ಪತ್ರಕರ್ತ ಸಿದ್ದಿಕಿ ಕಪ್ಪನ್‌ ಬಿಡುಗಡೆಗೆ ಮನವಿ: ಉತ್ತರ ಪ್ರದೇಶದ ಪ್ರತಿಕ್ರಿಯೆ ಬಯಸಿದ ಸುಪ್ರೀಂ ಕೋರ್ಟ್

ಹೈಕೋರ್ಟ್‌ನಲ್ಲಿ ಪ್ರಕರಣ ಇನ್ನೂ ಆರಂಭವಾಗಿಲ್ಲ. ಇದರ ಜೊತೆಗೆ ಕಪ್ಪನ್‌ ಅವರಿಗೆ ಅವರ ವಕೀಲರನ್ನು ಭೇಟಿ ಮಾಡುವ ಅವಕಾಶವನ್ನೂ ನಿರಾಕರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಕೆಯುಡಬ್ಲುಜೆಯು ವಿವರಿಸಿದೆ.
ಪತ್ರಕರ್ತ ಸಿದ್ದಿಕಿ ಕಪ್ಪನ್‌ ಬಿಡುಗಡೆಗೆ ಮನವಿ: ಉತ್ತರ ಪ್ರದೇಶದ ಪ್ರತಿಕ್ರಿಯೆ ಬಯಸಿದ ಸುಪ್ರೀಂ ಕೋರ್ಟ್

ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಅಡಿ ಬಂಧಿತರಾಗಿರುವ ಕೇರಳದ ಪತ್ರಕರ್ತ ಸಿದ್ದಿಕಿ ಕಪ್ಪನ್‌ ಅವರ ಬಿಡುಗಡೆಗೆ ಕೋರಿ ಸಲ್ಲಿಸಲಾಗಿರುವ ಮನವಿಗೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂ ಕೋರ್ಟ್‌ ಉತ್ತರ ಪ್ರದೇಶ ಸರ್ಕಾರ ಮತ್ತು ಅಲ್ಲಿನ ಪೊಲೀಸರ ಪ್ರತಿಕ್ರಿಯೆ ಬಯಸಿದೆ.

ಕೇರಳ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲುಜೆ) ಸಲ್ಲಿಸಿರುವ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನೇತೃತ್ವದ ಪೀಠವು ಶುಕ್ರವಾರಕ್ಕೆ ಮುಂದೂಡಿದೆ. ಕಪ್ಪನ್‌ ಬಂಧನವನ್ನು ಪ್ರಶ್ನಿಸಿರುವ ಕೆಯುಡಬ್ಲುಜೆಯು ಇದು ಸಂವಿಧಾನದಡಿ ದೊರೆತಿರುವ 14, 19 ಮತ್ತು 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರನ್ನೊಳಗೊಂಡ ಪೀಠವು ಅಕ್ಟೋಬರ್‌ 12ರಂದು ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಮುಂದೂಡಿದ್ದಲ್ಲದೇ ಅಲಾಹಾಬಾದ್‌ ಹೈಕೋರ್ಟ್‌ ಸಂಪರ್ಕಿಸುವಂತೆ ಅರ್ಜಿದಾರರಿಗೆ ಸೂಚಿಸಿತ್ತು. ಇದರ ಜೊತೆಗೆ ಮನವಿಯಲ್ಲಿ ತಿದ್ದುಪಡಿ ಮಾಡಿ ಸಲ್ಲಿಸುವಂತೆಯೂ ಮನವಿದಾರರಿಗೆ ಸೂಚಿಸಿತ್ತು.

ಹೈಕೋರ್ಟ್‌ನಲ್ಲಿ ಪ್ರಕರಣ ಇನ್ನೂ ಆರಂಭವಾಗಿಲ್ಲ. ಇದರ ಜೊತೆಗೆ ಕಪ್ಪನ್‌ ಅವರಿಗೆ ಅವರ ವಕೀಲರನ್ನು ಭೇಟಿ ಮಾಡುವ ಅವಕಾಶವನ್ನೂ ನಿರಾಕರಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಕೆಯುಡಬ್ಲುಜೆಯು ವಿವರಿಸಿದೆ.

“ನೀವು ಹೈಕೋರ್ಟ್‌ ಅನ್ನು ಏಕೆ ಸಂಪರ್ಕಿಸಿಲ್ಲ” ಎಂದು ಅರ್ಜಿದಾರ ಸಂಘಟನೆಯ ಪರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರನ್ನು ಸಿಜೆಐ ಬೊಬ್ಡೆ ಪ್ರಶ್ನಿಸಿದರು.

“ಪ್ರಕರಣದ ಅರ್ಹತೆಗೆ ಸಂಬಂಧಿಸಿದಂತೆ ನಾವು ಮಾತನಾಡುತ್ತಿಲ್ಲ. ಕಪ್ಪನ್‌ ಅವರನ್ನು ಭೇಟಿ ಮಾಡಿ ಅರ್ಥಮಾಡಿಕೊಳ್ಳಬೇಕಿದೆ” ಎಂದು ಕಪ್ಪನ್‌ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗುತ್ತಿಲ್ಲ ಎಂದು ಸಿಬಲ್‌ ವಾದಿಸಿದರು. “ಪತ್ರಕರ್ತರೊಬ್ಬರು ನಿರಂತರವಾಗಿ ಜೈಲಿನಲ್ಲಿರುವ ಪ್ರಕರಣ ಇದಾಗಿದೆ. ಇವುಗಳು ವಿಶೇಷ ಸಂದರ್ಭಗಳಾಗಿವೆ” ಎಂದು ಸಿಬಲ್‌ ಹೇಳಿದರು.

“ಬಂಧಿತರನ್ನು ನಾವು ಭೇಟಿ ಮಾಡಲಾಗಿಲ್ಲ. ಹೀಗಿರುವಾಗ ಅರ್ಜಿಯನ್ನು ತಿದ್ದುಪಡಿ ಮಾಡುವುದು ಹೇಗೆ? ಎಂದು ಸಿಜೆಐ ಬೊಬ್ಡೆ ಅವರನ್ನು ಸಿಬಲ್‌ ಪ್ರಶ್ನಿಸಿದರು.

“ನಾವು ನೋಟಿಸ್‌ ಜಾರಿಗೊಳಿಸುತ್ತಿದ್ದೇವೆ. ಶುಕ್ರವಾರಕ್ಕೆ ಪ್ರಕರಣ ನಿಗದಿಯಾಗಲಿ. ಉತ್ತರ ಪ್ರದೇಶ ಸರ್ಕಾರ ಹಾಜರಾಗಲಿ” ಎಂದು ನ್ಯಾಯಾಲಯ ಆದೇಶಿಸಿತು.

ಹಾಥ್‌ರಸ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಸಾವನ್ನಪ್ಪಿದ ಯುವತಿಯ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ www.azhimukham.comನ ಪತ್ರಕರ್ತ ಕಪ್ಪನ್‌ ಅವರನ್ನು ಟೋಲ್‌ ಪ್ಲಾಜಾದಲ್ಲಿ ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದರು. ಶ್ವೇತಾ ಗರ್ಗ್‌ ಅವರು ಕೆಯುಡಬ್ಲುಜೆಯನ್ನು ಪ್ರತಿನಿಧಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com