ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ: ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ-ಸಿಎಂ ಬಿಎಸ್‌ವೈ ನಿರಾಳ
BS Yediyurappa and Supreme Court

ಅಕ್ರಮ ಡಿನೋಟಿಫಿಕೇಷನ್‌ ಪ್ರಕರಣ: ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂ-ಸಿಎಂ ಬಿಎಸ್‌ವೈ ನಿರಾಳ

ಸಿಎಂ ಯಡಿಯೂರಪ್ಪ ವಿರುದ್ಧದ ವಿಚಾರಣೆಯನ್ನು 2016ರಲ್ಲಿ ಸೆಷನ್ಸ್‌ ನ್ಯಾಯಾಲಯ ಕೈಬಿಟ್ಟಿತ್ತು. ಇದನ್ನು ಪುನಾರಂಭಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಮನವಿಗೆ 17ರಂದು ಏಕಸದಸ್ಯ ಪೀಠವು ಅಸ್ತು ಎಂದಿತ್ತು.

ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣಕ್ಕೆ ಮರು ಚಾಲನೆ ನೀಡಿದ್ದ ಕರ್ನಾಟಕ ಹೈಕೋರ್ಟ್‌ ಆದೇಶಕ್ಕೆ ಸುಪ್ರೀ ಕೋರ್ಟ್‌ ಸೋಮವಾರ ತಡೆಯಾಜ್ಞೆ ನೀಡಿದೆ.

ಕರ್ನಾಟಕ ಹೈಕೋರ್ಟ್‌ ಆದೇಶ ಪ್ರಶ್ನಿಸಿದ್ದ ಯಡಿಯೂರಪ್ಪ ಅವರ ಮನವಿಗೆ ಸಂಬಂಧಿಸಿದಂತೆ ನೋಟಿಸ್‌ ಜಾರಿಗೊಳಿಸಿರುವ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ವಿಚಾರಣೆಗೆ ತಡೆ ನೀಡಿದೆ.

“ನಮಗೆ ಮಧ್ಯಂತರ ಆದೇಶಬೇಕಿದೆ. ವಿಚಾರಣಾಧೀನ ನ್ಯಾಯಾಲವು ಪ್ರಕರಣ ಮುಂದುವರಿಸಲಿದೆ” ಎಂದು ಯಡಿಯೂರಪ್ಪ ಅವರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಕೆ ವಿ ವಿಶ್ವನಾಥನ್‌ ಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯವು ಸಮ್ಮತಿಸಿತು.

ಪ್ರಕರಣದ ಹಿನ್ನೆಲೆ: ಉತ್ತರ ಬೆಂಗಳೂರಿನ 24 ಎಕರೆ ಡಿನೋಟಿಫಿಕೇಷನ್‌ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಹಲವರ ವಿರುದ್ಧದ ಹಳೆಯ ಪ್ರಕರಣಕ್ಕೆ ಮರು ಚಾಲನೆ ನೀಡುವಂತೆ ಕರ್ನಾಟಕ ಹೈಕೋರ್ಟ್‌ ಮಾರ್ಚ್ 17 ರಂದು ಆದೇಶಿಸಿತ್ತು.

ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರು ಆರೋಪಿಗಳ ವಿರುದ್ಧ ಆರೋಪಪಟ್ಟಿಯಲ್ಲಿ ನಿಗದಿಗೊಳಿಸಿದ ಅಪರಾಧಗಳನ್ನು ಪರಿಗಣಿಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶನ ನೀಡಿ, ಕಾನೂನಿನ ಪ್ರಕಾರ ಮುಂದುವರೆಯಬಹುದು ಎಂದು ತಿಳಿಸಿದ್ದರು.

