಎಂದು ಪ್ರಕಟಿಸಿ ವಿಧಿಸಿದ್ದ ಶಿಕ್ಷೆಯನ್ನು ಅಮಾನತುಗೊಳಿಸುವಂತೆ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಕೇಂದ್ರಾಡಳಿತ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.