ಇಸ್ರೋನ ಆಂತರಿಕ್ಷ್ ಸಂಸ್ಥೆಯು ದೇವಾಸ್‌ಗೆ ನೀಡಬೇಕೆಂದು ಆದೇಶಿಸಲಾದ 1.2 ಶತಕೋಟಿ ಡಾಲರ್ ಪರಿಹಾರಕ್ಕೆ ಸುಪ್ರೀಂ ತಡೆ

ಮೊಬೈಲ್‌ಗಳಲ್ಲಿ ಹೈಸ್ಪೀಡ್ ವಿಡಿಯೋ ಬೀಮಿಂಗ್ ಕಂಟೆಂಟ್‌ ಪೂರೈಸಲು ತನ್ನ ಎರಡು ಉಪಗ್ರಹ ಸೇವೆ ಬಳಸಿಕೊಳ್ಳುವಂತೆ ಒಪ್ಪಂದ ಮಾಡಿಕೊಂಡಿದ್ದ ಅಂತರಿಕ್ಷ್ ಅದನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ತನಗಾದ ನಷ್ಟ ಉಲ್ಲೇಖಿಸಿ ದೇವಾಸ್ ದೂರು ದಾಖಲಿಸಿತ್ತು
Supreme Court
Supreme Court
Published on

ಬೆಂಗಳೂರು ಮೂಲದ ನವೋದ್ಯಮ ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ (ಇಸ್ರೊ) ವಾಣಿಜ್ಯ ಸಂಸ್ಥೆಯಾದ ಆಂತರಿಕ್ಷ್‌ ಕಾರ್ಪೊರೇಷನ್‌ 7,800 ಕೋಟಿ ರೂಪಾಯಿ (1.2‌ ಬಿಲಿಯನ್‌ ಅಮೆರಿಕನ್‌ ಡಾಲರ್) ಪರಿಹಾರ ಪಾವತಿಸುವಂತೆ ಆದೇಶಿಸಿಸಲಾಗಿದ್ದ 2015ರ ಮಧ್ಯಸ್ಥಿಕೆ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ‌ ತಡೆ ಹಿಡಿದಿದೆ (ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ವರ್ಸಸ್‌ ಆಂತರಿಕ್ಷ್‌ ಕಾರ್ಪೊರೇಷನ್‌ ಲಿಮಿಟೆಡ್‌).

ವಾಷಿಂಗ್ಟನ್‌ ನ್ಯಾಯಾಲಯವು ಈಚೆಗೆ 2015ರ ಸೆಪ್ಟೆಂಬರ್‌ 14ರ ತೀರ್ಪನ್ನು ದೇವಸ್‌ ಮಲ್ಟಿಮೀಡಿಯಾ ಪರವಾಗಿ ಜಾರಿಗೊಳಿಸುವಂತೆ ಸೂಚಿಸಿದ್ದು, 7,800 ಕೋಟಿ ರೂಪಾಯಿಗೆ ವಾರ್ಷಿಕ ಶೇ. 18ರ ಬಡ್ಡಿದರದಲ್ಲಿ ಪರಿಹಾರವನ್ನು ಠೇವಣಿ ಇಡುವಂತೆ ಆಂತರಿಕ್ಷ್‌ಗೆ ಸೂಚಿಸಿದೆ.

ಇಸ್ರೋನ ಎರಡು ಉಪಗ್ರಹಗಳಿಗೆ ಎರಡು ಎಸ್‌-ಬ್ಯಾಂಡ್‌ ಟ್ರಾನ್ಸ್‌ಪಾಂಡರ್ಸ್‌ ಅನ್ನು ಭೋಗ್ಯಕ್ಕೆ ನೀಡುವ ಬಗ್ಗೆ ದೇವಾಸ್‌ ಮತ್ತು ಆಂತರಿಕ್ಷ್‌ ನಡುವೆ 2005ರಲ್ಲಿ ಆಗಿದ್ದ ಒಪ್ಪಂದಕ್ಕೆ ಸಂಬಂಧಿಸಿದಂತೆ ಹಣ ಪಾವತಿಸುವಂತೆ ಆಂತರಿಕ್ಷ್‌ಗೆ ಸೂಚಿಸಲಾಗಿದೆ. ಮಲ್ಟಿಮೀಡಿಯಾ ಸೇವೆ ನೀಡುವ ಸಂಬಂಧ ಅವುಗಳನ್ನು ಬಳಸಲು ದೇವಾಸ್‌ ಯೋಜಿಸಿತ್ತು. ಇಸ್ರೋವಿನ ಕೆಲವು ಮಾಜಿ ಉದ್ಯೋಗಿಗಳು ದೇವಾಸ್‌ನ ಪ್ರವರ್ತರಾಗಿದ್ದಾರೆ. ಸಾರ್ವಭೌಮತ್ವದ ಕಾರಣ ನೀಡಿ ಕೇಂದ್ರ ಸರ್ಕಾರವು 2011ರ ಫೆಬ್ರವರಿಯಲ್ಲಿ ವಿವಾದಾತ್ಮಕ ಒಪ್ಪಂದವನ್ನು ರದ್ದುಗೊಳಿಸಿತ್ತು. ಒಪ್ಪಂದ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ತನಗಾದ ನಷ್ಟವನ್ನು ಉಲ್ಲೇಖಿಸಿ ಆಂತರಿಕ್ಷ್‌ ವಿರುದ್ಧ ದೇವಾಸ್‌ ದೂರು ದಾಖಲಿಸಿತು.