ಪ್ರಕರಣಕ್ಕೆ ಚಾಲನೆ ನೀಡಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಆಲಂ ಪಾಷಾ ಅವರು 2016 ರಲ್ಲಿ ಮನವಿ ಸಲ್ಲಿಸಿದ್ದರು. ಬಿಜೆಪಿ ಮುಖಂಡ ಯಡಿಯೂರಪ್ಪ ಮತ್ತು ಆಗಿನ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಇತರರ ವಿರುದ್ಧ 2012 ರಲ್ಲಿ ದಾಖಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಷಾ ಮೂಲ ದೂರುದಾರರಾಗಿದ್ದರು. ಪೊಲೀಸರು ಪ್ರಕರಣ ಮುಚ್ಚುವ ಸಂಬಂಧ ಆಗ ಸೆಷನ್ಸ್‌ ನ್ಯಾಯಾಲಯ ತಪ್ಪಾಗಿ ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣವನ್ನು ಕೈ ಬಿಟ್ಟಿದೆ ಎಂದು ವಾದಿಸಿದ್ದರು. ಯಡಿಯೂರಪ್ಪ ಮತ್ತಿತರರು ತಮ್ಮ ಅಧಿಕಾರ ಬಳಸಿಕೊಂಡು ಉತ್ತರ ಬೆಂಗಳೂರಿನಲ್ಲಿ ಡಿನೋಟಿಫೈ ಮಾಡಿದ್ದ 24 ಎಕರೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಖಾಸಗಿಯವರಿಗೆ ಪರಭಾರೆ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬುದು ಆರೋಪದ ಸಾರವಾಗಿದೆ.

ಜಮೀನನ್ನು ಖಾಸಗಿಯವರಿಗೆ ನೀಡಿದ್ದು ಅಕ್ರಮ ಎಂದು 2012 ರ ದೂರಿನಲ್ಲಿ ಆರೋಪಿಸಲಾಗಿದೆ. ಯಡಿಯೂರಪ್ಪ ಮತ್ತು ನಾಯ್ಡು ಅವರ ವಿರುದ್ಧ ಯಾವುದೇ ಸಾಕ್ಷ್ಯಗಳನ್ನು ಸಂಗ್ರಹಿಸಲಾಗದ ಕಾರಣಕ್ಕೆ ಪ್ರಕರಣದಲ್ಲಿ ಹೆಸರಿಸಲಾದ ಒಂಬತ್ತು ಜನರ ವಿರುದ್ಧ ಪ್ರಕರಣಗಳನ್ನು ಕೈಬಿಟ್ಟು ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದರು. ಪೊಲೀಸರ ದೋಷಾರೋಪ ಪಟ್ಟಿ ಹೊರತಾಗಿಯೂ ಪ್ರಕರಣದ ಇತರ ಒಂಬತ್ತು ಜನರ ವಿರುದ್ಧದ ಪ್ರಕರಣವನ್ನು ಮುಚ್ಚಿಹಾಕಿ ವರದಿ ಸಲ್ಲಿಸಿದ್ದರಿಂದ ಇಡೀ ಪ್ರಕರಣವನ್ನು ಸೆಷನ್ಸ್‌ ನ್ಯಾಯಾಲಯ ಕೈಬಿಟ್ಟಿದೆ ಎಂದು ಅರ್ಜಿದಾರರು ವಾದ ಮಂಡಿಸಿದರು. ತನಿಖಾ ಸಂಸ್ಥೆ ಸಲ್ಲಿಸಿದ ‘ಬಿ’ ಸಾರಾಂಶ ವರದಿಯನ್ನು ಪರಿಗಣಿಸುವಾಗ ವಿಶೇಷ ನ್ಯಾಯಾಧೀಶರಿಗೆ ದೂರನ್ನು ವಜಾಗೊಳಿಸುವ ಅಧಿಕಾರವಿಲ್ಲ ಎಂದು ವಾದಿಸಲಾಯಿತು. ಇತ್ತ ಪ್ರತಿವಾದಿಗಳು ಕೂಡ ಅರ್ಜಿಯನ್ನು ಬಲವಾಗಿ ವಿರೋಧಿಸಿದರು.

