ಸರ್ಕಾರದ ಕುರಿತ ವಸ್ತುವಿಷಯಗಳ ಮೇಲೆ ನಿಗಾ ಇಡುವ ಸತ್ಯ ಪರಿಶೀಲನಾ ಘಟಕಗಳ ಸ್ಥಾಪನೆಗೆ ಸುಪ್ರೀಂ ಕೋರ್ಟ್ ತಡೆ

ಕೇಂದ್ರ ಕುರಿತ ಆನ್‌ಲೈನ್‌ ವಸ್ತುವಿಷಯವನ್ನು ಸ್ವಹಿತಾಸಕ್ತಿಯಿಂದ ಸೆನ್ಸಾರ್‌ ಮಾಡುವಂತೆ ಸಾಮಾಜಿಕ ಮಾಧ್ಯಮ ಕಂಪೆನಿಗಳನ್ನು ಸತ್ಯ ಪರಿಶೀಲನಾ ಘಟಕಗಳು ಒತ್ತಾಯಿಸುತ್ತವೆ ಎಂದು ಹಾಸ್ಯ ಕಲಾವಿದ ಕುನಾಲ್ ಕಮ್ರಾ ಆತಂಕ ವ್ಯಕ್ತಪಡಿಸಿದ್ದರು.
ಕುನಾಲ್ ಕಮ್ರಾ, ಸುಪ್ರೀಂ ಕೋರ್ಟ್
ಕುನಾಲ್ ಕಮ್ರಾ, ಸುಪ್ರೀಂ ಕೋರ್ಟ್ಕುನಾಲ್ ಕಮ್ರಾ (ಫೇಸ್‌ಬುಕ್‌)

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ಸಂಸ್ಥೆಗಳಿಗೆ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ತಿದ್ದುಪಡಿ ನಿಯಮಾವಳಿ- 2023ರ ಅಡಿಯಲ್ಲಿ ಸತ್ಯ ಪರಿಶೀಲನಾ ಘಟಕ (ಫ್ಯಾಕ್ಟ್‌ ಚೆಕ್‌ ಘಟಕಗಳು- ಎಫ್‌ಸಿಯು) ರಚಿಸುವಂತೆ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ [ಕುನಾಲ್ ಕಮ್ರಾ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಕೇಂದ್ರ ಸರ್ಕಾರದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸುಳ್ಳು ಅಥವಾ ನಕಲಿ ಆನ್‌ಲೈನ್‌ ಸುದ್ದಿಗಳನ್ನು ಗುರುತಿಸಿ ಟ್ಯಾಗ್‌ ಮಾಡುವ ಅಧಿಕಾರ ಹೊಂದಿರುವ ಸತ್ಯ ಪರಿಶೀಲನಾ ಘಟಕಗಳ ಸ್ಥಾಪನೆಗೆ ಕೇಂದ್ರ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಧಿಸೂಚನೆ ಹೊರಡಿಸಲು 2023ರ ಐಟಿ ತಿದ್ದುಪಡಿ ನಿಯಮಾವಳಿ ಅನುವು ಮಾಡಿಕೊಡುತ್ತದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನೇತೃತ್ವದಲ್ಲಿ ಪ್ರೆಸ್‌ ಇನ್ಫರ್ಮೇಶನ್‌ ಬ್ಯೂರೋ (ಪಿಐಬಿ) ಅಡಿ ಸತ್ಯ ಪರಿಶೀಲನಾ ಘಟಕ ಸ್ಥಾಪಿಸಲು ಕೇಂದ್ರ ಸರ್ಕಾರ ನಿನ್ನೆ (ಮಾ. 20) ಅಧಿಸೂಚನೆ ಹೊರಡಿಸಿತ್ತು.

ಐಟಿ ನಿಯಮಾವಳಿಗಳ ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಗಂಭೀರ ಸಾಂವಿಧಾನಿಕ ಪ್ರಶ್ನೆಗಳನ್ನು ಒಳಗೊಂಡಿದ್ದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅದರ ಪರಿಣಾಮವನ್ನು ಬಾಂಬೆ ಹೈಕೋರ್ಟ್ ವಿಶ್ಲೇಷಿಸುವ ಅಗತ್ಯವಿದೆ ಎಂದು ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ, ಎಫ್‌ಸಿಯು ಸ್ಥಾಪಿಸುವ ಅಧಿಸೂಚನೆಗೆ ತಡೆ ನೀಡಲು ಅದು ಮುಂದಾಯಿತು.

ಎಫ್‌ಸಿಯು ಸ್ಥಾಪನೆಗೆ ಹೊರಡಿಸಲಾದ ಅಧಿಸೂಚನೆಗೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಕುನಾಲ್‌ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜಿನ್ಸ್‌ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಪೀಠ ಈ ಆದೇಶ ನೀಡಿದೆ.

