ಟಿಎಂಸಿ ವಿರುದ್ಧದ ಜಾಹೀರಾತು ಅವಹೇಳನಕಾರಿ: ಬಿಜೆಪಿಗೆ ಸುಪ್ರೀಂ ಛೀಮಾರಿ

ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಜಾಹೀರಾತು ಪ್ರಕಟಿಸದಂತೆ ನಿರ್ಬಂಧ ವಿಧಿಸಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಜೆಪಿ ಕಳೆದ ಗುರುವಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
Supreme Court, BJP and TMC
Supreme Court, BJP and TMC

ಲೋಕಸಭೆ ಚುನಾವಣಾ ಪ್ರಚಾರದ ವೇಳೆ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಗುರಿಯಾಗಿಸಿಕೊಂಡು ʼಅವಹೇಳನಕಾರಿʼ ಇಲ್ಲವೇ ʼನಿಂದನಾತ್ಮಕʼ ಜಾಹೀರಾತು ಪ್ರಕಟಿಸದಂತೆ ತನಗೆ ನಿರ್ಬಂಧ ವಿಧಿಸಿ ಕಲ್ಕತ್ತಾ ಹೈಕೋರ್ಟ್‌ ನೀಡಿದ್ದ ಆದೇಶದ ವಿರುದ್ದ ಬಿಜೆಪಿ ಸಲ್ಲಿಸಿದ್ದ ಅರ್ಜಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ  [ಭಾರತೀಯ ಜನತಾ ಪಕ್ಷ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ನಡುವಣ ಪ್ರಕರಣ].

ಬಿಜೆಪಿ ಪ್ರಕಟಿಸಿರುವ ಜಾಹೀರಾತುಗಳು ಮೇಲ್ನೋಟಕ್ಕೆ ಅವಹೇಳನಕಾರಿಯಾಗಿವೆ ಎಂದು ನ್ಯಾಯಮೂರ್ತಿ ಜೆ ಕೆ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಅವರಿದ್ದ ರಜಾಕಾಲೀನ ಪೀಠ ಹೇಳಿದೆ.

ಮೇಲ್ನೋಟಕ್ಕೆ ಜಾಹೀರಾತು ಅವಹೇಳನಕಾರಿಯಾಗಿವೆ. ನಾವು ಇನ್ನೂ ಹೆಚ್ಚಿನ ಕಹಿಯನ್ನು ಉತ್ತೇಜಿಸಲಾಗದು. ನೀವು ನಿಮ್ಮ ಬಗ್ಗೆ ಬೇಕಾದರೆ ಪ್ರಚಾರ ಮಾಡಿಕೊಳ್ಳಿ ಎಂದು ನ್ಯಾಯಾಲಯ ಹೇಳಿತು.

ಅಂತಹ ಜಾಹೀರಾತು ಬಿಜೆಪಿಗೆ ಅನುಕೂಲಕರವೇ ವಿನಾ ಮತದಾರರಿಗೆ ಅಲ್ಲ  ಎಂದು ಅದು ಹೇಳಿತು.

ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಮಧ್ಯಂತರ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಹೈಕೋರ್ಟ್‌ನ ವಿಭಾಗೀಯ ಪೀಠ ಈ ಹಿಂದೆ ನಿರಾಕರಿಸಿತ್ತು. ಜೊತೆಗೆ ತಪ್ಪುದಾರಿಗೆಳೆಯುವ ಚುನಾವಣಾ ಪ್ರಚಾರಗಳಿಗೆ ಮತದಾರರೇ ಅಂತಿಮ ಬಲಿಪಶುಗಳಾಗುವುದರಿಂದಎಲ್ಲಾ ರಾಜಕೀಯ ಪಕ್ಷಗಳು ಆರೋಗ್ಯಕರ ಚುನಾವಣಾ ಅಭ್ಯಾಸ ರೂಢಿಸಿಕೊಳ್ಳುವುದು ಅತ್ಯಗತ್ಯ ಎಂದು ಆಗ ಅದು ಒತ್ತಿಹೇಳಿತ್ತು.

ಇಂದಿನ ವಿಚಾರಣೆ ವೇಳೆ ಬಿಜೆಪಿ ಪರ ವಕಾಲತ್ತು ವಹಿಸಿದ್ದ ಹಿರಿಯ ನ್ಯಾಯವಾದಿ ಪಿಎಸ್ ಪಟ್ವಾಲಿಯಾ ಅವರು ಜಾಹೀರಾತುಗಳು ವಾಸ್ತವಾಂಶಗಳನ್ನು ಆಧರಿಸಿವೆ ಮತ್ತು ಏಕಸದಸ್ಯ ನ್ಯಾಯಾಧೀಶರು ಬಿಜೆಪಿಯ ವಾದ ಆಲಿಸಿಲ್ಲ ಎಂದರು.

ಆದರೆ, ಜಾಹೀರಾತುಗಳನ್ನು ಗಮನಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಒಲವು ಹೊಂದಿಲ್ಲ ಎಂದಿತು.

“ನೀವು ಇಲ್ಲಿ ಸಮಸ್ಯೆಗಳನ್ನು ದೊಡ್ಡದಾಗಿ ಮಾಡುತ್ತಿದ್ದೀರಿ. ನಾವು ಮಧ್ಯಪ್ರವೇಶಿಸಲು ಬಯಸುವುದಿಲ್ಲ” ಎಂದು ಪೀಠ ನುಡಿಯಿತು. ಮನವಿ ವಜಾಗೊಳಿಸಲು ನ್ಯಾಯಾಲಯ ಮುಂದಾದಾಗ ಪಟ್ವಾಲಿಯಾ ಅವರು ಪ್ರಕರಣ ಹಿಂಪಡೆದರು. ಇದಕ್ಕೆ ಅನುಮತಿಸಿದ ನ್ಯಾಯಾಲಯ ಹೈಕೋರ್ಟ್‌ ಏಕಸದಸ್ಯ ಪೀಠದಲ್ಲಿ ಪ್ರಕರಣ ಕುರಿತು ಪ್ರಶ್ನಿಸಬಹುದು ಎಂದಿತು.

ವಿಚಾರಣೆಯ ಕೊನೆಯಲ್ಲಿ, ನ್ಯಾಯಮೂರ್ತಿ ವಿಶ್ವನಾಥನ್ ಅವರು ಬಿಜೆಪಿ ವಕೀಲರನ್ನು ಉದ್ದೇಶಿಸಿ ಮಾತನಾಡುತ್ತಾ, "ನಿಮ್ಮ ಪ್ರತಿಸ್ಪರ್ಧಿ ನಿಮ್ಮ ಶತ್ರು ಅಲ್ಲ!" ಎಂದರು.

ಟಿಎಂಸಿ ಪರ ಹಿರಿಯ ವಕೀಲರಾದ ಡಾ. ಅಭಿಷೇಕ್ ಮನು ಸಿಂಘ್ವಿ ಮತ್ತು ಅಮಿತ್ ಆನಂದ್ ತಿವಾರಿ ವಾದ ಮಂಡಿಸಿದರು.

Kannada Bar & Bench
kannada.barandbench.com