
ಮಕ್ಕಳ ಕಳ್ಳಸಾಗಣೆ ತಡೆಗಟ್ಟಲು ಮತ್ತು ಮಕ್ಕಳ ಕಳ್ಳಸಾಗಣೆ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ನಿಭಾಯಿಸಲು ರಾಜ್ಯ ಸರ್ಕಾರಗಳು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ನಿಗದಿಪಡಿಸಿದೆ.
ಮಕ್ಕಳ ಕಳ್ಳಸಾಗಣೆ ಪ್ರಕರಣಗಳ ವಿಚಾರಣೆಯನ್ನು ನಿತ್ಯದಂತೆ ಆರು ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕೆಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು ಎಂದು ದೇಶದ ಎಲ್ಲಾ ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ಸೂಚಿಸಿದೆ.
ನಿರ್ದೇಶನಗಳನ್ನು ಜಾರಿಗೊಳಿಸುವಲ್ಲಿ ಯಾವುದೇ ನಿರ್ಲಕ್ಷ್ಯ ತೋರಿದರೆ ಅದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಮತ್ತು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಪೀಠ ಎಚ್ಚರಿಕೆ ನೀಡಿದೆ.
ಮುಖ್ಯವಾಗಿ, ನವಜಾತ ಶಿಶುವನ್ನು ಆಸ್ಪತ್ರೆಯಿಂದ ಕದ್ದರೆ, ತೆಗೆದುಕೊಳ್ಳಬೇಕಾದ ಮೊದಲ ಕ್ರಮ ಎಂದರೆ ಸಂಬಂಧಪಟ್ಟ ಆಸ್ಪತ್ರೆಯ ಪರವಾನಗಿ ರದ್ದುಗೊಳಿಸುವುದು ಎಂದು ನ್ಯಾಯಾಲಯ ಹೇಳಿದೆ.
ಗಂಡು ಮಗುವನ್ನು ಬಯಸುವ ದಂಪತಿಗೆ ಮಕ್ಕಳನ್ನು ಕದ್ದು ಸಾಗಿಸುತ್ತಿದ್ದ ಉತ್ತರ ಪ್ರದೇಶದ ಆರೋಪಿಗಳು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಪೀಠ ಈ ವಿಚಾರ ತಿಳಿಸಿದೆ.
ಪ್ರಕರಣ ನಿಭಾಯಿಸಿದ ರೀತಿಗೆ ಅಲಹಾಬಾದ್ ಹೈಕೋರ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರ ಎರಡನ್ನೂ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಜಾಮೀನು ಅರ್ಜಿಗಳನ್ನು ಹೈಕೋರ್ಟ್ ಸಲೀಸಾಗಿ ಪರಿಗಣಿಸಿದ್ದರಿಂದ ಅನೇಕ ಆರೋಪಿಗಳು ಪರಾರಿಯಾಗಲು ಕಾರಣವಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ ಅದು ಉತ್ತರ ಪ್ರದೇಶ ಸರ್ಕಾರ ಪ್ರಕರಣವನ್ನು ನಿಭಾಯಿಸಿದ ರೀತಿ ತೀವ್ರ ನಿರಾಶೆ ತಂದಿದೆ ಎಂಬುದಾಗಿ ತರಾಟೆಗೆ ತೆಗೆದುಕೊಂಡಿತು. ರಾಜ್ಯ ಸರ್ಕಾರ ಏಕೆ ಮೇಲ್ಮನವಿ ಸಲ್ಲಿಸಲಿಲ್ಲ ಎಂದು ಪ್ರಶ್ನಿಸಿದ ಅದು ಹೆಸರಿಗೆ ಮಾತ್ರವೂ ಗಂಭೀರತೆಯನ್ನು ಅದು ತೋರಲಿಲ್ಲ ಎಂದಿತು.
ಮಗುವನ್ನು ಖರೀದಿಸಿದ್ದ ಆರೋಪಿಯ ಬಗ್ಗೆಯೂ ಕಿಡಿಗಣ್ಣಾದ ನ್ಯಾಯಾಲಯ ಮಗು ಬೇಕೆಂದರೆ ಅದನ್ನು ಕದ್ದು ಪಡೆಯುವಂತಿಲ್ಲ ಎಂದಿತು. ಆದ್ದರಿಂದ, ನ್ಯಾಯಾಲಯ ಆರೋಪಿಗಳಿಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಿತು.
ದ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯು ಮಕ್ಕಳ ಕಳ್ಳಸಾಗಣೆ ಕುರಿತು ಪ್ರಕಟಿಸಿದ್ದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಮಕ್ಕಳ ಕಳ್ಳಸಾಗಣೆಯಲ್ಲಿ ತೊಡಗಿರುವ ಗ್ಯಾಂಗ್‌ಗಳನ್ನು ಹತ್ತಿಕ್ಕಲು ತೆಗೆದುಕೊಂಡ ಕ್ರಮಗಳ ಕುರಿತು ವರದಿಯನ್ನು ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿತು. ಏಪ್ರಿಲ್ 21ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.