ಎಫ್‌ಸಿಯು ಸ್ಥಾಪಿಸದಂತೆ ತಡೆಯಾಜ್ಞೆ ನೀಡಬೇಕು ಎಂದು ಕೋರಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಮಾರ್ಚ್ 11ರಂದು ತಿರಸ್ಕರಿಸಿತ್ತು.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ಕುನಾಲ್ ಕಮ್ರಾ ಪರವಾಗಿ ಹಾಜರಾದ ಹಿರಿಯ ವಕೀಲ ಡೇರಿಯಸ್ ಖಂಬಟಾ "ಮಧ್ಯಸ್ಥ ಸಂಸ್ಥೆಗಳು ಅಪಾಯ ಎದುರುಹಾಕಿಕೊಳ್ಳುವ ಬದಲು ವಾಸ್ತವಾಂಶ ಪರಿಶೀಲನಾ ಘಟಕಗಳು ಗುರುತಿಸುವ ವಸ್ತುವಿಷಯವನ್ನು ತೆಗೆದುಹಾಕುತ್ತವೆ. ಇದು ವಾಕ್‌ ಸ್ವಾತಂತ್ರ್ಯದ ಮೇಲೆ ತಲ್ಲಣಗೊಳಿಸುವಂತಹ ಪರಿಣಾಮ ಬೀರುತ್ತದೆ. ಯಾವುದೇ ಮಧ್ಯಸ್ಥ ಸಂಸ್ಥೆ ಈ ನಿಯಮಾವಳಿಯನ್ನು ಪ್ರಶ್ನಿಸಿಲ್ಲ ಏಕೆಂದರೆ ಅವರು ತಮ್ಮ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುತ್ತಿರುತ್ತಾರೆ" ಎಂದರು.

ಅಲ್ಲದೆ ನಿಯಮಾವಳಿ ಕೇಂದ್ರ ಸರ್ಕಾರವನ್ನು ರಕ್ಷಿಸುವತ್ತ ಏಕೆ ಕೇಂದ್ರೀಕರಿಸಿವೆ ಎಂದು ಪ್ರಶ್ನಿಸಿದರು. "ಚುನಾವಣೆ ಬರುತ್ತಿದ್ದು ಸಾರ್ವಜನಿಕರಿಗೆ ಸರ್ಕಾರದ ಬಗ್ಗೆ ಎಲ್ಲಾ ಮಾಹಿತಿ ಇರಬೇಕು. ಕೇಂದ್ರ ನಕಲಿ ಎಂದು ಫಿಲ್ಟರ್ ಮಾಡಿದ ಮಾಹಿತಿಯಷ್ಟೇ ಅಲ್ಲ" ಎಂದು ಅವರು ಹೇಳಿದರು. ಸರ್ಕಾರದ ಅಂಗವಾದ ಪಿಐಬಿ ಸತ್ಯ ಪರಿಶೀಲನಾ ಘಟಕವಾಗಿರುವುದು ಅತಿ ದೊಡ್ಡ ವ್ಯಂಗ್ಯ ಎಂದು ಅವರು ನುಡಿದರು.

ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪರವಾಗಿ ಹಾಜರಾದ ವಕೀಲ ಶದಾನ್ ಫರಾಸತ್, ಯಾವುದೇ ವಿಚಾರವನ್ನು ನಿಜವೇ ಅಲ್ಲವೇ ಎಂದು ಸರ್ಕಾರತ ನಿರ್ದೇಶಿಸುತ್ತದೆ. ಇದು ಸಂವಿಧಾನದ 19 (1) (ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು) ವಿಧಿಯ ಉಲ್ಲಂಘನೆ ಎಂದರು.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ ಎಫ್‌ಸಿಯು ರಚನೆಗೆ ಇದು ಸಕಾಲವಲ್ಲ ಎಂದು ಅವರು ವಾದಿಸಿದರು. ಎಫ್‌ಸಿಯು ಜಾರಿಗೆ ಬಂದರೆ ತನಿಖಾ ಪತ್ರಕರ್ತರು ಹೇಗೆ ಕೆಲಸ ಮಾಡಲು ಸಾಧ್ಯ. ಕೇಂದ್ರ ಉಳಿದೆಲ್ಲಾ ಧ್ವನಿಗಳನ್ನು ಹತ್ತಿಕ್ಕಲಿದೆ. ಇದು ಕೇಂದ್ರ ಮತ್ತು ರಾಜ್ಯಗಳ ನಡುವಿನ ವಿವಾದಿತ ಪ್ರಶ್ನೆಯ ಮೇಲೂ ಪರಿಣಾಮ ಬೀರುತ್ತದೆ. ಈಗ ಇವುಗಳ ಸ್ಥಾಪನೆಗೆ ಮುಂದಾಗಿರುವುದ ಸರಿ ಅಲ್ಲವೇ ಅಲ್ಲ ಎಂದರು.

ಆದರೆ ಕೇಂದ್ರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸಾಮಾಜಿಕ ಮಾಧ್ಯಮ ಅನಿಯಂತ್ರಿತವಾಗಿದ್ದು ಗಡಿಯಾಚೆಗೂ ವ್ಯಾಪಿಸಿದೆ ಎಂದು ತಿಳಿಸಿದರು. ನಿಯಮಾವಳಿ ಜಾರಿಯಿಂದ ಆಗಲಿರುವ ಅನುಕೂಲಗಳನ್ನು ವಿವರಿಸಿದರು.

ಒಂದು ಹಂತದಲ್ಲಿ ಸಿಜೆಐ ಅವರು ಸತ್ಯ ಸಾಬೀತುಪಡಿಸುವುದು ಮಧ್ಯವರ್ತಿಗಳ ಹೊಣೆಯೇ ಎಂದು ಪ್ರಶ್ನಿಸಿದಾಗ ಎಸ್‌ ಜಿ ಮೆಹ್ತಾ ಹೌದು ಎಂದು ಉತ್ತರಿಸಿದರು. "ಇದು ಸರ್ಕಾರಿ ವ್ಯವಹಾರಗಳಿಗೆ ಮಾತ್ರ ಸೀಮಿತ. ಯಾರಾದರೂ ಪ್ರಧಾನಿಯನ್ನು ಟೀಕಿಸುವುದು ಇದರ ಅಡಿಯಲ್ಲಿ ಬರುವುದಿಲ್ಲ" ಎಂದು ಅವರು ಹೇಳಿದರು.

Related Stories

No stories found.
Kannada Bar & Bench
kannada.barandbench.com