ಪತಂಜಲಿ ಔಷಧ ಜಾಹೀರಾತುಗಳಿಗೆ ತಾತ್ಕಾಲಿಕ ನಿಷೇಧ ಹೇರಿದ ಸುಪ್ರೀಂ ಕೋರ್ಟ್

ನ್ಯಾಯಾಲಯದ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಪತಂಜಲಿ ಸಂಸ್ಥಾಪಕರಾದ ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಲಯ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.
ಬಾಬಾ ರಾಮದೇವ್, ಸುಪ್ರೀಂ ಕೋರ್ಟ್
ಬಾಬಾ ರಾಮದೇವ್, ಸುಪ್ರೀಂ ಕೋರ್ಟ್

ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳನ್ನು ನಿಷೇಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ [ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಮತ್ತಿತರರು ಹಾಗೂ ಭಾರತ ಸರ್ಕಾರ ನಡುವಣ ಪ್ರಕರಣ].

ತನ್ನ ಔಷಧಿಗಳು ಕೆಲವು ರೋಗಗಳನ್ನು ಗುಣಪಡಿಸುತ್ತವೆ ಎಂದು ಯಾವುದೇ ಪ್ರಾಯೋಗಿಕ ಸಾಕ್ಷ್ಯಗಳಿಲ್ಲದಿದ್ದರೂ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡುವ ಮೂಲಕ ಪತಂಜಲಿ ದೇಶದ ಜನರ ದಿಕ್ಕುತಪ್ಪಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿದೆ.

ಆದ್ದರಿಂದ, ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳ) ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿ ಪತಂಜಲಿ ತನ್ನ ಯಾವುದೇ ಔಷಧೀಯ ಉತ್ಪನ್ನಗಳ ಜಾಹೀರಾತು ಅಥವಾ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ತನ್ನ ಉತ್ಪನ್ನಗಳಿಗೆ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಇದೆ ಎಂದು ಸುಳ್ಳು ಮತ್ತು ದಾರಿತಪ್ಪಿಸುವ ಹೇಳಿಕೆಗಳನ್ನು ಪ್ರಚುರಪಡಿಸುವುದನ್ನು ಮುಂದುವರೆಸುವ ಮೂಲಕ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯ ಪತಂಜಲಿಯ ಸಂಸ್ಥಾಪಕರಾದ ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದೆ.

ಬಾಲಕೃಷ್ಣ ಅವರು ಪತಂಜಲಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಪ್ರಸ್ತುತ ಅರ್ಜಿಯನ್ನು 2022ರಲ್ಲಿ ಸಲ್ಲಿಸಲಾಗಿದ್ದರೂ ಅದನ್ನು ನಿಭಾಯಿಸದಿದ್ದಕ್ಕಾಗಿ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

"ಇಡೀ ದೇಶವನ್ನು ದಿಕ್ಕು ತಪ್ಪಿಸಲಾಗಿದೆ! ಔಷಧ ಕಾಯಿದೆ ಇದನ್ನು ನಿಷೇಧಿಸಿದೆ ಎಂದು ಹೇಳಿದರೂ ನೀವು ಎರಡು ವರ್ಷ ಕಾದಿರಿ?" ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಇಡೀ ದೇಶವನ್ನು ದಿಕ್ಕು ತಪ್ಪಿಸಲಾಗಿದೆ.
ಪತಂಜಲಿ ಕುರಿತು ಸುಪ್ರೀಂ ಕೋರ್ಟ್‌.
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ
ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಡ್ವೊಕೇಟ್-ಆನ್-ರೆಕಾರ್ಡ್ ಅಮರಜೀತ್ ಸಿಂಗ್ ಅವರ ಮೂಲಕ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡಿದ ಪ್ರತಿಯೊಂದು ಸುಳ್ಳು ಪ್ರತಿಪಾದನೆಗಳಿಗೆ ತಲಾ ₹ 1 ಕೋಟಿ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಎಚ್ಚರಿಕೆ ನೀಡಿತ್ತು.

ಇಡೀ ಪ್ರಕರಣವನ್ನು ಅಲೋಪತಿ / ಆಧುನಿಕ ಔಷಧ ಮತ್ತು ಆಯುರ್ವೇದ ಉತ್ಪನ್ನಗಳ ನಡುವಿನ ಚರ್ಚೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿತ್ತು.

ದಾರಿತಪ್ಪಿಸುವ ವೈದ್ಯಕೀಯ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಅಗತ್ಯವಿರುವುದರಿಂದ ಮುಂದೆ ಇಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಮತ್ತು ಮಾಧ್ಯಮಗಳಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಅದು ಪತಂಜಲಿ ಆಯುರ್ವೇದಕ್ಕೆ ನಿರ್ದೇಶನ ನೀಡಿತ್ತು.

