ಘಟನೋತ್ತರ ಪರಿಸರ ಅನುಮತಿಯಡಿ ಗಣಿಗಾರಿಕೆಗೆ ಅನುವು ಮಾಡಿಕೊಡುವ ಕೇಂದ್ರ ಸರ್ಕಾರದ ಜ್ಞಾಪನಾಪತ್ರಗಳಿಗೆ ಸುಪ್ರೀಂ ತಡೆ

ಪರಿಸರ ಅನುಮತಿ ಪಡೆಯದಿದ್ದರೂ ಗಣಿಗಾರಿಕೆ ಯೋಜನೆಗಳಿಗೆ ಅನುಮತಿ ನೀಡುವ ಕ್ರಮ ಪ್ರಶ್ನಿಸಿ ವನಶಕ್ತಿ ಹೆಸರಿನ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲಾಗಿದೆ.
ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ

ದೇಶದಲ್ಲಿ ಗಣಿಗಾರಿಕೆಗೆ ಪೂರ್ವಾನ್ವಯವಾಗುವಂತೆ ಪರಿಸರ ಅನುಮತಿ ನೀಡುವ ಕೇಂದ್ರ ಪರಿಸರ ಸಚಿವಾಲಯದ ಎರಡು ಕಚೇರಿ ಜ್ಞಾಪನಾಪತ್ರಗಳ ಜಾರಿಗೆ ಸುಪ್ರೀಂ ಕೋರ್ಟ್‌ ಈಚೆಗೆ ತಡೆ ನೀಡಿದೆ [ವನಶಕ್ತಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಜನವರಿ 2ರಂದು ಜ್ಞಾಪನಾ ಪತ್ರಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಾಲಯಕ್ಕೆ ಸೂಚಿಸಿದೆ.

"ಮುಂದಿನ ಆದೇಶದವರೆಗೆ, ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಹೊರಡಿಸಿದ 2021ರ ಜುಲೈ 7 ಮತ್ತು 2022 ರ ಜನವರಿ 28ರ ಕಚೇರಿ ಜ್ಞಾಪನಾ ಪತ್ರಗಳ ಕಾರ್ಯಾಚರಣೆಗೆ ತಡೆ ನೀಡಲಾಗಿದೆ" ಎಂದು ನ್ಯಾಯಾಲಯದ ಜನವರಿ 2ರ ಆದೇಶದಲ್ಲಿ ತಿಳಿಸಿದೆ.

ಪರಿಸರ ಪರಿಣಾಮ ಮೌಲ್ಯಮಾಪನ (ಇಐಎ) 2006ರ ಅಧಿಸೂಚನೆಯ ಪ್ರಕಾರ ಪರಿಸರ ಅನುಮತಿ ಪಡೆಯದಿದ್ದರೂ ಗಣಿಗಾರಿಕೆ ಯೋಜನೆಗಳಿಗೆ ಅನುಮತಿ ನೀಡುವ ಕ್ರಮ ಪ್ರಶ್ನಿಸಿ ವನಶಕ್ತಿ ಹೆಸರಿನ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡಲಾಗಿದೆ.

ಇಐಎ ಅಧಿಸೂಚನೆಯು ಯಾವುದೇ ವಿನಾಯಿತಿಗಳಿಗೆ ಕಟ್ಟುನಿಟ್ಟಾಗಿ ಅವಕಾಶ ನೀಡುವುದಿಲ್ಲ. ಆದ್ದರಿಂದ ಜ್ಞಾಪನಾಪತ್ರಗಳಿಗೆ (ಜುಲೈ 2021, ಜನವರಿ 2022) ಅಧಿಕಾರ ವ್ಯಾಪ್ತಿ ಇಲ್ಲ. ಇವು 1986 ರ ಪರಿಸರ (ಸಂರಕ್ಷಣಾ ಕಾಯ್ದೆ) ಸೆಕ್ಷನ್ 3ರ ನಿಯಮಾವಳಿಗಳನ್ನು ಹಾಗೂ ಈ ಹಿಂದಿನ ತೀರ್ಪುಗಳನ್ನು ಉಲ್ಲಂಘಿಸುತ್ತವೆ ಎಂದು ವನಶಕ್ತಿ ವಾದಿಸಿತ್ತು.

ಆಕ್ಷೇಪಿತ ಜುಲೈ 2021ರ ಜ್ಞಾಪನಾಪತ್ರವು ಅಧಿಸೂಚನೆಯ ನಿಯಮಾವಳಿಗಳ 'ಉಲ್ಲಂಘನೆ ಪ್ರಕರಣಗಳಲ್ಲಿ' ಆರು ತಿಂಗಳೊಳಗೆ ಘಟನೋತ್ತರ ಅನುಮತಿ ನೀಡಬಹುದಾದ ಪ್ರಕರಣಗಳು ಹಾಗೂ ಅದನ್ನು ನಿರ್ವಹಿಸಬೇಕಾದ ಪ್ರಮಾಣಿತ ಕಾರ್ಯಾಚರಣಾ ಪ್ರಕ್ರಿಯೆಯ (ಎಸ್‌ಒಪಿ) ಬಗ್ಗೆ ತಿಳಿಸುತ್ತದೆ. ಈ ಎಸ್‌ಒಪಿಗೆ ಮದ್ರಾಸ್‌ ಹೈಕೋರ್ಟ್‌ ತಡೆ ನೀಡಿತ್ತು.

ಇದರ ಬೆನ್ನಿಗೇ ಮದ್ರಾಸ್‌ ಹೈಕೋರ್ಟ್‌ ನೀಡಿರುವ ತಡೆಯನ್ನು ಕೇವಲ ತಮಿಳುನಾಡಿಗೆ ಮಾತ್ರ ಅನ್ವಯಿಸುವಂತೆ ಜನವರಿ 2022ರಲ್ಲಿ ಕೇಂದ್ರ ಪರಿಸರ ಸಚಿವಾಲಯವು ಮತ್ತೊಂದು ಜ್ಞಾಪನಾಪತ್ರವನ್ನು ಹೊರಡಿಸಿತ್ತು.

ಈ ಎರಡು ಜ್ಞಾಪನಾಪತ್ರ ಮತ್ತು ಎಸ್‌ಒಪಿಯನ್ನು ರದ್ದುಗೊಳಿಸುವಂತೆ ಸರ್ಕಾರೇತರ ಸಂಸ್ಥೆ ನ್ಯಾಯಾಲಯವನ್ನು ಒತ್ತಾಯಿಸಿತ್ತು.

ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್ , ವಕೀಲರಾದ ವಂಶದೀಪ್ ದಾಲ್ಮಿಯಾ, ಅನಿಶಾ ಜಿಯಾನ್ ಮತ್ತು ತಾನ್ಯಾ ಶ್ರೀವಾಸ್ತವ ಅವರು ಅರ್ಜಿ ಸಲ್ಲಿಸಿರುವ ವನಶಕ್ತಿ ಪರವಾಗಿ ವಾದಿಸಿದರು.

ವಾಸ್ತವಿಕ ಪರಿಸರ ಅನುಮತಿಗಳನ್ನು ನೀಡುವುದನ್ನು 1986ರ ಪರಿಸರ (ಸಂರಕ್ಷಣಾ) ಕಾಯಿದೆ ನಿಷೇಧಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಮೇ 2022ರಲ್ಲಿ ಅಭಿಪ್ರಾಯಪಟ್ಟಿತ್ತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Attachment
PDF
Vanashakti vs Union of India and ors.pdf
Preview
Kannada Bar & Bench
kannada.barandbench.com