ಬಿಎನ್ಎಸ್ ಸೆಕ್ಷನ್ 149, ಸಂವಿಧಾನದ ನಿಬಂಧನೆ ಪ್ರಶ್ನಿಸಿದ್ದ ಪಿಐಎಲ್: ಅರ್ಜಿದಾರನಿಗೆ ಸುಪ್ರೀಂ ದಂಡ

ಒಂದು ವಾರದೊಳಗೆ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಗೆ ದಂಡದ ಮೊತ್ತ ಠೇವಣಿ ಮಾಡುವಂತೆ ಅರ್ಜಿದಾರರಿಗೆ ಪೀಠ ಸೂಚಿಸಿದೆ.
Bharatiya Nyaya Sanhita, 2023 , Constitution of India and Supreme Court
Bharatiya Nyaya Sanhita, 2023 , Constitution of India and Supreme Court
Published on

ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್‌) ಸೆಕ್ಷನ್ 149 ಮತ್ತು ಸಂವಿಧಾನದ ವಿವಿಧ ನಿಬಂಧನೆಗಳ ಸಿಂಧುತ್ವ  ಪ್ರಶ್ನಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ [ ಡಾ. ಎಸ್ಎನ್ ಕುಂದ್ರಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ] .

ವಾದ ಮಂಡಿಸಲು ಖುದ್ದು ಹಾಜರಿದ್ದ ಅರ್ಜಿದಾರ ಡಾ. ಎಸ್‌ ಎನ್‌ ಕುಂದ್ರಾ ಅವರಿಗೆ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಎಸ್‌ವಿಎನ್‌ ಭಟ್ಟಿ ಅವರಿದ್ದ ವಿಭಾಗೀಯ ಪೀಠ ₹ 10,000 ದಂಡ ವಿಧಿಸಿದೆ.

Also Read
ಭಾರತೀಯ ನ್ಯಾಯ ಸಂಹಿತೆಯಡಿ ಮೊದಲ ಮಧ್ಯಂತರ ಜಾಮೀನು ನೀಡಿದ ಹಿಮಾಚಲ ಪ್ರದೇಶ ಹೈಕೋರ್ಟ್

ರಿಟ್‌ ಅರ್ಜಿಯ ನ್ಯೂನತೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಹೀಗಾಗಿ ಅದನ್ನು ವಜಾ ಮಾಡುತ್ತಿರುವುದಾಗಿ ಆಗಸ್ಟ್ 9ರಂದು ನೀಡಿದ ಆದೇಶದಲ್ಲಿ ತಿಳಿಸಿದೆ. 

ಸಶಸ್ತ್ರ ಪಡೆಗಳ ಪ್ರಮಾಣವಚನವನ್ನು ಮತ್ತು ಸಂವಿಧಾನದ ಕೆಳಗಿನ ನಿಯಮಾವಳಿಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು:

• ವಿಧಿ 52 (ಭಾರತದ ರಾಷ್ಟ್ರಪತಿ);

• ಅನುಚ್ಛೇದ 53 (ಕೇಂದ್ರ ಸರ್ಕಾರದ ಕಾರ್ಯನಿರ್ವಹಣಾಧಿಕಾರ);

• ವಿಧಿ 75(4) (ಸಚಿವರಿಗೆ ರಾಷ್ಟ್ರಪತಿಗಳ ಪ್ರಮಾಣ ವಚನ ಬೋಧೆ);

• ವಿಧಿ 77 (ಭಾರತ ಸರ್ಕಾರದ ಆಡಳಿತ ನಡೆ);

• ವಿಧಿ 102(2) (ಪಕ್ಷಾಂತರಕ್ಕಾಗಿ ಸಂಸದರ ಅನರ್ಹತೆ);

•  ವಿಧಿ 164(3) (ರಾಜ್ಯ ಸಚಿವರಿಗೆ ರಾಜ್ಯಪಾಲರ ಪ್ರಮಾಣ ವಚನ ಬೋಧೆ);

•  ಅನುಚ್ಛೇದ 191(2) (ಪಕ್ಷಾಂತರಕ್ಕಾಗಿ ವಿಧಾನಸಭಾ ಸದಸ್ಯರ ಅನರ್ಹತೆ);

•  ಅನುಚ್ಛೇದ 246 (ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ಮಾಡಿದ ಕಾನೂನು ವಿಷಯ);

• ವಿಧಿ 361 (ರಾಷ್ಟ್ರಪತಿ ಮತ್ತು ರಾಜ್ಯಪಾಲರು ಮತ್ತು ರಾಜಪ್ರಮುಖರ ರಕ್ಷಣೆ);

• ವಿಧಿ 368 (ಸಂವಿಧಾನ ಮತ್ತು ಕಾರ್ಯವಿಧಾನವನ್ನು ತಿದ್ದುಪಡಿ ಮಾಡಲು ಸಂಸತ್ತಿಗೆ ಇರುವ ಅಧಿಕಾರ).

ಭಾರತ ಸರ್ಕಾರದ ವಿರುದ್ಧ ಸಮರ ಸಾರುವ ಉದ್ದೇಶದಿಂದ ಶಸ್ತ್ರಾಸ್ತ್ರ ಅಥವಾ ಮದ್ದುಗುಂಡುಗಳನ್ನು ಸಂಗ್ರಹಕ್ಕೆ ಸಂಬಂಧಿಸಿದ ಶಿಕ್ಷೆ ವಿಧಿಸುವ ಬಿಎನ್‌ಎಸ್‌ ಸೆಕ್ಷನ್ 149 ಅನ್ನು ಕೂಡ ಪ್ರಶ್ನಿಸಿದ್ದರು.

ಒಂದು ವಾರದೊಳಗೆ ಸುಪ್ರೀಂ ಕೋರ್ಟ್ ಕಾನೂನು ಸೇವಾ ಸಮಿತಿಗೆ ದಂಡದ ಮೊತ್ತ ಠೇವಣಿ ಮಾಡುವಂತೆ ಅರ್ಜಿದಾರರಿಗೆ ಪೀಠ ಸೂಚಿಸಿದೆ. 

Kannada Bar & Bench
kannada.barandbench.com