ಮೋದಿ ಉಪನಾಮ ಹೇಳಿಕೆ: ಮಾನಹಾನಿ ಪ್ರಕರಣದಲ್ಲಿ ರಾಹುಲ್‌ ಗಾಂಧಿ ವಿರುದ್ಧದ ದೋಷಿ ಆದೇಶಕ್ಕೆ ಸುಪ್ರೀಂ ತಡೆ

ಗರಿಷ್ಠ ಎರಡು ವರ್ಷ ಶಿಕ್ಷೆ ವಿಧಿಸುವುದಕ್ಕೆ ವಿಚಾರಣಾಧೀನ ನ್ಯಾಯಾಲಯವು ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪಿ ಎಸ್‌ ನರಸಿಂಹ ಮತ್ತು ಪಿ ವಿ ಸಂಜಯ್‌ ಕುಮಾರ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ
Rahul Gandhi and Supreme Court
Rahul Gandhi and Supreme Court

ʼಎಲ್ಲಾ ಕಳ್ಳರು ಮೋದಿ ಉಪನಾಮʼ ಹೊಂದಿದ್ದಾರೆ ಎಂಬ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಗುಜರಾತ್‌ನ ಅಧೀನ ನ್ಯಾಯಾಲಯವು ದೋಷಿ ಎಂದು ಪರಿಗಣಿಸಿ, ಎರಡು ವರ್ಷ ಶಿಕ್ಷೆ ವಿಧಿಸಿದ್ದಕ್ಕೆ ಶುಕ್ರವಾರ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದೆ [ರಾಹುಲ್‌ ಗಾಂಧಿ ವರ್ಸಸ್‌ ಪೂರ್ಣೇಶ್‌ ಮೋದಿ ಮತ್ತು ಇತರರು].

ಎರಡು ವರ್ಷ ಗರಿಷ್ಠ ಶಿಕ್ಷೆ ವಿಧಿಸಿರುವುದಕ್ಕೆ ವಿಚಾರಣಾಧೀನ ನ್ಯಾಯಾಲಯವು ಯಾವುದೇ ನಿರ್ದಿಷ್ಟ ಕಾರಣಗಳನ್ನು ನೀಡಿಲ್ಲ ಎಂದು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಪಿ ಎಸ್‌ ನರಸಿಂಹ ಮತ್ತು ಪಿ ವಿ ಸಂಜಯ್‌ ಕುಮಾರ್‌ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.

ಅಲ್ಲದೆ, ಶಿಕ್ಷೆಯ ಆದೇಶವು ವ್ಯಾಪಕ ಪರಿಣಾಮ ಉಂಟು ಮಾಡುವಂಥದ್ದಾಗಿದ್ದು, ಪ್ರಕರಣದಲ್ಲಿ ಶಿಕ್ಷೆಯನ್ನು ವಿಧಿಸಿದ ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಇದು ರಾಹುಲ್‌ ಗಾಂಧಿ ಅವರು ಪ್ರತಿನಿಧಿಸುವ ವಯನಾಡ್‌ನ ಮತದಾರರ ಹಕ್ಕುಗಳನ್ನು ಅಡ್ಡಿ ಪಡಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಆದೇಶದ ಪರಿಣಾಮವು ವ್ಯಾಪಕವಾಗಿದ್ದು, ಮತದಾರರ ಹಕ್ಕುಗಳನ್ನು ಅದು ಅಡ್ಡಿಪಡಿಸುತ್ತದೆ ಎನ್ನುವುದು ನಮ್ಮ ಅಭಿಮತವಾಗಿದೆ. ಮೇಲೆ ಹೇಳಿದ ಸಂಗತಿಗಳನ್ನು ಪರಿಗಣಿಸಿ ಹಾಗೂ ಅನರ್ಹತೆಗೆ ಕಾರಣವಾದ ಗರಿಷ್ಠ ಶಿಕ್ಷೆ ವಿಧಿಸಲು ವಿಚಾರಣಾಧೀನ ನ್ಯಾಯಾಧೀಶರು ಯಾವುದೇ ಕಾರಣವನ್ನು ನೀಡಿಲ್ಲ ಎನ್ನುವುದನ್ನು ಗಮನಿಸಿ ಅನರ್ಹತೆಗೆ ಕಾರಣವಾದ ದೋಷಿ ಎನ್ನುವ ಆದೇಶಕ್ಕೆ ತಡೆ ನೀಡುವುದು ಸೂಕ್ತವಾಗಿದೆ” ಎಂದು ನ್ಯಾಯಾಲಯ ತನ್ನ ಅದೇಶದಲ್ಲಿ ವಿವರಿಸಿದೆ. ಕಾನೂನಿನ ಅನ್ವಯ ಮೇಲ್ಮನವಿಯು ಕುರಿತು ನಿರ್ಧರಿಸಲು ಸುಪ್ರೀಂ ಕೋರ್ಟ್‌ನಲ್ಲಿರುವ ಬಾಕಿ ಇರುವ ಮೇಲ್ಮನವಿಯು ಯಾವುದೇ ರೀತಿಯಲ್ಲಿಯೂ ಅಡ್ಡಿಯಾಗದು ಎಂದೂ ಪೀಠ ಹೇಳಿದೆ.