ಆಂತರಿಕ್ಷ್‌ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆ ಮತ್ತು ಸಂಧಾನ ಕಾಯಿದೆಯ ಸೆಕ್ಷನ್‌ 9ರ ಅಡಿ ಅರ್ಜಿ ದಾಖಲಿಸಿತು. ಇತ್ತ ಪರಿಹಾರದ ಹಣವನ್ನು ಪಡೆಯಲು ಸೆಕ್ಷನ್‌ 9ರ ಅಡಿ ದೇವಾಸ್‌ ದೆಹಲಿ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿತು. ಮಧ್ಯಸ್ಥಿಕೆ ಕಾಯಿದೆಯ ಸೆಕ್ಷನ್‌ 34ರ ಅಡಿ ಮಧ್ಯಸ್ಥಿಕೆ ತೀರ್ಪು ಜಾರಿಗೊಳಿಸುವ ದೇವಾಸ್‌ ಆಗ್ರಹವನ್ನು ನಿರ್ಬಂಧಿಸಲು ಕೋರಿ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಆಂತರಿಕ್ಷ್‌ ಮನವಿ ಮಾಡಿತ್ತು.

ಈ ನಡುವೆ, ದೇವಾಸ್‌ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾಗೊಳಿಸುವ ಮೂಲಕ ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಲು ಅನುಮತಿಸಿತ್ತು. ಇದಕ್ಕೆ 2018ರಲ್ಲಿ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿದ್ದರಿಂದ ಬೆಂಗಳೂರಿನಲ್ಲಿ ಸೆಕ್ಷನ್‌ 34ರ ವಿಚಾರಣೆಗೂ ತಡೆ ಬಿದ್ದಿತು.

ಈ ಮಧ್ಯೆ, ಅಮೆರಿಕಾ ಸೇರಿದಂತೆ ಪ್ರಪಂಚದ ವಿವಿಧೆಡೆ ಮಧ್ಯಸ್ಥಿಕೆ ತೀರ್ಪು ಜಾರಿ ಪ್ರಕ್ರಿಯೆ ಕುರಿತು ಮನವಿ ದಾಖಲಿಸಲಾಗಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಅಮೆರಿಕಾದ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಲಾದ ದಾವೆಯಲ್ಲಿ ಮೂರು ಪ್ರತ್ಯೇಕ ಅಂತಾರಾಷ್ಟ್ರೀಯ ನ್ಯಾಯಾಧಿಕರಣಗಳು ಮತ್ತು ಒಂಭತ್ತು ವಿಭಿನ್ನ ಮಧ್ಯಸ್ಥಿಕೆಗಾರರು ದೇವಾಸ್‌-ಆಂತರಿಕ್ಷ್‌ ಒಪ್ಪಂದ ರದ್ದತಿಯು ತಪ್ಪು ಎಂದು ಹೇಳಿದ್ದಾರೆ ಎಂದು ದೇವಾಸ್‌ ವಿವರಿಸಿದೆ. ಭಾರತವು ಸಾಮಾನ್ಯ ನಂಬುಗೆಯನ್ನು ಉಲ್ಲಂಘಿಸಿದೆ ಎಂದು ನ್ಯಾಯಾಧಿಕರಣವೊಂದು ಸ್ಪಷ್ಟವಾಗಿ ಗುರುತಿಸಿದೆ ಎಂದು ದೇವಾಸ್‌ ಹೇಳಿದೆ.

