ಮಹಾರಾಷ್ಟ್ರದ 55 ಕುಟುಂಬಗಳ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂ ತಡೆ

ಕಟ್ಟಡ ಕೆಡವುದಕ್ಕೂ 2 ದಿನಗಳ ಮೊದಲಷ್ಟೇ ನೋಟಿಸ್ ನೀಡಲಾಗಿದ್ದು ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡುವ ಹೊತ್ತಿಗೆ ಬುಲ್ಡೋಜರ್‌ಗಳು ಸ್ಥಳದಲ್ಲಿದ್ದವು ಎನ್ನಲಾಗಿದೆ.
ಮಹಾರಾಷ್ಟ್ರದ 55 ಕುಟುಂಬಗಳ ಕಟ್ಟಡ ತೆರವು ಕಾರ್ಯಾಚರಣೆಗೆ ಸುಪ್ರೀಂ ತಡೆ
Published on

ಮಹಾರಾಷ್ಟ್ರದ ರಾಯಗಢದಲ್ಲಿ 55 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿರುವ ಅನಧಿಕೃತ ವಸತಿ ಕಟ್ಟಡಗಳನ್ನು ಕೆಡವಲು ನಿರ್ದೇಶಿಸಿದ ಬಾಂಬೆ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಜೂನ್ 27 ರಂದು ತಡೆಹಿಡಿದಿದೆ [ವಿನಾಯಕ್ ಡೆವಲಪರ್ಸ್ ಮತ್ತಿತರರು ಹಾಗೂ ಮೀನಾನಾಥ್ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ನೋಟಿಸ್‌ ನೀಡಿದ ನ್ಯಾಯಮೂರ್ತಿಗಳಾದ ಉಜ್ಜಲ್ ಭುಯಾನ್ ಮತ್ತು ಕೆ ವಿನೋದ್ ಚಂದ್ರನ್ ಅವರಿದ್ದ ಪೀಠ ನ್ಯಾಯಾಲಯದ ಅನುಮತಿಯಿಲ್ಲದೆ ತೆರವು ಅಥವಾ ಧ್ವಂಸಕ್ಕೆ ಮುಂದಾಗದಂತೆ ಅಧಿಕಾರಿಗಳಿಗೆ ತಡೆ ವಿಧಿಸಿತು.

Also Read
ಕಾರ್ಯಾಂಗ ತನ್ನ ಎಲ್ಲೆ ಮೀರಿದ್ದಕ್ಕೆ 'ಬುಲ್ಡೋಜರ್ ನ್ಯಾಯʼ ಉದಾಹರಣೆ: ನ್ಯಾ. ಬಿ ವಿ ನಾಗರತ್ನ

ಕಟ್ಟಡ ಕೆಡವುದಕ್ಕೂ 2 ದಿನಗಳ ಮೊದಲಷ್ಟೇ ನೋಟಿಸ್ ನೀಡಲಾಗಿದ್ದು ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡುವ ಹೊತ್ತಿಗೆ ಬುಲ್ಡೋಜರ್‌ಗಳು ಸ್ಥಳದಲ್ಲಿದ್ದವು ಎನ್ನಲಾಗಿದೆ.

ಕಟ್ಟಡಗಳನ್ನು ಅನಧಿಕೃತವಾಗಿ ನಿರ್ಮಿಸಲಾಗಿದ್ದು ತಮ್ಮ ಮುಕ್ತ ಸಂಚಾರಕ್ಕೆ ಅಡ್ಡಿಯಾಗಿದೆ ಎಂದು ಆರೋಪಿಸಿ ನೆರೆಹೊರೆಯವರು ಸಲ್ಲಿಸಿದ್ದ ರಿಟ್ ಅರ್ಜಿ ಹಿನ್ನೆಲೆಯಲ್ಲಿ ನಗರದ ಚಿಂತಾಮಣಿ ಸಂಕೀರ್ಣದ ಎ ನಿಂದ ಇ ವರೆಗಿನ ಐದು ವಸತಿ ಕಟ್ಟಡಗಳನ್ನು ನಾಲ್ಕು ವಾರಗಳಲ್ಲಿ ಕೆಡವಲು ಮಹಾರಾಷ್ಟ್ರ ನಗರ ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ (ಸಿಡ್ಕೊ) ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಆಸ್ತಿಯ ಮಾಲೀಕರು ಮತ್ತು ಡೆವಲಪರ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Also Read
ಬುಲ್ಡೋಜರ್ ನ್ಯಾಯಕ್ಕೆ ಒರಿಸ್ಸಾ ಹೈಕೋರ್ಟ್ ಲಗಾಮು; ₹10 ಲಕ್ಷ ಪರಿಹಾರ ನೀಡುವಂತೆ ಆದೇಶ

ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದಾಗ ಕ್ರಮ ಕೈಗೊಳ್ಳಬಹುದಿದ್ದ ಸಿಡ್ಕೊ ಹಲವು ವರ್ಷಗಳಿಂದ ಕೈಕಟ್ಟಿ ಕುಳಿತಿತ್ತು. ಈಗ ನೂರಾರು ಕುಟುಂಬಗಳಿಗೆ ಸೂಕ್ತ ರೀತಿಯಲ್ಲಿ ನೋಟಿಸ್‌ ನೀಡದೆ ಅಥವಾ ವಿಚಾರಣೆ ನಡೆಸದೆ ನಿರಾಶ್ರಿತರನ್ನಾಗಿ ಮಾಡುವಂತಿಲ್ಲ. ಮಹಾರಾಷ್ಟ್ರ ಪ್ರಾದೇಶಿಕ ಮತ್ತು ಪಟ್ಟಣ ಯೋಜನೆ ಕಾಯಿದೆಯ ಸೆಕ್ಷನ್ 53(1A) ಅಡಿಯಲ್ಲಿ, ಯಾವುದೇ ತೆರವು ಕಾರ್ಯಾಚರಣೆಗೂ ಮುನ್ನ ಕನಿಷ್ಠ ಒಂದು ತಿಂಗಳ ಮೊದಲೇ ನೋಟಿಸ್‌ ನೀಡುವ ಅಗತ್ಯವಿದೆ ಎಂದು ಅವರು ಅಳಲು ತೋಡಿಕೊಂಡಿದ್ದರು.

ವಾದ ಆಲಿಸಿದ ನ್ಯಾಯಾಲಯ ಎಂಟು ವಾರಗಳ ಒಳಗೆ ಪ್ರತಿವಾದಿಗಳು ಪ್ರತಿಕ್ರಿಯೆ ನೀಡಬೇಕು. ಅಲ್ಲಿಯವರೆಗೆ ತೆರವು ಕಾರ್ಯಾಚರಣೆ ನಡೆಸುವಂತಿಲ್ಲ ಎಂದು ತಾಕೀತು ಮಾಡಿತು.

Kannada Bar & Bench
kannada.barandbench.com