ಜಾತಿ ನಿಂದನೆ ಆರೋಪ: ನಟಿ ಮುನ್‌ಮುನ್‌ ದತ್ತ ವಿರುದ್ದದ ಆರು ಎಫ್‌ಐಆರ್‌ಗಳ ಪೈಕಿ ಐದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ

ಹರ್ಯಾಣದ ಹನ್ಸಿಯಲ್ಲಿ ದಾಖಲಾಗಿರುವ ಮೊದಲ ಎಫ್‌ಐಆರ್‌ನೊಂದಿಗೆ ಉಳಿದ ಎಫ್‌ಐಆರ್‌ಗಳನ್ನು ಮಿಳಿತಗೊಳಿಸುವಂತೆ ನ್ಯಾ. ಹೇಮಂತ್‌ ಗುಪ್ತ ಅವರ ನೇತೃತ್ವದ ಪೀಠ ಆದೇಶಿಸಿದೆ.
ಜಾತಿ ನಿಂದನೆ ಆರೋಪ: ನಟಿ ಮುನ್‌ಮುನ್‌ ದತ್ತ ವಿರುದ್ದದ ಆರು ಎಫ್‌ಐಆರ್‌ಗಳ ಪೈಕಿ ಐದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ
Munmun datta , Supreme court

ಹಿಂದಿ ಧಾರಾವಾಹಿ ನಟಿ ಮುನ್‌ಮುನ್‌ ದತ್ತ ಅವರ ವಿರುದ್ಧ ಜಾತಿ ನಿಂದನೆ ಆರೋಪದಡಿ ದೇಶದ ವಿವಿಧೆಡೆ ದಾಖಲಾಗಿದ್ದ ಆರು ಎಫ್‌ಐಆರ್‌ಗಳ ಪೈಕಿ ಐದಕ್ಕೆ ಸುಪ್ರೀಂಕೋರ್ಟ್‌ ಶುಕ್ರವಾರ ತಡೆ ನೀಡಿದೆ. ʼತಾರಕ್‌ ಮೆಹ್ತಾ ಕಾ ಉಲ್ಟಾ ಚಶ್ಮಾʼ ಧಾರಾವಾಹಿಯ ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ವಿಡಿಯೊ ಒಂದರಲ್ಲಿ ಪರಿಶಿಷ್ಟ ಜಾತಿಯ ವಿರುದ್ಧ ನಿಂದನಾತ್ಮಕ ಪದ ಪ್ರಯೋಗ ಮಾಡಿದ್ದಾರೆ ಎಂಬ ಕಾರಣಕ್ಕೆ ಈ ಎಫ್‌ಐಆರ್‌ಗಳು ದಾಖಲಾಗಿದ್ದವು.

ಆಕ್ಷೇಪಾರ್ಹವಾದ ವಿಡಿಯೊದಲ್ಲಿ ʼಭಂಗಿʼ (ವಾಲ್ಮೀಕಿ) ಪದ ಬಳಿಸಿದ್ದಕ್ಕೆ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆಯ ಸೆಕ್ಷನ್‌ 3(1)(ಯು)ರ ಅಡಿ ಹರ್ಯಾಣ, ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್‌ ಮತ್ತು ಮಧ್ಯಪ್ರದೇಶದಲ್ಲಿ ದೂರು ದಾಖಲಿಸಲಾಗಿದೆ. ಹರ್ಯಾಣದಲ್ಲಿ ದಾಖಲಾಗಿರುವ ಎಫ್‌ಐಆರ್‌ ಹೊರತುಪಡಿಸಿ ಉಳಿದ ಕಡೆಗಳಲ್ಲಿ ದಾಖಲಿಸಲಾಗಿರುವ ಎಫ್‌ಐಆರ್‌ಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ನ್ಯಾಯಾಲಯವು ಹರ್ಯಾಣದ ಹನ್ಸಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಜೊತೆಗೆ ಉಳಿದವನ್ನು ಮಿಳಿತಗೊಳಿಸಿದೆ.

ರಾಷ್ಟ್ರೀಯ ದಲಿತರ ಹಕ್ಕುಗಳ ಒಕ್ಕೂಟದ ಸಂಚಾಲಕ ರಜತ್‌ ಕಲ್ಸನ್‌ ದೂರು ಆಧರಿಸಿ ಹರ್ಯಾಣದ ಹನ್ಸಿ ಪಟ್ಟಣದಲ್ಲಿ ಮುನ್‌ಮುನ್‌ ದತ್ತ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಈ ಸಂಬಂಧ ಕಲ್ಸನ್‌ ಅವರಿಗೆ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ.

Also Read
ಜಾತಿ ಅಸಮಾನತೆ ತಡೆಗೆ ರಾಜ್ಯದ ಹಸ್ತಕ್ಷೇಪ ಅನಿವಾರ್ಯ ಎಂಬುದು ಸಂವಿಧಾನಶಿಲ್ಪಿಗಳಿಗೆ ಗೊತ್ತಿತ್ತು: ನ್ಯಾ. ಚಂದ್ರಚೂಡ್‌

ಭಂಗಿ ಪದವನ್ನು ʼಅಮಲು/ಮತ್ತುʼ ಎಂಬ ಅರ್ಥದಲ್ಲಿ ಮುನ್‌ಮುನ್‌ ದತ್ತ ಬಳಸಿದ್ದಾರೆ ಎಂದು ಆರೋಪಿಯ ಪರ ಹಿರಿಯ ವಕೀಲ ಪುನೀತ್‌ ಬಾಲಿ ಹೇಳಿದರು. ಇದಕ್ಕೆ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ಹೇಮಂತ್‌ ಗುಪ್ತ ಅವರು “ಅದು ಸರಿಯಾದ ಅರ್ಥ ಕೊಡುವುದಿಲ್ಲ” ಎಂದರು.

ತಮ್ಮ ಹೇಳಿಕೆಗೆ ಸ್ಪಷ್ಟೀಕರಣ ನೀಡಿರುವ ನಟಿ ದತ್ತ “ವಿಡಿಯೊದಲ್ಲಿ ನಾನು ಬಳಸಿದ ಒಂದು ಪದವನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ವ್ಯಕ್ತಿಯ ಭಾವನೆಗೆ ಭಂಗ ಅಥವಾ ನೋವು ಉಂಟು ಮಾಡುವ ಉದ್ದೇಶದಿಂದ ಅದನ್ನು ಬಳಸಿಲ್ಲ. ಭಾಷೆಯ ಅರಿವಿನ ಕೊರತೆಯಿಂದ ಸಮಸ್ಯೆಯಾಗಿರಬಹುದು. ನಾನು ಬಳಸಿರುವ ಪದ ಪ್ರಯೋಗ ತಪ್ಪು ಎಂದು ಅರಿವಾದ ತಕ್ಷಣ ಆ ಭಾಗವನ್ನು ಹಿಂಪಡೆದಿದ್ದೇನೆ. ಎಲ್ಲಾ ಜಾತಿ, ಧರ್ಮ, ಲಿಂಗದ ಜನರು ಸಮಾಜ ಅಥವಾ ದೇಶಕ್ಕಾಗಿ ನೀಡಿರುವ ಕೊಡುಗೆಯ ಬಗ್ಗೆ ಅಪಾರ ಗೌರವವಿದೆ” ಎಂದಿದ್ದಾರೆ.

Related Stories

No stories found.