'ಬಂಧನಕ್ಕೆ ಆಧಾರ ಒದಗಿಸದಿದ್ದಲ್ಲಿ ಆ ಬಂಧನ ಅಸಿಂಧುವೇ?' ಇತ್ಯರ್ಥಪಡಿಸಲಿದೆ ಸುಪ್ರೀಂ ಕೋರ್ಟ್

ಮುಂಬೈನ ವರ್ಲಿಯಲ್ಲಿ ನಡೆದಿದ್ದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ತನ್ನನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಶಿವಸೇನೆಯ ಏಕನಾಥ್ ಶಿಂಧೆ ಬಣದ ಮುಖಂಡರೊಬ್ಬರ ಪುತ್ರ ಮಿಹಿರ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಪೀಠ ಈ ವಿಚಾರ ತಿಳಿಸಿತು.
Supreme Court of India
Supreme Court of India
Published on

ಬಂಧನಕ್ಕೆ ಆಧಾರ ಒದಗಿಸದಿದ್ದಲ್ಲಿ ಯಾವುದೇ ಪ್ರಕರಣಗಳಲ್ಲಿಯಾದರೂ ಆ ಬಂಧನ ಅಸಿಂಧುವಾಗಲಿದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಯನ್ನು ಇತ್ಯರ್ಥಪಡಿಸುವ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಸುಳಿವು ನೀಡಿದೆ.

ಮುಂಬೈನ ವರ್ಲಿಯಲ್ಲಿ ಕಳೆದ ಜುಲೈನಲ್ಲಿ ಶಿವಸೇನೆಯ ಏಕನಾಥ್ ಶಿಂಧೆ ಬಣದ ನಾಯಕ ರಾಜೇಶ್​ ಶಾ ಅವರ ಪುತ್ರ ಮಿಹಿರ್‌ ಚಲಾಯಿಸುತ್ತಿದ್ದ ಎನ್ನಲಾದ ಬಿಎಂಡಬ್ಲ್ಯೂ ಕಾರು ಅತಿವೇಗವಾಗಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 45 ವರ್ಷದ ಮಹಿಳೆಯೊಬ್ಬರು ಮೃತಪಟ್ಟು ಆಕೆಯ ಪತಿ ಗಾಯಗೊಂಡ ಘಟನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್  ಅವರಿದ್ದ ಪೀಠ ಈ ವಿಚಾರ ತಿಳಿಸಿದೆ.

Also Read
ಬಂಧನಕ್ಕೆ ಆಧಾರ ಏನೆಂಬುದನ್ನು ಬಂಧಿತ ವ್ಯಕ್ತಿಯ ಪತ್ನಿಗೆ ತಿಳಿಸಿದರಷ್ಟೇ ಸಾಲದು, ವಾರೆಂಟ್ ಅಗತ್ಯ: ಬಾಂಬೆ ಹೈಕೋರ್ಟ್

ತಮ್ಮ ಬಂಧನಕ್ಕೆ ಆಧಾರ ಒದಗಿಸಿಲ್ಲ ಎಂದು ಮಿಹಿರ್‌ ವಾದಿಸಿದ್ದರೂ ಬಾಂಬೆ ಹೈಕೋರ್ಟ್‌ ಅವರ ಬಂಧನ ರದ್ದತಿಗೆ ನಿರಾಕರಿಸಿತ್ತು.

ಷಾ ಅವರು ಅಪರಾಧ ನಡೆದ ಸ್ಥಳದಿಂದ ಪಲಾಯನ ಮಾಡಿರುವುದರಿಂದ ಮತ್ತು ಕಾರಿನ ನಂಬರ್‌ ಪ್ಲೇಟ್‌ ಸಾಕ್ಷ್ಯ ಮರೆಮಾಚಲು ಯತ್ನಿಸಿದ್ದರಿಂದ ಮಿಹಿರ್‌ ಅವರಿಗೆ ತಮ್ಮನ್ನು ಏಕೆ ಬಂಧಿಸಲಾಗಿದೆ ಎಂಬುದು ಚೆನ್ನಾಗಿಯೇ ತಿಳಿದಿತ್ತು. ಆದ್ದರಿಂದ ಬಂಧನಕ್ಕೆ ಆಧಾರ ಏನೆಂಬುದನ್ನು ಲಿಖಿತವಾಗಿ ನೀಡದಿರುವುದು ಬಂಧನವನ್ನು ಅಮಾನ್ಯಗೊಳಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪುಗಳನ್ನು ಈ ಪ್ರಕರಣಕ್ಕೂ ಅನ್ವಯಿಸುವುದು ಸೂಕ್ತವಲ್ಲ  ಎಂದು ಹೈಕೋರ್ಟ್‌ ವಿವರಿಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಜಾರಿ ನಿರ್ದೇಶನಾಲಯ ಬಂಧನದ ಲಿಖಿತ ಕಾರಣ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ಪಂಕಜ್‌ ಬನ್ಸಾಲ್‌ ಪ್ರಕರಣದಲ್ಲಿ ತೀರ್ಪಿತ್ತಿತ್ತು. ಪ್ರಬೀರ್‌ ಪುರಕಾಯಸ್ಥ ಅವರಿಗೆ ಸಂಬಂಧಿಸಿದಂತೆ ಯುಎಪಿಎ ಅಡಿ ದಾಕಲಾದ ಮತ್ತೊಂದು ಪ್ರಕರಣದಲ್ಲಿಯೂ ಸುಪ್ರೀಂ ಕೋರ್ಟ್‌ ಇದೇ ಬಗೆಯ ಆದೇಶ ನೀಡಿತ್ತು.