ಉಭಯ ಪಕ್ಷಕಾರರು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಅಮೆರಿಕಾದ ನ್ಯಾಯಾಲಯವು ಮಧ್ಯಸ್ಥಿಕೆ ತೀರ್ಪಿನ ಜಾರಿಯನ್ನು ಒಂದು ವರ್ಷದವರೆಗೆ ತಡೆಹಿಡಿದಿತ್ತು. 2020ರ ಸೆಪ್ಟೆಂಬರ್‌ 17ರಲ್ಲಿ ತಡೆ ಹಿಂಪಡೆಯಲಾಗಿದ್ದು, 2015ರ ಮಧ್ಯಸ್ಥಿಕೆ ತೀರ್ಪನ್ನು ದೇವಾಸ್‌ ಪರ ನೀಡಲಾಗಿದೆ.

ಏತನ್ಮಧ್ಯೆ, ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌ ಮತ್ತು ಇಂದೂ ಮಲ್ಹೋತ್ರಾ ಅವರಿದ್ದ ಪೀಠವು ಮಧ್ಯಸ್ಥಿಕೆ ತೀರ್ಪನ್ನು ತಡೆ ಹಿಡಿದಿದ್ದು, ಸೆಕ್ಷನ್‌ 34ರ ವಿಚಾರಣೆಯನ್ನು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಿಂದ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಗಿದೆ ಎಂದು ಹೇಳಿದೆ.

ಕಾಯಿದೆಯ ಸೆಕ್ಷನ್‌ 34ರ ಅಡಿ ಆಂತರಿಕ್ಷ್‌ ಸಲ್ಲಿಸಿರುವ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯ ವಿಚಾರಣೆ ನಡೆಸಬೇಕೋ ಅಥವಾ ದೆಹಲಿ ಹೈಕೋರ್ಟ್‌ ನಡೆಸಬೇಕೋ ಎಂಬ ಪ್ರಮುಖ ವಿಚಾರ ತಮ್ಮ ಮುಂದಿರುವುದಾಗಿ ಸುಪ್ರೀಂ ಕೋರ್ಟ್‌ ಹೇಳಿತು. “ಮಧ್ಯಸ್ಥಿಕೆ ತೀರ್ಪಿಗೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್‌ 34ರ ಅಡಿ ಮಧ್ಯಸ್ಥಿಕೆ ತೀರ್ಪಿಗೆ ಆಕ್ಷೇಪಣೆ ಸಲ್ಲಿಸಿರುವುದನ್ನು ವಿಚಾರಣೆ ನಡೆಸದೇ ತೀರ್ಪನ್ನು ಜಾರಿಗೊಳಿಸಲು ಪಕ್ಷಕಾರರಿಗೆ ಅನುವು ಮಾಡಿಕೊಡುವುದು ಅಧರ್ಮವಾಗುತ್ತದೆ” ಎಂದು ತ್ರಿಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

Also Read
ಜಾತಿಯ ಕಾರಣದಿಂದಲ್ಲದೆ ಎಸ್ಸಿ/ಎಸ್ಟಿ ವ್ಯಕ್ತಿಯನ್ನು ಅವಮಾನಿಸುವುದು ಎಸ್ಸಿ/ಎಸ್ಟಿ ಕಾಯಿದೆಯಡಿ ಅಪರಾಧವಲ್ಲ: ಸುಪ್ರೀಂ

ಮಧ್ಯಸ್ಥಿಕೆ ಒಪ್ಪಂದ ವಿವಾದವೂ ಸೇರಿದಂತೆ ಇಡೀ ಒಪ್ಪಂದದಲ್ಲಿ ಗಂಭೀರ ವಂಚನೆ ನಡೆದಿರುವುದು ಭಾರತ ಸರ್ಕಾರದ ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಮಧ್ಯಸ್ಥಿಕೆ ಸಾಧ್ಯತೆಯನ್ನು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅಲ್ಲಗಳೆದಿದ್ದಾರೆ.

