ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ವಿಚಾರದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿದ್ದ ಕಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ನಡೆಸುತ್ತಿರುವ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಆ ಮೂಲಕ ಅವರು ವಿಚಾರಣೆ ನಡೆಸುತ್ತಿದ್ದ ಎರಡು ಪ್ರಕರಣಗಳಿಗೆ ಒಂದೇ ವಾರದಲ್ಲಿ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದಂತಾಗಿದೆ.
ನಕಲಿ ಜಾತಿ ಪ್ರಮಾಣಪತ್ರದ ಹಗರಣದಂತೆಯೇ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಸೌಮೆನ್ ಸೇನ್ ಅವರ ನೇತೃತ್ವದ ಕಲ್ಕತ್ತಾ ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ನ್ಯಾ. ಗಂಗೋಪಾಧ್ಯಾಯ ಆಕ್ಷೇಪ ವ್ಯಕ್ತಪಡಿಸಿದ್ದರು. ಎರಡೂ ಪ್ರಕರಣಗಳ ಆದೇಶವನ್ನು ನ್ಯಾ. ಸೇನ್ ನೇತೃತ್ವದ ವಿಭಾಗೀಯ ಪೀಠ ಹೊರಡಿಸಿತ್ತು.
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ಮುಂದಿರುವ ಪ್ರಕರಣದ ವಿಚಾರಣೆಗೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ಜನವರಿ 25ರಂದು ಆದೇಶ ಹೊರಡಿಸಿದ್ದು ಅದೇ ದಿನ ನಕಲಿ ಜಾತಿ ಪ್ರಮಾಣಪತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಾದದ ಅಲೆ ಎದ್ದಿತ್ತು.
ಶಾಲಾ ನೇಮಕಾತಿ ಹಗರಣದ ಮೇಲ್ಮನವಿ ಆಲಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಪ್ರಕರಣದ ಸಂಬಂಧ ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಪ್ರತಿಕ್ರಿಯೆ ಕೇಳಿದೆ.
ಶಾಲಾ ನೇಮಕಾತಿ ಹಗರಣ ಕುರಿತಂತೆ, ಸಂದರ್ಶನ ಮತ್ತು ತತ್ಸಂಬಂಧಿತ ಪರೀಕ್ಷೆ ಬರೆದಿದ್ದರೂ ಶಿಕ್ಷಕರ ಹುದ್ದೆಗಳಿಗೆ ತಮ್ಮನ್ನು ಆಯ್ಕೆ ಮಾಡಿಲ್ಲ ಎಂದು ಆರೋಪಿಸಿ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಕೈಗೆತ್ತಿಕೊಂಡಿದ್ದರು.
ಆದರೆ, ಈ ಮನವಿಯನ್ನು ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಣ ಮಂಡಳಿ ವಿರೋಧಿಸಿತ್ತು. ವಿಭಾಗೀಯ ಪೀಠ ಈಗಾಗಲೇ ಸಮಿತಿಯ ಪ್ರಕಟಣೆಯ ನಿರ್ದೇಶನವನ್ನು ತಡೆಹಿಡಿದಿದೆ ಎಂದು ಹೇಳಿತ್ತು.
ಆದರೂ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಜನವರಿ 3ರಂದು ನೀಡಿದ ಆದೇಶದಲ್ಲಿ ಕಾಯಿದೆಯ ಸೆಕ್ಷನ್‌ಗೆ ಯಾವುದೇ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ ಎಂದರು,
ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ಆದೇಶವನ್ನು ನ್ಯಾಯಮೂರ್ತಿ ಸೇನ್ ಮತ್ತು ನ್ಯಾಯಮೂರ್ತಿ ಉದಯ್ ಕುಮಾರ್ ಅವರಿದ್ದ ವಿಭಾಗೀಯ ಪೀಠದೆದುರು ಮತ್ತೆ ಪ್ರಶ್ನಿಸಲಾಯಿತು. ಆದೇಶ ಬದಿಗೆ ಸರಿಸಿದ ವಿಭಾಗೀಯ ಪೀಠ ತನ್ನ ಆದೇಶವನ್ನು ಏಕಸದಸ್ಯ ಪೀಠ ನಿರ್ಲಕ್ಷಿಸಿದ್ದೇಕೆ ಎಂದು ಪ್ರಶ್ನಿಸಿತ್ತು.
ತನ್ನ ತಡೆಯಾಜ್ಞೆಯನ್ನು ಪುನರುಚ್ಚರಿಸಿದ ವಿಭಾಗೀಯ ಪೀಠ, ಸಮಿತಿಯ ಹಾರ್ಡ್ ಕಾಪಿ ಅಥವಾ ಸಾಫ್ಟ್ ಕಾಪಿಯನ್ನು ಹಾಜರುಪಡಿಸುವಂತೆ ಮಂಡಳಿಗೆ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಜನವರಿ 10ರಂದು ನೀಡಿದ್ದ ಆದೇಶವನ್ನು ತಳ್ಳಿಹಾಕಿತು.
ವಿಭಾಗೀಯ ಪೀಠದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಯಿತು. ನ್ಯಾ. ಗಂಗೋಪಾಧ್ಯಾಯ ಅವರು ನಡೆಸುತ್ತಿರುವ ವಿಚಾರಣೆಗೆ ಇದೀಗ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಶಾಲಾ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಇದು ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದ ಎರಡನೇ ಸುತ್ತಿನ ದಾವೆಯಾಗಿದೆ. ಪಶ್ಚಿಮ ಬಂಗಾಳದಲ್ಲಿ ಸೂಕ್ತ ನಿಯಮ ಪಾಲಿಸದೆ 2016ರಲ್ಲಿ ನೇಮಕ ಮಾಡಲಾಗಿದ್ದ 36,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳನ್ನು ನ್ಯಾ. ಗಂಗೋಪಾಧ್ಯಾಯ ರದ್ದುಗೊಳಿಸಿದ್ದರು.
ಸುಪ್ರೀಂ ಕೋರ್ಟ್‌ನ ಮಧ್ಯಪ್ರವೇಶದ ನಂತರ, ಪ್ರಕರಣವನ್ನು ವಿಭಾಗೀಯ ಪೀಠಕ್ಕೆ ವರ್ಗಾಯಿಸಲಾಗಿತ್ತು. ಆದರೂ, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ಜನವರಿ 3ರಂದು ಮತ್ತೊಮ್ಮೆ ನೇಮಕಾತಿಗಳ ಹೊಸ, ದೋಷ-ಮುಕ್ತ ಪಟ್ಟಿ ಪ್ರಕಟಿಸುವಂತೆ ಮಂಡಳಿಗೆ ನಿರ್ದೇಶನ ನೀಡಿದ್ದರು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]