ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಹೇಳಿಕೆಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಂಸದ ಸಂಜಯ್ ಸಿಂಗ್ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ನಾಲ್ಕು ವಾರಗಳ ಅವಧಿಗೆ ತಡೆಯಾಜ್ಞೆ ವಿಧಿಸಲಾಗಿದೆ. ಈ ವೇಳೆ ಮಧ್ಯಂತರ ಪರಿಹಾರ ಕೋರಿ ಈ ಇಬ್ಬರೂ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿಳಿಸಿದೆ.
ಪ್ರಕರಣವನ್ನು ಗುಜರಾತ್ ರಾಜ್ಯದ ಹೊರಗಿನ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಿಂಗ್ ಅವರು ಸಲ್ಲಿಸಿದ್ದ ಮನವಿಯ ಮೇರೆಗೆ ಈ ಆದೇಶ ಬಂದಿದ್ದರೂ ವರ್ಗಾವಣೆ ಮನವಿಯನ್ನು ಅದು ಪುರಸ್ಕರಿಸಿಲ್ಲ.
ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ , ವಕೀಲರಾದ ವಿವೇಕ್ ಜೈನ್ ಹಾಗೂ ಕರಣ್ ಶರ್ಮಾ ಅವರು ಸಂಜಯ್ ಸಿಂಗ್ ಅವರ ಪರವಾಗಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದರು.
ಮೋದಿ ಅವರ ಪದವಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ನೀಡದ ಹಿನ್ನೆಲೆಯಲ್ಲಿ ಈ ಇಬ್ಬರೂ ತನ್ನ ಘನತೆಗೆ ಹಾನಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಗುಜರಾತ್ ವಿಶ್ವವಿದ್ಯಾಲಯ ಮೊಕದ್ದಮೆ ಹೂಡಿತ್ತು.
ಪ್ರಧಾನಿ ಮೋದಿ ಅವರ ಪದವಿಯ ವಿವರಗಳನ್ನು ಒದಗಿಸುವಂತೆ ಸೂಚಿಸಿದ್ದ ಮುಖ್ಯ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ಹೈಕೋರ್ಟ್ ಈ ಹಿಂದೆ ಬದಿಗೆ ಸರಿಸಿತ್ತು.
ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಐಸಿ ಆದೇಶ ನೀಡಿತ್ತು. ಕೋರಲಾಗಿರುವ ವಿವರಗಳನ್ನು ಬಹಿರಂಗಪಡಿಸಲು ಗುಜರಾತ್ ವಿಶ್ವವಿದ್ಯಾಲಯಕ್ಕೆ ಅದು ಆದೇಶಿಸಿತ್ತು. ಈ ನಿರ್ಧಾರ ಪ್ರಶ್ನಿಸಿ ವಿವಿ, ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಮೇಲ್ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಆರ್‌ಟಿಐ ಕಾಯಿದೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕೇಜ್ರಿವಾಲ್‌ಗೆ ₹25,000 ದಂಡ ವಿಧಿಸಿತ್ತು. ಈ ತೀರ್ಪು ಮರು ಪರಿಶೀಲನೆ ಕೋರಿ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು.
ಮರುಪರಿಶೀಲನಾ ಅರ್ಜಿ ತಿರಸ್ಕರಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠ ದಂಡ ವಿಧಿಸಿದ್ದು ಸಮರ್ಥನೀಯ ಎಂದಿತ್ತು. ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ 2023ರ ಡಿಸೆಂಬರ್‌ನಲ್ಲಿ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯ ವಿಚಾರಣೆ ಇನ್ನಷ್ಟೇ ನಡೆಯಬೇಕಿದೆ.