ಇತ್ತ ಮಿಹಿರ್ ಶಾ ಅವರ ಅರ್ಜಿಯನ್ನು ಬಾಂಬೆ ಹೈಕೋರ್ಟ್ ವಜಾಗೊಳಿಸಿದ ವಿಚಾರದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಗವಾಯಿ ಮತ್ತು ನರಸಿಂಹ ಅವರಿದ್ದ ಪೀಠ ಹೈಕೋರ್ಟ್‌ನ ತೀರ್ಪುಗಳಲ್ಲಿ ಹಸ್ತಕ್ಷೇಪ ಮಾಡಲು ಸಕಾರಣ ಇಲ್ಲ ಎಂದು ಅಭಿಪ್ರಾಯಪಟ್ಟಿದೆ.

ಆದರೂ, ಈ ವಿಚಾರದಲ್ಲಿ ಅದರಲ್ಲಿಯೂ ಸಂವಿಧಾನದ 22 (1) ನೇ ವಿಧಿಯ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಗಮನಾರ್ಹವಾದ ಸಾಂವಿಧಾನಿಕ ಪ್ರಶ್ನೆಗಳಿವೆ ಎಂಬುದನ್ನು ನ್ಯಾಯಾಲಯವು ಗುರುತಿಸಿದೆ.

Also Read
ನೇಮಕಾತಿಯಲ್ಲಿ ಅಕ್ರಮ: ಮಾಜಿ ಸಚಿವ ನಿರಾಣಿ ವಿರುದ್ಧದ ತನಿಖೆಗೆ ಅಸ್ತು; ಬಂಧನಕ್ಕೆ ನಿರ್ಬಂಧ ವಿಧಿಸಿದ ಹೈಕೋರ್ಟ್‌

ಸಂವಿಧಾನದ 22 (1)ನೇ ವಿಧಿಯ ಪ್ರಕಾರ ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಗೆ ಆತನ ಬಂಧನಕ್ಕೆ ಕಾರಣ ಏನೆಂದು ಕೂಡಲೇ ತಿಳಿಸದೆ ಬಂಧನದಲ್ಲಿ ಇರಿಸುವಂತಿಲ್ಲ. ಮತ್ತು ಆತ ವಕೀಲರೊಂದಿಗೆ ಸಮಾಲೋಚಿಸುವ ಮತ್ತು ತನ್ನನ್ನು ಪ್ರತಿಪಾದಿಸಿಕೊಳ್ಳುವ ಹಕ್ಕಿನಿಂದ ವಿಮುಖನನ್ನಾಗಿ ಮಾಡುವಂತಿಲ್ಲ.

ಈ ಹಿನ್ನೆಲೆಯಲ್ಲಿ ಕಾನೂನು ಪ್ರಶ್ನೆ ಇತ್ಯರ್ಥಪಡಿಸುವ ಸಂಬಂಧ ಪ್ರಕರಣದಲ್ಲಿ ನೋಟಿಸ್‌ ನೀಡಲು ಮುಂದಾಯಿತು. ಮಿಹಿರ್ ಅವರನ್ನು ಹಿರಿಯ ವಕೀಲೆ ರೆಬೆಕಾ ಜಾನ್ ಮತ್ತು ವಕೀಲರಾದ ಜಯ್ ಕುಮಾರ್ ಭಾರದ್ವಾಜ್, ಪ್ರಿಯಾ ದರ್ಶಿನಿ ಅರೋರಾ, ಸಿದ್ಧಾರ್ಥ್ ಶರ್ಮಾ, ದಿಶಾ ಬಜಾಜ್, ರಿಷಿ ಬೂಟ ಹಾಗೂ ಇಶಿಕಾ ಚೌಹಾನ್ ಪ್ರತಿನಿಧಿಸಿದ್ದರು.

Kannada Bar & Bench
kannada.barandbench.com