“ಸದ್ಯದ ವಿಶೇಷ ಮನವಿಗೆ ಸಂಬಂಧಿಸಿದಂತೆ ತೀರ್ಪು ಬಾಕಿ ಇರುವ ಈ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪಿಗೆ ವಿರುದ್ಧವಾಗಿ ಆಂತರಿಕ್ಷ್‌ ಕಾರ್ಪೊರೇಷನ್‌ ಲಿಮಿಟೆಡ್‌ ಸೆಕ್ಷನ್‌ 34ರ ಅಡಿ ಆಕ್ಷೇಪಣೆ ಮುಂದುವರೆಸುವುದಕ್ಕೆ ಸುಪ್ರೀಂ ಕೋರ್ಟ್‌ನಿಂದ ಅರ್ಜಿದಾರರಾದ ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್ ಲಿಮಿಟೆಡ್ ತಡೆಯಾಜ್ಞೆ ಪಡೆದುಕೊಳ್ಳುವುದಕ್ಕೆ ಅನುಮತಿ ನೀಡುವ ಮೂಲಕ ಯಾವುದೇ ಕಾನೂನು ಅಥವಾ ಒಪ್ಪಿತ ರೀತಿಯಂತೆ ಮಧ್ಯಸ್ಥಿಕೆ ತೀರ್ಪಿನ ಫಲಾಫಲಗಳನ್ನು ಪಡೆಯಲು ಅರ್ಜಿದಾರರಾದ ದೇವಾಸ್‌ ಮಲ್ಟಿಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ಗೆ ಅವಕಾಶ ಕಲ್ಪಿಸುವುದು ಅಧರ್ಮವಾಗುತ್ತದೆ .”

ಸುಪ್ರೀಂ ಕೋರ್ಟ್‌ ಆದೇಶ

ಕಾಯಿದೆಯ ಸೆಕ್ಷನ್‌ 34ರ ವಿಚಾರಣಾ ಪ್ರಕ್ರಿಯೆಯ ಭಾಗವಾದ ತಡೆಯಾಜ್ಞೆ ಮನವಿಯ ಕುರಿತು ದೆಹಲಿ ಹೈಕೋರ್ಟ್‌ ನಿರ್ಧಾರ ಕೈಗೊಳ್ಳುವವರೆಗೂ ಮಧ್ಯಸ್ಥಿಕೆ ತೀರ್ಪು ಜಾರಿಯನ್ನು ತಡೆಹಿಡಿಯಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಪೀಠ ಹೇಳಿದೆ. ತನಗೆ ನೀಡಬೇಕೆಂದು ಘೋಷಣೆಯಾಗಿರುವ ಮೊತ್ತ ಅಥವಾ ಅದರ ಅಲ್ಪಭಾಗವನ್ನು ದೆಹಲಿ ಹೈಕೋರ್ಟ್‌ನಲ್ಲಿ ಠೇವಣಿ ಇಡುವಂತೆ ದೇವಾಸ್‌ ಮಲ್ಟಿಮೀಡಿಯಾ ಕೋರಬಹುದಾಗಿದೆ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ.

ಹಿರಿಯ ವಕೀಲರಾದ ಮುಕುಲ್‌ ರೋಹ್ಟಗಿ, ಕೆ ವಿ ವಿಶ್ವನಾಥನ್‌, ಸಜ್ಜನ್‌ ಪೂವಯ್ಯ, ರಾಜೀವ್‌ ನಾಯರ್‌, ಓಮರ್‌ ಅಹ್ಮದ್‌, ಇಶಾನ್‌ ಗೌರ್‌, ವಿಕ್ರಂ ಶಾ, ಅಮೋಲ್‌ ಗುಪ್ತಾ, ಸಿಮ್ರಾನ್‌ ಖೋರಾನಾ ಮತ್ತು ಸುಮಿತ್‌ ಅತ್ರಿ ಅವರು ದೇವಾಸ್‌ ಪರ ವಾದಿಸಿದರು. ಆಂತರಿಕ್ಷ್‌ ಪ್ರತಿನಿಧಿಸಿದ್ದ ಸಂವಾದ್‌ ಪಾಟ್ನರ್ಸ್‌ ಅಟಾರ್ನಿ ಜನರಲ್‌ ಮತ್ತು ಸಾಲಿಸಿಟರ್‌ ಜನರಲ್‌ ಅವರಿಗೆ ವಿವರಣೆ ನೀಡಿತು. ವಕೀಲರಾದ ಅರ್ಜುನ್‌ ಕೃಷ್ಣನ್‌, ಅಂಕುರ್‌ ಸಿಂಗ್‌ ಮತ್ತು ಶೌರ್ಯ ಬರಿ ಅವರು ಸಂವಾದ್‌ ತಂಡದಲ್ಲಿದ್ದರು.

Kannada Bar & Bench
kannada.barandbench.com