ಪೋಕ್ಸೊ ಸಂತ್ರಸ್ತರ ಬೆಂಬಲಿಸುವ ವ್ಯಕ್ತಿಗಳ ಆಯ್ಕೆ, ತರಬೇತಿ, ವೇತನ ಕುರಿತು ನಿಯಮಾವಳಿ ರೂಪಿಸಲು ಸುಪ್ರೀಂ ಮಾರ್ಗಸೂಚಿ

ಬೆಂಬಲಿಸುವ ವ್ಯಕ್ತಿ ಎಂದರೆ ಮಗುವಿನ ಚೇತರಿಕೆಗಾಗಿ ಸಾಮಾನ್ಯವಾಗಿ ನಿರ್ಣಾಯಕವಾಗಿರುವ ಮಾಹಿತಿ, ಭಾವನಾತ್ಮಕ ಸಾಂತ್ವನ, ಮಾನಸಿಕ ಸ್ಥೈರ್ಯ ಹಾಗೂ ಪ್ರಾಯೋಗಿಕ ಸಹಾಯ ಒದಗಿಸುವವರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.
Supreme Court, POCSO Act
Supreme Court, POCSO Act
Published on

ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಅಡಿಯ ಪ್ರಕರಣಗಳಲ್ಲಿ ಸಂತ್ರಸ್ತರು ಮತ್ತವರ ಕುಟುಂಬಗಳಿಗೆ ಸಹಾಯ ಮಾಡುವುದಕ್ಕಾಗಿ ʼಬೆಂಬಲಿಸುವ ವ್ಯಕ್ತಿಗಳʼ ಅಗತ್ಯವಿದ್ದು ಅವರ ಆಯ್ಕೆ, ಕಾರ್ಯನಿರ್ವಹಣೆ ಹಾಗೂ ವೇತನಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ [ಬಚಪನ್‌ ಬಚಾವೋ ಆಂದೋಲನ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಸಂತ್ರಸ್ತರಿಗೆ ವಿಚಾರಣೆ ಮತ್ತು ವಿಚಾರಣಾ ಪೂರ್ವ ನೆರವು ಒದಗಿಸಲು ಎನ್‌ಜಿಒಗಳು ಮತ್ತು ವೃತ್ತಿಪರರ ಬಳಕೆಗಾಗಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ರೂಪಿಸಬೇಕು ಎನ್ನುವ ಪೋಕ್ಸೊ ಕಾಯಿದೆಯ ಸೆಕ್ಷನ್‌ 39ರ ಅನ್ವಯ ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠ ಉತ್ತರಪ್ರದೇಶಕ್ಕೆಂದು ಮಾರ್ಗಸೂಚಿಗಳನ್ನು ನೀಡಿದೆ.

ಆದರೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್‌) ಮುಂದಾಳತ್ವದಲ್ಲಿ ಎಲ್ಲಾ ರಾಜ್ಯಗಳು ಅಂತಹ ನಿಯಮಗಳನ್ನು ರೂಪಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಬೆಂಬಲಿಸುವ ವ್ಯಕ್ತಿ ಎಂದರೆ ಮಗುವಿನ ಚೇತರಿಕೆಗಾಗಿ ಸಾಮಾನ್ಯವಾಗಿ ನಿರ್ಣಾಯಕವಾಗಿರುವ ಮಾಹಿತಿ ಒದಗಿಸುವ, ಭಾವನಾತ್ಮಕ ಸಾಂತ್ವನ ನಿಡುವ, ಮಾನಸಿಕ ಸ್ಥೈರ್ಯ ತುಂಬುವ ಹಾಗೂ ಪ್ರಾಯೋಗಿಕ ಸಹಾಯ ಒದಗಿಸುವವರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಬಚ್‌ಪನ್ ಬಚಾವೋ ಆಂದೋಲನ್‌ ಎಂಬ ಸರ್ಕಾರೇತರ ಸಂಸ್ಥೆ ಉತ್ತರಪ್ರದೇಶದಲ್ಲಿ ಪೋಕ್ಸೊ ಪ್ರಕರಣದ ಸಂತ್ರಸ್ತರೊಬ್ಬರು ಎದುರಿಸುತ್ತಿರುವ ತೊಂದರೆಗಳನ್ನು ಎತ್ತಿ ತೋರಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ತೀರ್ಪು ಪ್ರಕಟವಾಗಿದೆ.  ಪೋಕ್ಸೊ ಪ್ರಕರಣದ ಹಲವು ಹಂತಗಳಲ್ಲಿ ಪ್ರಕರಣದ ಸಂತ್ರಸ್ತರನ್ನು ಪುನಶ್ಚೇತನಗೊಳಿಸಲಾಯಿತು ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿತು.

ಪೋಕ್ಸೋ ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಪ್ರೋತ್ಸಾಹ, ಭರವಸೆ ಮತ್ತು ಮಾರ್ಗದರ್ಶನ ನೀಡುವಲ್ಲಿ ಒಬ್ಬ ಬೆಂಬಲಿಗ ವ್ಯಕ್ತಿ ಮಹತ್ತರ ಪಾತ್ರ ವಹಿಸಬಹುದೆಂದು ಪೀಠ ನುಡಿಯಿತು.

ಅಂತಹ ವ್ಯಕ್ತಿಗಳು ಕಾನೂನು ಅರಿವು, ಮಕ್ಕಳ ಸ್ನೇಹಿ ಸಹಾನುಭೂತಿ ವಿಧಾನ ಹೊಂದಿರಬೇಕೆಂದು ನಿರೀಕ್ಷಿಸಲಾಗಿದೆ. ಪೋಕ್ಸೊ ನಿಯಮಾವಳಿ 2020ರ ಮೂಲಕ ಬೆಂಬಲಿಸುವ ವ್ಯಕ್ತಿಗಳನ್ನು ಸಾಂಸ್ಥಿಕಗೊಳಿಸಲಾಗಿದೆ ಎಂದು ನ್ಯಾಯಾಲಯ ವಿವರಿಸಿದೆ.

ಆದರೂ, ಪೋಕ್ಸೊಗೆ ಸಂಬಂಧಿಸಿದ ಶೇ 4 ಪ್ರಕರಣಗಳಲ್ಲಿ ಮಾತ್ರ ಬೆಂಬಲಿಸುವ ವ್ಯಕ್ತಿಗಳನ್ನು ನೇಮಿಸಲಾಗಿದೆ ಎಂದು ಮತ್ತೊಂದು ಪೀಠದ ಸ್ವಯಂಪ್ರೇರಿತ ಪ್ರಕರಣವೊಂದನ್ನು ಉಲ್ಲೇಖಿಸಿ ನ್ಯಾಯಾಲಯ ಮಾಹಿತಿ ನೀಡಿತು.

Kannada Bar & Bench
kannada.barandbench.com