Also Read
ಡಿನೋಟಿಫಿಕೇಷನ್: ಯಡಿಯೂರಪ್ಪ, ಕಟ್ಟಾ ವಿರುದ್ಧದ ಪ್ರಕರಣಕ್ಕೆ ಮತ್ತೆ ಚಾಲನೆ ನೀಡಲು ಕರ್ನಾಟಕ ಹೈಕೋರ್ಟ್ ಆದೇಶ

ವಾದಗಳನ್ನು ಆಲಿಸಿದ ಹೈಕೋರ್ಟ್‌ ಕಾನೂನಿನ ಅಡಿ ವಿಶೇಷ ನ್ಯಾಯಾಲಯದ ಆದೇಶವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬಿ ರಿಪೋರ್ಟ್‌ ಪರಿಗಣಿಸುವಾಗ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆಕ್ಷೇಪಾರ್ಹ ಆದೇಶ ಜಾರಿಗೊಳಿಸಿದ್ದಾರೆ ಎಂದಿತು. ಅಲ್ಲದೆ ಆರೋಪಿಗಳ ಸಂಖ್ಯೆ 1 ರಿಂದ 9 ರವರೆಗೆ ಸಲ್ಲಿಸಿದ ಅಂತಿಮ ವರದಿಯನ್ನು ವಿಶೇಷ ನ್ಯಾಯಾಲಯ ಪರಿಗಣಿಸಿಲ್ಲ ಮತ್ತು ಆ ವರದಿಯನ್ನು ಸ್ವೀಕರಿಸಲು ಅಥವಾ ತಿರಸ್ಕರಿಸಲು ಯಾವುದೇ ಆದೇಶವನ್ನು ಜಾರಿಗೊಳಿಸಲಾಗಿಲ್ಲಎಂದು ವಿವರಿಸಿತು.

ದೂರಿನಲ್ಲಿ ಯಾವುದೇ ಆರೋಪ ಇಲ್ಲದಿರುವುದರಿಂದ ಯಡಿಯೂರಪ್ಪ ಮತ್ತು ಕಟ್ಟಾ ಸುಬ್ರಮಣ್ಯ ನ್ಯಾಯ್ಡು ಅವರ ಹೆಸರನ್ನು ಪರಿಗಣಿಸಲಾಗಿಲ್ಲ ಎಂಬ ವಿಶೇಷ ನ್ಯಾಯಾಧೀಶರ ತಾರ್ಕಿಕತೆ ಕಾನೂನಿನಡಿ ಇತ್ಯರ್ಥಗೊಂಡ ತತ್ವಗಳಿಗೆ ವಿರುದ್ಧವಾಗಿದ್ದು ಅದನ್ನು ಒಪ್ಪಲಾಗದು. ಅಂತೆಯೇ ಆರೋಪಗಳಿಗೆ ಪೂರಕವಾಗಿ ಸಲ್ಲಿಸಿದ ಅಫಿಡವಿಟ್‌ಗಾಗಿ ಮೂಲ ದೂರನ್ನು ವಜಾ ಮಾಡಬೇಕೆಂಬ ವಿಶೇಷ ನ್ಯಾಯಾಲಯದ ತಾರ್ಕಿಕತೆ ಕಾನೂನಿನ ಮೂಲತತ್ವಗಳ ತಪ್ಪು ಕಲ್ಪನೆಯನ್ನು ಆಧರಿಸಿದ್ದು ಪ್ರಿಯಾಂಕಾ ಶ್ರೀವಾಸ್ತವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದ ಹೈಕೋರ್ಟ್,‌ ವಿಶೇಷ ನ್ಯಾಯಾಲಯದ 2016 ರ ಆದೇಶವನ್ನು ತಳ್ಳಿಹಾಕಿತು.

Related Stories

No stories found.
Kannada Bar & Bench
kannada.barandbench.com