ನ್ಯಾಯಾಲಯದ ಈ ಆದೇಶದಿಂದಾಗಿ ರಾಹುಲ್‌ ಗಾಂಧಿಯವರ ಸಂಸದೀಯ ಸ್ಥಾನವು ಮರುಸ್ಥಾಪಿತವಾಗಲಿದೆ.

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ರಾಹುಲ್‌ ಅವರನ್ನು ದೋಷಿ ಎಂದು ತೀರ್ಮಾನಿಸಿ, ಎರಡು ವರ್ಷ ಶಿಕ್ಷೆ ವಿಧಿಸಿದ ಆದೇಶಕ್ಕೆ ಸತ್ರ ನ್ಯಾಯಾಲಯ ಮತ್ತು ಗುಜರಾತ್‌ ಹೈಕೋರ್ಟ್‌ ತಡೆ ನೀಡಿರಲಿಲ್ಲ. ಇದರಿಂದ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವ ಅನರ್ಹವಾಗಿತ್ತು.

ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಗವಾಯಿ ಅವರು “ಸಂಸತ್‌ ಕ್ಷೇತ್ರ ಪ್ರತಿನಿಧಿತ್ವ ಇಲ್ಲ ಎಂಬುದು ಆಧಾರವಲ್ಲವೇ? ಗರಿಷ್ಠ ಶಿಕ್ಷೆ ವಿಧಿಸುವುದಕ್ಕೆ ಸಂಬಂಧಿಸಿದಂತೆ ವಿಚಾರಣಾಧೀನ ನ್ಯಾಯಾಧೀಶರು ಚಕಾರ ಎತ್ತಿಲ್ಲ. ಇಲ್ಲಿ ಒಬ್ಬ ವ್ಯಕ್ತಿಯ ಹಕ್ಕು ಮಾತ್ರವಲ್ಲ ಇಡೀ ಕ್ಷೇತ್ರದ ಜನರ ಹಕ್ಕಿಗೆ ಇದರಿಂದ ಅಡ್ಡಿಯಾಗಿದೆ. ಇದರ ಬಗ್ಗೆ ಅವರು (ಮ್ಯಾಜಿಸ್ಟ್ರೇಟ್‌) ಏನಾದರೂ ಹೇಳಿದ್ದಾರೆಯೇ? ಒಬ್ಬ ವ್ಯಕ್ತಿ ಸಂಸದ ಎಂಬ ಕಾರಣಕ್ಕೆ ವಿಶೇಷ ವಿನಾಯಿತಿ ಇರುವುದಿಲ್ಲ ಎಂದು ಮ್ಯಾಜಿಸ್ಟ್ರೇಟ್‌ ಹೇಳಿದ್ದಾರೆ” ಎಂದರು.

