ಕ್ರೀಡಾ ಕೋಟಾದಲ್ಲಿ ಸೀಟು ಪಡೆಯಲು ಮಂಡಳಿ ಪರೀಕ್ಷೆಯಲ್ಲಿ ಶೇ 75 ಅಂಕ ಪಡೆಯಬೇಕು ಎಂಬ ಮಾನದಂಡ ರದ್ದುಪಡಿಸಿದ ಸುಪ್ರೀಂ
ಕ್ರೀಡಾ ಕೋಟಾದಡಿ ಮೀಸಲಾತಿ ಪಡೆಯಲು ಶೇಕಡವಾರು ಹೆಚ್ಚು ಅಂಕಗಳನ್ನು ಪಡೆಯಬೇಕು ಎಂದು ಹೇಳುವುದು ಅದರ ಮೂಲ ಉದ್ದೇಶವನ್ನೇ ಸೋಲಿಸುತ್ತದೆ ಎಂದು ಈಚೆಗೆ ಸುಪ್ರೀಂ ಕೋರ್ಟ್ ಹೇಳಿದೆ [ದೇವ್ ಗುಪ್ತಾ ವರ್ಸಸ್ ಪಿಇಸಿ ತಂತ್ರಜ್ಞಾನ ವಿಶ್ವವಿದ್ಯಾಲಯ ಮತ್ತು ಇತರರು].
“ಶಿಕ್ಷಣ ಸಂಸ್ಥೆಗಳ ಪ್ರವೇಶದಲ್ಲಿ ಕ್ರೀಡಾ ಕೋಟಾ ಸೇರ್ಪಡೆ ಮಾಡಿರುವುದು ದೇಶದಲ್ಲಿ ಕ್ರೀಡೆ ಮತ್ತು ಕ್ರೀಡಾ ಮನೋಭಾವವನ್ನು ಉತ್ತೇಜಿಸಲು” ಎಂದು ನ್ಯಾಯಮೂರ್ತಿಗಳಾದ ಎಸ್ ರವೀಂದ್ರ ಭಟ್ ಮತ್ತು ಅರವಿಂದ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.
“ಕ್ರೀಡಾ ಕೋಟಾದಡಿ ಅರ್ಹತೆ ಪಡೆಯಲು ಶೇ 75ರಷ್ಟು ಅಂಕ ಪಡೆಯಬೇಕು ಎಂದು ಷರತ್ತು ವಿಧಿಸುವುದು ಕ್ರೀಡಾ ಕೋಟಾ ಜಾರಿ ಮಾಡಿರುವುದರ ಉದ್ದೇಶವನ್ನು ಈಡೇರಿಸುವುದಿಲ್ಲ. ಬದಲಿಗೆ ಇದು ಅದಕ್ಕೆ ಹಾನಿ ಮಾಡುತ್ತದೆ; ಈ ಮಾನದಂಡವು ಇಡೀ ಉದ್ದೇಶಕ್ಕೆ ಹೊಡೆತ ನೀಡಲಿದ್ದು, ತಾರತಮ್ಯದಿಂದ ಕೂಡಿದೆ; ಇದು ಸಂವಿಧಾನದ 14ನೇ ವಿಧಿಯಡಿ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ” ಎಂದು ಹೇಳಿದೆ.
ಪಂಜಾಬ್ ಮತ್ತು ಹರಿಯಾಣ ನ್ಯಾಯಾಲಯವು ಶೇ. 75ರಷ್ಟು ಅಂಕಗಳ ಅರ್ಹತಾ ಮಾನದಂಡ ಪ್ರಶ್ನಿಸಿದ್ದ ಅರ್ಜಿಯನ್ನು ವಜಾ ಮಾಡಿತ್ತು. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದೆ. ಮಾನದಂಡ ಘೋಷಣೆ ಮಾಡಿದ ಮೂರು ದಿನಗಳ ನಂತರ ಮೇಲ್ಮನವಿದಾರರು ಜೂನ್ 27ರಂದು ಸಂಬಂಧಿತ ಪ್ರಾಧಿಕಾರಕ್ಕೆ ಪತ್ರ ಬರೆದು ಶೇ. 75ರಷ್ಟು ಅಂಕ ವಿಧಿಸಿರುವ ಮಾನದಂಡವು ಹೆಚ್ಚಾಯಿತು ಎಂದು ಆಕ್ಷೇಪಿಸಿದ್ದರು. ಇದನ್ನು ಪುರಸ್ಕರಿಸದ ಹಿನ್ನೆಲೆಯಲ್ಲಿ ಹೈಕೋರ್ಟ್ ಕದ ತಟ್ಟಿದ್ದರು. ಅದು ಅರ್ಜಿದಾರರ ಮನವಿಗೆ ಕಿವಿಗೊಡದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಲಾಗಿತ್ತು.