ಕೆಟ್ಟ ಕೇಶ ವಿನ್ಯಾಸ: ₹2 ಕೋಟಿ ಪರಿಹಾರ ನೀಡಲು ಐಟಿಸಿ ಕಂಪೆನಿಗೆ ಸೂಚಿಸಿದ್ದ ಎನ್‌ಸಿಡಿಆರ್‌ಸಿ ಆದೇಶಕ್ಕೆ ಸುಪ್ರೀಂ ತಡೆ

ಆಯೋಗದ ತೀರ್ಪು ಪ್ರಶ್ನಿಸಿ ಐಟಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರಕರಣದ ಪ್ರತಿವಾದಿ ಆಶ್ನಾ ರಾಯ್ ಅವರಿಗೆ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ನೋಟಿಸ್ ನೀಡಿತು.
ಕೆಟ್ಟ ಕೇಶ ವಿನ್ಯಾಸ: ₹2 ಕೋಟಿ ಪರಿಹಾರ ನೀಡಲು ಐಟಿಸಿ ಕಂಪೆನಿಗೆ ಸೂಚಿಸಿದ್ದ ಎನ್‌ಸಿಡಿಆರ್‌ಸಿ ಆದೇಶಕ್ಕೆ ಸುಪ್ರೀಂ ತಡೆ
A1

ದೆಹಲಿಯ ಐಟಿಸಿ ಮೌರ್ಯ ಹೋಟೆಲ್‌ನಲ್ಲಿ ಸೂಕ್ತವಲ್ಲದ ಕೇಶ ವಿನ್ಯಾಸ ಮಾಡಿದ್ದಕ್ಕಾಗಿ ಹಾಗೂ ಆನಂತರ ನಿರ್ಲಕ್ಷ್ಯದಿಂದ ಕೇಶಚಿಕಿತ್ಸೆ ಮಾಡಿದ್ದಕ್ಕಾಗಿ ಮಹಿಳೆಯೊಬ್ಬರಿಗೆ ₹ 2 ಕೋಟಿ ಪರಿಹಾರ ನೀಡುವಂತೆ ತಾನು ನೀಡಿದ್ದ ಆದೇಶ ಎತ್ತಿ ಹಿಡಿದಿದ್ದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ (ಎನ್‌ಸಿಡಿಆರ್‌ಸಿ) ಆದೇಶಕ್ಕೆ ಸುಪ್ರೀಂ ಕೋರ್ಟ್‌ ಬುಧವಾರ ತಡೆ ನೀಡಿದೆ. [ಐಟಿಸಿ ಲಿಮಿಟೆಡ್ ಮತ್ತು ಅಶ್ನಾ ರಾಯ್ ನಡುವಣ ಪ್ರಕರಣ].

ಎನ್‌ಸಿಡಿಆರ್‌ಸಿ ತೀರ್ಪು ಪ್ರಶ್ನಿಸಿ  ಐಟಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ಪ್ರಸ್ತುತ ಪ್ರಕರಣದ ಪ್ರತಿವಾದಿ ಆಶ್ನಾ ರಾಯ್‌ ಅವರಿಗೆ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧುಲಿಯಾ ಅವರಿದ್ದ ಪೀಠ ನೋಟಿಸ್‌ ನೀಡಿತು.

ಇದು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕರಣದ ಎರಡನೇ ಸುತ್ತಿನ ವ್ಯಾಜ್ಯವಾಗಿದೆ. ಐಟಿಸಿ  ₹ 2 ಕೋಟಿ ಪರಿಹಾರ ನೀಡುವಂತೆ ಎನ್‌ಸಿಡಿಆರ್‌ಸಿ ಸೆಪ್ಟೆಂಬರ್‌ 2021ರಲ್ಲಿ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಳೆದ ಫೆಬ್ರವರಿಯಲ್ಲಿ ರದ್ದುಪಡಿಸಿ ಹೊಸದಾಗಿ ಪ್ರಕರಣವನ್ನು ನಿರ್ಧರಿಸುವಂತೆ ಎನ್‌ಸಿಡಿಆರ್‌ಸಿಗೆ ಸೂಚಿಸಿತ್ತು. ಪ್ರಕರಣವನ್ನು ಮತ್ತೆ ವಿಚಾರಣೆ ನಡೆಸಿದ್ದ ಎನ್‌ಸಿಡಿಆರ್‌ಸಿ ತಾನು ಈ ಹಿಂದೆ ನೀಡಿದ್ದ ಆದೇಶವನ್ನು ಪುನರುಚ್ಚರಿಸಿತ್ತು.

ಅರ್ಜಿದಾರರು ಪ್ರಸ್ತುತಪಡಿಸಿದ ಪ್ರಸ್ತಾವಿತ ರೂಪದರ್ಶಿ ಮತ್ತು ನಟನೆ ಒಪ್ಪಂದದ ಕುರಿತಾದ ಇಮೇಲ್‌ ಮತ್ತು ಅರ್ಜಿಗಳನ್ನು ಆಧರಿಸಿ ಆಯೋಗ ತನ್ನ ಆದೇಶವನ್ನು ಮರುದೃಢೀಕರಿಸಿತ್ತು.

ಪರಿಹಾರ ನೀಡುವ ಮೊದಲ ಆದೇಶ ಸೆಪ್ಟೆಂಬರ್ 2021ರಲ್ಲಿ ಹೊರಡಿಸಲಾಗಿದ್ದರಿಂದ ಪ್ರತಿವಾದಿಯಾದ ಐಟಿಸಿ ಹೋಟೆಲ್‌ ಆ ದಿನದಿಂದ ಶೇ 9ರಷ್ಟು ಬಡ್ಡಿಯೊಂದಿಗೆ ಪರಿಹಾರದ ಮೊತ್ತ ಪಾವತಿಸಬೇಕು ಎಂದು ಸೂಚಿಸಿತ್ತು.

ಐಟಿಸಿ ಹೊಟೇಲ್ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಇಂದು ಸುಪ್ರೀಂ ಕೋರ್ಟ್‌ನಲ್ಲಿ ಹಾಜರಿದ್ದರು.

ಪ್ರಕರಣದ ಹಿನ್ನೆಲೆ ಅರಿಯಲು ಈ ಸುದ್ದಿ ಓದಿ:

Also Read
ಕೆಟ್ಟ ಕೇಶ ವಿನ್ಯಾಸ: ಎನ್‌ಸಿಡಿಆರ್‌ಸಿ ಆದೇಶಿಸಿದ್ದ ₹2 ಕೋಟಿ ಪರಿಹಾರ ರದ್ದು; ಹೊಸದಾಗಿ ಪರಿಗಣಿಸಲು ಸುಪ್ರೀಂ ಸೂಚನೆ

Related Stories

No stories found.
Kannada Bar & Bench
kannada.barandbench.com