ಇಂದಿನ ವಿಚಾರಣೆಯ ವೇಳೆ, ಐಎಂಎ ಪರ ಹಿರಿಯ ವಕೀಲ ಪಿ ಎಸ್ ಪಟ್ವಾಲಿಯಾ ಅವರು ಪತಂಜಲಿಯ ತಪ್ಪುದಾರಿಗೆಳೆಯುವ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ಆಯುಷ್ ಸಚಿವಾಲಯ ಏನು ಹೇಳುತ್ತದೆ ಎಂದು ನ್ಯಾಯಾಲಯ ಕೇಳಿದಾಗ, ರಕ್ತದೊತ್ತಡದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದಾಗಿ ಪತಂಜಲಿ ಹೇಳಿಕೊಳ್ಳಲು ಸಾಧ್ಯವಿಲ್ಲದ ಕಾರಣ ನಿಯಂತ್ರಣದ ಪ್ರಶ್ನೆಯೇ ಉದ್ಭವಿಸುತ್ತಿಲ್ಲ ಎಂದು ಪಟ್ವಾಲಿಯಾ ವಾದಿಸಿದರು.

ಪತಂಜಲಿ ಪರ ಹಿರಿಯ ವಕೀಲ ವಿಪಿನ್ ಸಾಂಘಿ ತಮ್ಮ ಕಕ್ಷೀದಾರರಿಂದ ಹೆಚ್ಚಿನ ಸೂಚನೆ ಪಡೆಯುವುದಕ್ಕಾಗಿ ಸಮಯ ಕೋರಿದರು. ಈ ವೇಳೆ ಬಹುತೇಕ ಜಾಹಿರಾತುಗಳನ್ನು ತಾನು ನಿರ್ಬಂಧಿಸಲು ತಾನು ಆಲೋಚಿಸುತ್ತಿರುವುದಾಗಿ ನ್ಯಾಯಾಲಯ ಹೇಳಿತು.

ಕೋವಿಡ್‌ ಸಂದರ್ಭದಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿ ಮತ್ತು ಅದನ್ನು ಪಾಲಿಸುವ ವೈದ್ಯರಿಗೆ ಕಳಂಕ ತರುತ್ತಿದ್ದ ಬಗ್ಗೆ ಸುಪ್ರೀಂ ಕೋರ್ಟ್‌ ರಾಮದೇವ್‌ ಅವರನ್ನು ಆಗಸ್ಟ್ 2022 ರಲ್ಲಿ ಪ್ರಶ್ನಿಸಿತ್ತು.

ಪತಂಜಲಿ ರಾಯಭಾರಿ ವಿರುದ್ಧ ಐಎಂಎ ಅನೇಕ ಕ್ರಿಮಿನಲ್ ಕ್ರಮಗಳನ್ನು ಹೂಡಿತ್ತು. ರಾಮದೇವ್‌ ಅವರು ಇಂತಹ ಹೇಳಿಕೆಗಳನ್ನು ನೀಡಿದ ಅನೇಕ ನಿದರ್ಶನಗಳಿದ್ದು ಇವೆಲ್ಲವೂ ಕ್ರಮ ಕೈಗೊಳ್ಳಲು ಇರುವ ವಿಭಿನ್ನ ಕಾರಣಗಳಾಗಿವೆ ಎಂದು ಐಎಂಎ ಒತ್ತಿಹೇಳಿತ್ತು.

ಹಿರಿಯ ವಕೀಲ ಪಟ್ವಾಲಿಯಾ ಅವರೊಂದಿಗೆ ವಕೀಲ ಪ್ರಭಾಸ್ ಬಜಾಜ್ ಐಎಂಎ ಪರವಾಗಿ ಹಾಜರಿದ್ದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್  ಉಪಸ್ಥಿತರಿದ್ದರು. ವಕೀಲ ಮೃಣ್ಮಯಿ ಚಟರ್ಜಿ ಅವರು ಪ್ರಕರಣದ ಮಧ್ಯಸ್ಥಿಕೆದಾರರಾದ ನ್ಯಾಷನಲ್ ಅಸೋಸಿಯೇಷನ್ ಆಫ್ ಫಾರ್ಮಾಕಾಲಜಿ ಅಂಡ್ ಥೆರಪ್ಯೂಟಿಕ್ಸ್ ಅನ್ನು ಪ್ರತಿನಿಧಿಸಿದರು.

Related Stories

No stories found.
Kannada Bar & Bench
kannada.barandbench.com