ಮುಂದುವರಿದು, ನ್ಯಾ. ಗವಾಯಿ ಅವರು “ಏನು ನಿರೀಕ್ಷಿಸಲಾಗುತ್ತದೆ ಎಂಬುದಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ಅವರು ಸಾಕಷ್ಟು ಉಪನ್ಯಾಸ ನೀಡಿದ್ದಾರೆ” ಎಂದಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ 1 ವರ್ಷ 11 ತಿಂಗಳು ಶಿಕ್ಷೆ ವಿಧಿಸಿದ್ದರೆ ಅವರು ಸಂಸತ್‌ ಸದಸ್ಯತ್ವದಿಂದ ಅನರ್ಹರಾಗುತ್ತಿರಲಿಲ್ಲ ಎಂದೂ ಪೀಠ ಹೇಳಿದೆ.

Also Read
ಮೋದಿ ಉಪನಾಮ ಹೇಳಿಕೆ: ಕ್ಷಮೆ ಯಾಚಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ರಾಹುಲ್ ಗಾಂಧಿ

ರಾಹುಲ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ದೂರುದಾರರು ವಾಟ್ಸಾಪ್‌ನಲ್ಲಿ ಸುದ್ದಿ ತುಣುಕು ಸ್ವೀಕರಿಸಿರುವುದಾಗಿ ಹೇಳಿದ್ದಾರೆ. ಇದನ್ನು ಯಾರು ನೀಡಿದರು ಎಂದು ಅವರು ಹೇಳಿಲ್ಲ. ಸಿಆರ್‌ಪಿಸಿ ಸೆಕ್ಷನ್‌ 313ರ ಅಡಿ ಅವರು ಹೇಳಿಕೆ ದಾಖಲಿಸಿದ್ದಾರೆ. ಭಾರತೀಯ ಸಾಕ್ಷ್ಯ ಕಾಯಿದೆಯ ನಿಬಂಧನೆಗಳ ಅಡಿ ವಾಸ್ತವಿಕ ಭಾಷಣವನ್ನು ಸಾಬೀತುಪಡಿಸಲಾಗಿಲ್ಲ. ಗಣೇಶ್‌ ಗ್ಯಾಂಚಿ ಎಂಬವರು ತೆರೆಯ ಮೇಲೆ ಬರುವವರೆಗೆ ಭಾಷಣಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. 21 ತಿಂಗಳು ಅವರಿರಲಿಲ್ಲ. ಬಿಜೆಪಿ ಕಾರ್ಯಕರ್ತನಾದ ಆತನನ್ನು ನಂತರ ಶೋಧಿಸಲಾಯಿತು” ಎಂದರು.

ಪ್ರತಿವಾದಿ ಪೂರ್ಣೇಶ್‌ ಮೋದಿ ಪರವಾಗಿ ವಾದಿಸಿದ ಹಿರಿಯ ವಕೀಲ ಮಹೇಶ್‌ ಜೇಠ್ಮಲಾನಿ ಅವರು “ರಾಹುಲ್‌ ಗಾಂಧಿ ಅವರ ಉದ್ದೇಶವು ಮೋದಿ ಉಪನಾಮ ಹೊಂದಿರುವ ಎಲ್ಲರ ಮಾನಹಾನಿ ಮಾಡುವುದಾಗಿದೆ” ಎಂದು ಆಕ್ಷೇಪಿಸಿದರು. ಅವರ ಸುದೀರ್ಘ ವಾದ ಆಲಿಸಿದ ನ್ಯಾ. ಪಿ ಎಸ್‌ ನರಸಿಂಹ ಅವರು “ಗರಿಷ್ಠ ಶಿಕ್ಷೆ ವಿಧಿಸುವ ಜರೂರತ್ತು ಏನಿತ್ತು” ಎಂದು ಪ್ರಶ್ನಿಸಿದರು.

Related Stories

No stories found.
Kannada Bar & Bench
kannada.barandbench.com